More

    ಕಾರಿಡಾರ್ ಅಭಿವೃದ್ಧಿಗೆ ಆದ್ಯತೆ ಕೊಡಿ

    ಹುಬ್ಬಳ್ಳಿ: ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಅಡ್ಡಿಯಾಗಿರುವ ಅಂಶಗಳನ್ನು ಪರಿಹರಿಸಬೇಕು, ಬೇಲೆಕೇರಿ ಬಂದರು ಆರಂಭ, ಬೆಂಗಳೂರು-ಮುಂಬೈ ಆರ್ಥಿಕ ಕಾರಡಾರ್​ನ ಅಭಿವೃದ್ಧಿಗೆ ಆದ್ಯತೆ, ತೆರಿಗೆ ನೀತಿ ಪರಿಷ್ಕರಣೆ, ವಿಮಾ ವಲಯದವರಿಗೆ ವಿಧಿಸುತ್ತಿರುವ ಜಿಎಸ್​ಟಿ ಕಡಿತ…

    ಇಲ್ಲಿನ ಜೆ.ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಕೇಂದ್ರ ಬಜೆಟ್ ಪೂರ್ವ ಪ್ರಸ್ತಾವನೆಗಳ ಕುರಿತು ಆರ್ಥಿಕ ತಜ್ಞರು ಮತ್ತು ಸಾರ್ವಜನಿಕರೊಂದಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಸಂವಾದ ಕಾರ್ಯಕ್ರಮದಲ್ಲಿ ಮೂಡಿಬಂದ ಅಭಿಪ್ರಾಯಗಳಿವು.

    ಕೆಸಿಸಿಐ ಅಧ್ಯಕ್ಷ ಮಹೇಂದ್ರ ಲದ್ದಡ, ರೈಲ್ವೆಗೆ ಸಂಬಂಧಿಸಿದ ಹಲವು ಯೋಜನೆ ಜಾರಿ, ನೂತನ ರೂಪುರೇಷೆಗಳ ಚಿತ್ರಣ ನೀಡಿದರು. ಇದಕ್ಕೆ ಸಮ್ಮತಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರೈಲ್ವೆ ಯೋಜನೆ ಹೊರತಾಗಿ ಮತ್ತಿತರ ಮಾಹಿತಿ ನೀಡುವಂತೆ ಸಭೆಗೆ ವಿನಂತಿಸಿದರು.

    ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿ ವೇದಿಕೆಯ ಎಂ.ವಿ. ಕರಮರಿ ಮಾತನಾಡಿ, ಬೆಂಗಳೂರು-ಮುಂಬೈ ಆರ್ಥಿಕ ಕಾರಿಡಾರ್ ಅಭಿವೃದ್ಧಿಯಿಂದ ಈ ಭಾಗದ ಯುವಕರಿಗೆ ಉದ್ಯೋಗ ಸಿಗಲಿದೆ. ಹುಬ್ಬಳ್ಳಿಯಲ್ಲಿಯೇ ಮುಖ್ಯ ಕಚೇರಿ ಆರಂಭಿಸಬೇಕು. ಸಾಮಾಜಿಕ, ಆರ್ಥಿಕಾಭಿವೃದ್ಧಿಗೆ ಪೂರಕ ಅಂಶಗಳನ್ನು ಬಜೆಟ್​ನಲ್ಲಿ ಸೇರಿಸಿ ಎಂದು ಕೋರಿದರು.

    ರೈಲ್ವೆ ಇಲಾಖೆಯಲ್ಲಿ ಸ್ಟಾರ್ಟ್​ಅಪ್​ಗಳಿಗೆ ಉತ್ತೇಜನ ನೀಡುವ ಪೂರಕ ಯೋಜನೆಗಳನ್ನು ಅಳವಡಿಸಬೇಕು. ಸಾಫ್ಟ್​ವೇರ್, ಇಲೆಕ್ಟ್ರಾನಿಕ್ಸ್ ಸ್ಟಾರ್ಟ್​ಅಪ್​ಗಳು ನವೋದ್ಯಮಿಗಳ ಬೆಳವಣಿಗೆಗೆ ಪೂರಕವಾಗಲಿವೆ ಎಂದು ದೇಶಪಾಂಡೆ ಫೌಂಡೇಷನ್ ಸಿಇಒ ವಿವೇಕ ಪವಾರ್ ಪ್ರಸ್ತಾಪಿಸಿದರು.

    ರಾಜ್ಯ ಸರ್ಕಾರದ ಮೂಲಕ ಪ್ರಸ್ತಾವನೆ ಸಲ್ಲಿಸಿ ಮೇಕ್ ಇನ್ ಇಂಡಿಯಾ ಹಾಗೂ ಸ್ಟಾರ್ಟ್​ಅಪ್ ಯೋಜನೆ ಅಡಿ ಹೊಸತನ್ನು ರೂಪಿಸೋಣ ಎಂದು ಸಚಿವ ಜೋಶಿ ಹೇಳಿದರು.

    ವಿಆರ್​ಎಲ್ ಲಾಜಿಸ್ಟಿಕ್ಸ್ ಸಿಎಫ್​ಒ ಸುನೀಲ ನಲವಡೆ ಮಾತನಾಡಿ, ದೃಢೀಕತ ಬಿಲ್ ಸ್ವೀಕಾರ ಹಾಗೂ ಜಿಎಸ್​ಟಿಯೊಳಗಿನ ಕೆಲ ತಾರತಮ್ಯ ಸರಿಪಡಿಸಬೇಕು ಎಂದರು. ಕ್ಷಮತಾ ಸಂಸ್ಥೆಯ ಗೋವಿಂದ ಜೋಶಿ, ಬೇರೆ ಬೇರೆ ಇನ್ಶೂರೆನ್ಸ್​ಗಳ ಮೇಲೆ ಶೇ. 18ರಷ್ಟು ಜಿಎಸ್​ಟಿ ವಿಧಿಸಲಾಗುತ್ತಿದೆ. ಇದನ್ನು ಕಡಿತಗೊಳಿಸಬೇಕು ಎಂದು ಕೋರಿದರು.

    ಲೆಕ್ಕಪರಿಶೋಧಕ ಎನ್.ಎ. ಚರಂತಿಮಠ ಮಾತನಾಡಿ, ಇದುವರೆಗೆ 8 ಕೋಟಿ ತೆರಿಗೆ ಪಾವತಿದಾರರು ಇದ್ದಾರೆ. ಹೊಸ ತೆರಿಗೆದಾತರನ್ನು ಸೃಜಿಸುವ ಕೆಲಸವಾಗಬೇಕು. 25 ಕೋಟಿ ಜನರಾದರೂ ತೆರಿಗೆ ಪಾವತಿಸುವಂಥ ಕ್ರಮವನ್ನು ಕೇಂದ್ರ ಕೈಗೊಳ್ಳಬೇಕು ಎಂದರು.

    ಉದ್ಯಮಿ ಸಮೀರ್ ಓಸ್ವಾಲ್- ತೆರಿಗೆದಾತರಿಗೆ ಹಿಂಸೆ ನೀಡಲಾಗುತ್ತಿದೆ. ಹಿಂಸೆ ನೀಡುವವರ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಲ್ಹಾದ ಜೋಶಿ, ಹೊಸ ತೆರಿಗೆ ನೀತಿ ರೂಪಿಸಲಾಗಿದೆ. ದೈಹಿಕ, ಮಾನಸಿಕ ಹಿಂಸೆ, ಹಲ್ಲೆಗಳಾಗಿದ್ದರೆ ದೂರು ಕೊಡಿ. ಕ್ರಮ ಜರುಗಿಸಲಾಗುವುದು ಎಂದು ಧೈರ್ಯ ತುಂಬಿದರು.

    ಶಾಸಕ ಅರವಿಂದ ಬೆಲ್ಲದ, ಎಂಎಲ್​ಸಿಗಳಾದ ಎಸ್.ವಿ. ಸಂಕನೂರ, ಪ್ರದೀಪ ಶೆಟ್ಟರ್, ಜಿಲ್ಲಾಧಿಕಾರಿ ದೀಪಾ ಚೋಳನ್, ವಾಕರಸಾಸಂಸ್ಥೆ ಎಂ.ಡಿ. ರಾಜೇಂದ್ರ ಚೋಳನ್, ಜಿಪಂ ಸಿಇಒ ಡಾ.ಬಿ.ಸಿ. ಸತೀಶ, ಆದಾಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಮ್ಯಾಥ್ಯೂ, ನೈಋತ್ಯ ರೈಲ್ವೆ ವಲಯ ಎಡಿಜಿಎಂ ಎ.ಕೆ. ಮಿಶ್ರಾ, ಕೆಸಿಸಿಐನ ಅಶೋಕ ಗಡಾದ ಇತರರು ಇದ್ದರು.

    ಪ್ರಸ್ತಾವಿತ ಪ್ರಮುಖ ವಿಷಯಗಳು

    * ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಅಡ್ಡಿಯಾಗಿರುವ ಅಂಶಗಳ ಪರಿಹಾರ

    * ಬೇಲೆಕೇರಿ ಬಂದರು ಆರಂಭ

    * ವಿಮಾ ವಲಯದವರಿಗೆ ವಿಧಿಸುತ್ತಿರುವ ಜಿಎಸ್​ಟಿ ಕಡಿತ

    * ಮಂಗಳೂರು-ವಿಜಯಪುರ ರೈಲು ಸಂಚಾರ ಕಾಯಂ

    * ಧಾರವಾಡ-ಬೆಳಗಾವಿಗೆ ಹೊಸ ರೈಲ್ವೆ ಲೈನ್

    * ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢರ ಹೆಸರಿಡಬೇಕು

    * ಗ್ರಾಮೀಣ ಬ್ಯಾಂಕ್​ಗಳಿಗೆ ವಿಧಿಸುತ್ತಿರುವ ತೆರಿಗೆ ವ್ಯತ್ಯಾಸ ಬೇಡ

    * ಸಹಕಾರಿ ರಂಗದ ಉತ್ತೇಜನಕ್ಕೆ ಕ್ರಮ ಜರುಗಿಸಿ

    * ಅವಳಿ ನಗರದಲ್ಲಿ ಶೈಕ್ಷಣಿಕ ಕ್ಷೇತ್ರ ಉತ್ತೇಜನಕ್ಕೆ ಹೂಡಿಕೆ ಇರಲಿ

    * ಧಾರವಾಡದ ಕೆಲವೆಡೆ ರೈಲ್ವೆ ಮೇಲ್ಸೇತುವೆ ನಿರ್ಮಾಣ

    * ಕೃಷಿ ಕ್ಷೇತ್ರದ ಉತ್ತೇಜನಕ್ಕೆ ಕ್ರಮ

    * ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸೌಲಭ್ಯ

    ಉದ್ಯೋಗ ಸೃಜನೆಗೆ ಉತ್ತೇಜನ

    ಭಾರತವನ್ನು 5 ಟ್ರಿಲಿಯನ್ ಅರ್ಥವ್ಯವಸ್ಥೆಗೆ ತಲುಪಿಸುವ ನಿಟ್ಟಿನಲ್ಲಿ ಅನೇಕ ಆರ್ಥಿಕ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ಮೂಲ ಸೌಲಭ್ಯಕ್ಕೆ 1 ಲಕ್ಷ ಕೋಟಿ ರೂ., 10 ವರ್ಷ ರೈಲ್ವೆ ಅಭಿವೃದ್ಧಿಗೆ 15 ಲಕ್ಷ ಕೋಟಿ ರೂ. ಯೋಜನೆ ರೂಪಿಸಲಾಗಿದೆ. ಕೃಷಿ ಮೇಲಿನ ಉದ್ಯೋಗ ಅವಲಂಬನೆ ಕಡಿಮೆ ಹಾಗೂ ಇತರೆ ಕ್ಷೇತ್ರದಲ್ಲಿ ಉದ್ಯೋಗ ಸೃಜನೆಗೆ ಉತ್ತೇಜನ ನೀಡಲಾಗುತ್ತಿದೆ. ಸಭೆಯಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಕೇಂದ್ರ ಸಚಿವರಿಗೆ ತಲುಪಿಸಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

    ಜಿಎಸ್​ಟಿ ತೆರಿಗೆಯು ಸರಳ ಮತ್ತು ಸುಲಭ ವಿಧಾನವೆಂಬುದು ಬಹುತೇಕ ಲೆಕ್ಕಪರಿಶೋಧಕರ ಅಭಿಪ್ರಾಯ. 60 ದಿನಗಳಲ್ಲಿ ಜಿಎಸ್​ಟಿ ಮರುಪಾವತಿ ಮಾಡಲಾಗುವುದು ಎಂದು ಸಂಕ್ಷಿಪ್ತವಾಗಿ ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts