More

    ಕರಗಿದ ಉಪ್ಪು ಮತ್ತು ಕರಗದ ಮುತ್ತು

    ಮುತ್ತೂ ನೀರಲಾಯಿತ್ತು,

    ವಾರಿಕಲ್ಲೂ ನೀರಲಾಯಿತ್ತು,

    ಉಪ್ಪೂ ನೀರಲಾಯಿತ್ತು;

    ಉಪ್ಪು ಕರಗಿತ್ತು,

    ವಾರಿಕಲ್ಲೂ ಕರಗಿತ್ತು,

    ಮುತ್ತು ಕರಗಿದುದನಾರೂ ಕಂಡವರಿಲ್ಲ.

    ಈ ಸಂಸಾರಿ ಮಾನವರು

    ಲಿಂಗವ ಮುಟ್ಟಿ ಭವಭಾರಿಗಳಾದರು;

    ನಾ ನಿಮ್ಮ ಮುಟ್ಟಿ ಕರಿಗೊಂಡೆನಯ್ಯ

    ಚೆನ್ನಮಲ್ಲಿಕಾರ್ಜುನಯ್ಯ.

    ಪ್ರಸ್ತುತ ವಚನ ದೃಷ್ಟಾಂತವೊಂದನ್ನು ಮುಂದಿಡುತ್ತಿದೆ. ಆ ದೃಷ್ಟಾಂತದ ಮೂಲಕವೇ ಒಂದು ಪ್ರತಿಪಾದನೆಯೂ ಇದೆ.

    ಮೊದಲಿಗೆ ವಚನ ಲೋಕಸಾಧಾರಣ ಸನ್ನಿವೇಶವೊಂದನ್ನು ನಿರೂಪಿಸುತ್ತಿದೆ. ಇಲ್ಲಿ ಮುತ್ತು, ವಾರಿಕಲ್ಲು (ಮಂಜುಗಡ್ಡೆ) ಮತ್ತು ಉಪ್ಪುಗಳ ಪ್ರಸ್ತಾವವಿದೆ. ವಚನವು ಹೇಳುವಂತೆ ಈ ಮೂರು ವಸ್ತುಗಳೂ ನೀರಿನ ಮೂಲದವೇ ಆಗಿವೆ. ಹೀಗೆ ಒಂದೇ ಮೂಲವನ್ನು ಹಂಚಿಕೊಂಡರೂ ಅವುಗಳ ಗುಣಲಕ್ಷಣಗಳು ಬೇರೆಯಾಗಿರುವುದು ಇಲ್ಲಿ ವಚನಕ್ಕೆ ಮುಖ್ಯವಾಗುತ್ತದೆ. ಅಲ್ಲದೆ ಇದೇ ಅದರ ಪ್ರತಿಪಾದನೆಯ ಪ್ರಾರಂಭದ ಬಿಂದುವೂ ಆಗಿದೆ. ಇವೆಲ್ಲವುಗಳ ‘ಆಗುವಿಕೆ’ ಒಂದೇ ಬಗೆಯಲ್ಲಾದರೂ ಆ ಬಳಿಕ, ‘ಉಪ್ಪು ಕರಗಿತ್ತು, ವಾರಿಕಲ್ಲೂ ಕರಗಿತ್ತು, ಮುತ್ತು ಕರಗಿದುದನಾರೂ ಕಂಡವರಿಲ್ಲ’. ‘ಆಗುವಿಕೆ’ಯ ಅನಂತರದ ‘ಕರಗುವಿಕೆ’ ಇಲ್ಲಿ ಮುನ್ನೆಲೆಗೆ ಬರುತ್ತದೆ. ಆದವುಗಳ ಬೆಲೆಯನ್ನು ಇಲ್ಲಿ ಕರಗುವಿಕೆ ಅಥವಾ ಕರಗದಿರುವಿಕೆಯ ಮೂಲಕ ನಿರ್ಧರಿಸಲಾಗುತ್ತಿದೆ. ಹೀಗಾಗಿ ಇಲ್ಲಿ ಉಪ್ಪು, ವಾರಿಕಲ್ಲುಗಳಿಗಿಂತ ಮುತ್ತು ಬೇರೆಯಾಗುತ್ತದೆ. ಇಲ್ಲಿಯ ನಿರೂಪಣೆಯ ವಿಧಾನಕ್ಕೆ ಒಂದು ರ್ತಾಕ ವಾದದ ಸ್ವರೂಪವೂ ಇರುವುದನ್ನು ಗಮನಿಸಬೇಕು. ಮೊದಲಿಗೆ ಮುತ್ತು – ವಾರಿಕಲ್ಲು – ಉಪ್ಪುಗಳ ಅನುಕ್ರಮದಲ್ಲಿ ಉಲ್ಲೇಖಗೊಳ್ಳುವುದು ಅನಂತರದಲ್ಲಿ ಉಪ್ಪು – ವಾರಿಕಲ್ಲು – ಮುತ್ತುಗಳ ಅನುಕ್ರಮಕ್ಕೆ ಹೊರಳುತ್ತದೆ. ಹೀಗೆ ಇವುಗಳನ್ನು ಉಲ್ಲೇಖಿಸುವ ಗತಿಯಲ್ಲೇ ನಿರ್ಣಯವೊಂದು ಕೂಡ ನಿಷ್ಪನ್ನವಾಗುತ್ತಿದೆ. ಹೀಗಾಗಿ ‘ಮುತ್ತು ಕರಗಿದುದನಾರೂ ಕಂಡವರಿಲ್ಲ’ ಎಂಬ ಮಾತು ವಾಸ್ತವಸಂಗತಿಯೊಂದರ ನಿರೂಪಣೆ ಮಾತ್ರವಾಗದೆ ‘ಎಲ್ಲರೂ’ ಒಪ್ಪಬೇಕಾದ ನಿರ್ಣಯವೂ ಆಗಿ ಪರಿಣಮಿಸುತ್ತದೆ.

    ಕರಗಿದ ಉಪ್ಪು ಮತ್ತು ಕರಗದ ಮುತ್ತುಈ ತರ್ಕಭಾರದ ಮೇಲೆ ಮುಂದಿನ ನಿರೂಪಣೆ ಪ್ರಾರಂಭವಾಗುತ್ತದೆ. ಇಲ್ಲಿ ‘ಸಂಸಾರಿ ಮಾನವರ’ ಉಲ್ಲೇಖವಿದೆ. ಇವರು ‘ಲಿಂಗವ ಮುಟ್ಟಿ’ದವರೂ ಆಗಿದ್ದಾರೆ. ಆದರೆ ಅದರೊಂದಿಗೇ ‘ಭವಭಾರಿ’ಗಳೂ ಆಗಿದ್ದಾರೆ. ಇದರ ವೈದೃಶ್ಯದಲ್ಲಿ ವಚನದ ನಿರೂಪಕಿ ಮಾತ್ರ ‘ನಾ ನಿಮ್ಮ ಮುಟ್ಟಿ ಕರಿಗೊಂಡೆನಯ್ಯ ಚೆನ್ನಮಲ್ಲಿಕಾರ್ಜುನಯ್ಯ’ ಎಂದಿದ್ದಾಳೆ.

    ವಚನದ ದೃಷ್ಟಾಂತ ಇಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ನೀರಿನಿಂದಲೇ ಆದ ವಾರಿಕಲ್ಲು-ಉಪ್ಪುಗಳು ನೀರಿನಲ್ಲಿ ಕರಗುತ್ತವೆ; ಆದರೆ ಮುತ್ತು ಕರಗದೆ ಗಟ್ಟಿಯಾಗುತ್ತದೆ. ಲಿಂಗವನ್ನು ಮುಟ್ಟಿದವರಾದರೂ ಸಂಸಾರಿ ಮಾನವರು ಭವಭಾರಿಗಳಾಗುತ್ತಾರೆ; ಮುಟ್ಟಿದ ನಿರೂಪಕಿ ಮಾತ್ರ ಕರಿಗೊಳ್ಳುತ್ತಾಳೆ (ಕರಿಗೊಳ್ಳು = ಗಟ್ಟಿಯಾಗು, ಸಾಂದ್ರವಾಗು, ಸಾರಭೂತವಾಗು.)

    ಇಲ್ಲಿ ವಚನವು ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಕೆಲವು ಮೂಲಭೂತ ಪ್ರಶ್ನೆಗಳನ್ನು ಮುಂದಿಡುತ್ತಿದೆ. ಅವು ಸಂಸರ್ಗ ಹಾಗೂ ಅದರ ಪರಿಣಾಮದ ಸಾಧ್ಯತೆಗಳಿಗೆ ಸಂಬಂಧಿಸಿದುವಾಗಿವೆ. ನಿರ್ದಿಷ್ಟವಾಗಿ ಹೇಳುವುದಾದರೆ, ಅವು ಧಾರ್ವಿುಕ ಸನ್ನಿವೇಶದ ಆಗುಹೋಗುಗಳಿಗೆ ಸಂಬಂಧಿಸಿದುವಾಗಿವೆ.

    ‘ಲಿಂಗವನ್ನು ಮುಟ್ಟುವುದು’ ಎಂಬ ಕ್ರಿಯೆಯನ್ನು ವಚನವು ತನ್ನ ಮಂಡನೆಯಲ್ಲಿ ಮುನ್ನೆಲೆಗೆ ತರುತ್ತಿದೆ. ಈ ‘ಮುಟ್ಟುವ’ ಕ್ರಿಯೆಯೊಂದೇ ತನ್ನ ಸರ್ವಸಾಧಾರಣವಾದ ಗ್ರಹಿಕೆಯಲ್ಲಿ ಧಾರ್ವಿುಕ ಕ್ರಿಯೆಯೆಂದು ಪರಿಗಣಿತವಾಗಿಬಿಡುತ್ತದೆ. ಇದು ಸಾಮಾಜಿಕವಾಗಿ ಒಪ್ಪಿತವಾಗಿರುವ ಒಂದು ಧಾರ್ವಿುಕತೆಯೂ ಆಗಿದೆ. ಈ ಧಾರ್ವಿುಕತೆ ‘ಸಂಸರ್ಗ’ವನ್ನು ತನ್ನ ಕ್ರಿಯಾವಿಧಾನದ ಪ್ರಮುಖ ಅಂಗವಾಗಿ ಭಾವಿಸುತ್ತದೆ. ಭಕ್ತಿಯ ಹೆಸರಿನಲ್ಲಿ ಹೆಣೆದುಕೊಂಡಿರುವ ಇನ್ನಿತರ ನೂರೆಂಟು ಆಚರಣೆಗಳೆಲ್ಲವೂ ಈ ಬಗೆಯ ಸಂಸರ್ಗದ ಹಲವು ಬಗೆಯ ವಿಸõತ ರೂಪಗಳೇ ಆಗಿವೆ. ಹೀಗಾಗಿ ಇಲ್ಲಿ ಕೇವಲ ಸಂಸರ್ಗವೊಂದೇ ಧಾರ್ವಿುಕತೆಯ ಮೌಲ್ಯನಿರ್ಣಯವಾಗಿಯೂ ಪರಿಣಮಿಸಿದೆ.

    ಆದರೆ ವಚನ ಇದನ್ನು ಪ್ರಶ್ನಿಸುತ್ತದೆ. ಸಂಸರ್ಗವೊಂದೇ ನಿರ್ಧಾರಕವಾದ ಅಂಶವಾಗಿದ್ದರೆ ನೀರಲ್ಲಿಯೇ ಆದ ವಾರಿಕಲ್ಲು ಮತ್ತು ಉಪ್ಪು ಮುತ್ತಿನಂತೆ ಕರಗದೆ ಇರಬಹುದಾಗಿತ್ತು. ಆದರೆ ಮುತ್ತು ಮಾತ್ರ ಮತ್ತೆ ಕರಗಿ ನೀರಾಗದೆ ಉಳಿಯಿತು. ಹೀಗಾಗಿ ಲಿಂಗವ ಮುಟ್ಟಿಯೂ ಭವಭಾರಿಗಳಾಗಿ ಉಳಿಯುವ ಸಂಸಾರಿ ಮಾನವರು ಇಲ್ಲಿ ವಿಮರ್ಶೆಯ ವಸ್ತುವಾಗುತ್ತಾರೆ. ಕೇವಲ ಮುಟ್ಟುವುದು ಇಲ್ಲಿ ಮೌಲ್ಯವಾಗಿ ಪರಿಣಮಿಸುವುದಿಲ್ಲ; ಗಟ್ಟಿಕೊಂಡು ಉಳಿದದ್ದು ಮಾತ್ರ ಇಲ್ಲಿ ಮುಖ್ಯವಾಗುತ್ತದೆ.

    ‘ನಾ ನಿಮ್ಮ ಮುಟ್ಟಿ ಕರಿಗೊಂಡೆನಯ್ಯ’ ಎನ್ನುವುದು ತನ್ನನ್ನು ತಾನು ಭವಭಾರದಿಂದ ಬಿಡಿಸಿಕೊಂಡದ್ದರ ನಿರೂಪಣೆಯಾಗಿದೆ. ಜೊತೆಗೆ ಹೀಗೆ ಕರಿಗೊಳ್ಳುವುದರಲ್ಲಿ ಮಾತ್ರ ಮುಟ್ಟುವುದರ ಸಾರ್ಥಕತೆಯೆಂದು ಸೂಚಿಸುವುದರ ಮೂಲಕ ಸಂಸರ್ಗವೆನ್ನುವುದರ ಮೌಲ್ಯನಿರ್ಣಯವೂ ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts