More

    ಕಲ್ಲು ಗಣಿಗಾರಿಕೆಗೆ ಇಲ್ಲ ಲಂಗುಲಗಾಮು

    ಧಾರವಾಡ: ಜಿಲ್ಲೆಯಲ್ಲಿ ನಡೆಯುತ್ತಿರುವ ಕ್ರಷರ್ ಘಟಕಗಳಿಗೆ ಲಂಗುಲಗಾಮು ಇಲ್ಲದಂತಾಗಿದೆ. ಸಾಕಷ್ಟು ನಿಯಮ ವಿಧಿಸಿ ಅನುಮತಿ ನೀಡಿದ್ದರೂ, ಘಟಕಗಳು ನಿಯಮಗಳನ್ನು ಗಾಳಿಗೆ ತೂರಿ ಪರಿಸರ, ರೈತರ ಜಮೀನುಗಳಿಗೆ ಮಾರಕವಾಗುತ್ತಿವೆ.

    ಜಿಲ್ಲೆಯಲ್ಲಿ ರಾಮಾಪುರ, ಮಂಡಿಹಾಳ, ಮುಗದ, ವರವ ನಾಗಲಾವಿ, ಅಮ್ಮಿನಭಾವಿ, ಚಂದನಮಟ್ಟಿ, ಎಮ್ಮೆಟ್ಟಿ, ಗಂಭ್ಯಾಪುರ, ಲಿಂಗನಕೊಪ್ಪ ಹಾಗೂ ಇತರೆಡೆ ಒಟ್ಟು 74 ಸ್ಟೋನ್ ಕ್ರಷರ್ ಘಟಕಗಳಿವೆ. ಸರ್ಕಾರದ ದಾಖಲೆಗಳ ಪ್ರಕಾರ ಅನಧಿಕೃತ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಆದರೆ ಅಧಿಕೃತ ಎನ್ನುವ ಘಟಕಗಳು ಷರತ್ತುಗಳನ್ನು ಪಾಲಿಸುತ್ತಿಲ್ಲ ಎನ್ನುವ ಕೂಗು ರೈತರದ್ದು.

    ಬರಡಾಗುತ್ತಿದೆ ಭೂಮಿ: ವರ್ಷಕ್ಕೆರಡು ಬೆಳೆ ಬೆಳೆಯುವ ರೈತರು ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಬಾರದು ಎಂದು ಹೋರಾಟ ಮಾಡಿದ್ದರು. ಆದಾಗ್ಯೂ ಅನುಮತಿ ಪಡೆದಿರುವ ಮಾಲೀಕರು ಎಗ್ಗಿಲ್ಲದೆ ಭೂಮಿಯ ಒಡಲು ಬಗೆಯುತ್ತಿದ್ದಾರೆ. ಕಪ್ಪು ಬಂಡೆಗಳನ್ನು ಅಗೆದು ಖಡಿ, ಪುಡಿ ಹಾಗೂ ಎಂ ಸ್ಯಾಂಡ್ ಮಾಡಿ ಕೋಟಿಗಟ್ಟಲೆ ಹಣ ಗಳಿಸುತ್ತಿದ್ದಾರೆ. ಘಟಕಗಳಿಂದ ಹೊರಸೂಸುವ ಧೂಳು ಪಕ್ಕದ ಜಮೀನುಗಳಿಗೆ ಮಾರಕವಾಗಿ ಪರಿಣಮಿಸುತ್ತಿದೆ. ಬೆಳೆಗಳ ಮೇಲೆ ಧೂಳು ಆವರಿಸಿ ಜೋಳ, ಗೋವಿನಜೋಳ, ಭತ್ತ, ಹೆಸರು, ಮಾವು, ಸೋಯಾಬಿನ್ ಮತ್ತಿತರ ಬೆಳೆಗಳಿಗೆ ಹಾನಿಯಾಗುತ್ತಿದೆ.

    ರಾಜಕೀಯ ಒತ್ತಡ: ನಿಯಮ ಉಲ್ಲಂಘಿಸುವ ಮಾಲೀಕರು ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡದ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ದಾಳಿಯಾಗದಂತೆ ತಡೆಯುವ ಮೂಲಕ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ರಾಜಕೀಯ ಪ್ರಭಾವಿಗಳೇ ಜಿಲ್ಲೆಯ ಬಹುತೇಕ ಘಟಕಗಳ ಮಾಲೀಕರಾಗಿದ್ದಾರೆ. ಹುಳುಕು ಮುಚ್ಚಿಕೊಳ್ಳಲು ಜಿಲ್ಲಾ ಮಟ್ಟದ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕೈಕಟ್ಟಿ ಹಾಕಿದ್ದಾರೆ.

    ದಂಡವಿಲ್ಲ… ದಾಳಿ ಇಲ್ಲ: ಜಿಲ್ಲಾಧಿಕಾರಿ ಸ್ಟೋನ್ ಕ್ರಷರ್ಸ್ ಲೈಸೆನ್ಸಿಂಗ್ ಆಂಡ್ ರೆಗ್ಯುಲೇಶನ್ ಅಥಾರಿಟಿ ಚೇರ್ಮನ್ ಆಗಿದ್ದು, ಗಣಿ ಮತ್ತು ಭೂವಿಜ್ಞಾನ, ಪರಿಸರ, ಕಂದಾಯ, ಪೊಲೀಸ್ ಇಲಾಖೆಗಳ ಅಧಿಕಾರಿಗಳು ಸಮಿತಿಯಲ್ಲಿದ್ದಾರೆ. ರೈತರಿಂದ ದೂರು ಬಂದ ಹಿನ್ನೆಲೆಯಲ್ಲಿ ಹಿಂದಿನ ಜಿಲ್ಲಾಧಿಕಾರಿ ರಾಜೇಂದ್ರ ಚೋಳನ್ ಸ್ಟೋನ್ ಕ್ರಷರ್ ಘಟಕಗಳ ಮೇಲೆ ದಾಳಿ ಮಾಡಿದ್ದನ್ನು ಬಿಟ್ಟರೆ ಬೇರಾವ ಅಧಿಕಾರಿಗಳು ದಿಟ್ಟ ಕ್ರಮ ಜರುಗಿಸಿಲ್ಲ.

    ಸೇಫ್ ಜೋನ್ ಎಲ್ಲಿ?: ಕಲ್ಲು ಗಣಿಗಾರಿಕೆಗೆ ಸುರಕ್ಷಿತ ವಲಯ ನಿರ್ವಿುಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶವಿದೆ. ಮಾಲೀಕರು ಒಂದೇ ಕಡೆ ಘಟಕಗಳನ್ನು ನಡೆಸಬೇಕು. ನೀರಸಾಗರ ಡ್ಯಾಂ ಸಮೀಪವೇ 3 ಘಟಕಗಳು ಭೂಮಿ ಅಗೆಯುತ್ತಿವೆ. ರಿಗ್ ಬ್ಲಾಸ್ಟಿಂಗ್​ನಿಂದ ಭೂಮಿ ಅದುರುತ್ತಿದ್ದು, ನೆಲದಡಿ ವೈಬ್ರೇಷನ್ ಉಂಟಾಗುತ್ತಿದೆ. ಅನುಮತಿ ಅವಧಿ ಮುಗಿದ ಘಟಕಗಳು ದೊಡ್ಡ ಕ್ವಾರಿಗಳಾಗಿವೆ. ಮಳೆ ನೀರು ಭರ್ತಿಯಾಗಿ ಜಾನುವಾರು, ಪ್ರಾಣಹಾನಿಗೆ ಆಹ್ವಾನಿಸುತ್ತಿವೆ.

    ಜಿಲ್ಲೆಯಲ್ಲಿ ಅನಧಿಕೃತ ಸ್ಟೋನ್ ಕ್ರಷರ್ ಘಟಕಗಳಿಲ್ಲ. ಕ್ರಷರ್ ಘಟಕಗಳ ಆರಂಭಕ್ಕೆ ಹಲವು ಷರತ್ತುಗಳನ್ನು ವಿಧಿಸಲಾಗಿರುತ್ತದೆ. ನಿಯಮ ಉಲ್ಲಂಘಿಸುತ್ತಿರುವ ಘಟಕಗಳ ಪಟ್ಟಿ ಮಾಡಲಾಗುವುದು. ಕಂದಾಯ, ಪೊಲೀಸ್ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದೊಂದಿಗೆ ದಾಳಿ ಮಾಡಲಾಗುವುದು. ಸುರಕ್ಷತಾ ಕ್ರಮ ಕೈಗೊಳ್ಳದಿದ್ದರೆ ಶಿಸ್ತು ಕ್ರಮ ಜರುಗಿಸಲಾಗುವುದು. | ಕೆ. ಚಂದ್ರಶೇಖರ ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts