More

    ಕನ್ನಡದ ತಂಟೆಗೆ ಬಂದರೆ ಸುಮ್ಮನಿರಲ್ಲ

    ಶಿಕಾರಿಪುರ: ಕನ್ನಡಿಗರು ದೇಶದ ಅತ್ಯಂತ ಸಂಯಮಿಗಳು, ಸಹಿಷ್ಣುಗಳು, ಪರಭಾಷೆ ಗೌರವಿಸುವವರು. ಹಾಗಂತ ಕನ್ನಡದ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ ಎಂದು ಸರ್ವಾಧ್ಯಕ್ಷೆ ಜಿ.ಅಮೃತಾ ಎಚ್ಚರಿಸಿದ್ದಾರೆ.

    ಬನಸಿರಿ ಲಯನ್ಸ್ ವಿದ್ಯಾಸಂಸ್ಥೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಜಾನಪದ ಪರಿಷತ್ತು, ಲಯನ್ಸ್ ಕ್ಲಬ್, ಸಾರ್ವಜನಿಕ ಶಿಕ್ಷಣ ಇಲಾಖೆ ಶನಿವಾರ ಹಮ್ಮಿಕೊಂಡಿದ್ದ 6ನೇ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ಕನ್ನಡ ಭಾಷೆಯ ಬಳಕೆ ಕುಂಠಿತ ಆಗುತ್ತಿರುವುದರಿಂದ ನಮ್ಮ ನಾಡಿನಲ್ಲಿ ಅನ್ಯಭಾಷೆಗಳ ಪ್ರಭಾವ ಹೆಚ್ಚಾಗುತ್ತಿದೆ. ಕುಂದಾನಗರಿಯಲ್ಲಿ ಮರಾಠಿಗರೇ ಹೆಚ್ಚಾಗಿ ಕನ್ನಡ ಮತ್ತು ಕನ್ನಡಿಗರು ತಮ್ಮ ಅಸ್ತಿತ್ವಕ್ಕೆ ಹೋರಾಡಬೇಕಾದ ಕಾಲ ಬಂದಿದೆ. ನಾವು ಅತ್ಯಂತ ಸ್ವಾಭಿಮಾನಿಗಳು. ನಮ್ಮ ಭಾಷೆಯ ಮಹತ್ವ ನಮಗೆ ಅರಿವಿರಬೇಕು. ಪ್ರತಿದಿನ ಕನ್ನಡಿಗರೆದೆಯಲ್ಲಿ ಕನ್ನಡದ ಕಹಳೆ ಮೊಳಗಬೇಕು. ಜಗತ್ತಿನಾದ್ಯಂತ ಕನ್ನಡದ ಸುಗಂಧ ಪಸರಿಸುವಂತಾಗಬೇಕು. ಕನ್ನಡಿಗರೇ ಕನ್ನಡವನ್ನು ಉಪೇಕ್ಷೆ ಮಾಡಬಾರದು ಎಂದು ಸಲಹೆ ನೀಡಿದರು.

    ಕನ್ನಡ ನಮ್ಮ ಉಸಿರು, ಕನ್ನಡ ನಮ್ಮ ಆಸ್ತಿ, ಮೊದಲು ನಾವು ಕನ್ನಡಿಗರೆಂಬ ಹೆಮ್ಮೆ ನಮ್ಮಲ್ಲಿ ಸೃಜಿಸಬೇಕು. ನಮ್ಮ ನಡೆ ನುಡಿಗಳಲ್ಲಿ ಕನ್ನಡತನ ಎದ್ದು ಕಾಣಬೇಕು. ಕನ್ನಡದ ಕರೆ ಬಂದಾಗ ನಾವು ಮೊದಲಿಗರಾಗಬೇಕು. ಕನ್ನಡ ನೆಲ, ಜಲ, ಭಾಷೆ, ಸಂಸ್ಕೃತಿ ಉಳಿವಿಗೆ ನಾವು ನಮ್ಮನ್ನು ಸಮರ್ಪಿಸಿಕೊಳ್ಳಬೇಕು ಎಂದು ಹೇಳಿದರು.

    ತಹಸೀಲ್ದಾರ್ ಎಂ.ಪಿ.ಕವಿರಾಜ್ ಮಾತನಾಡಿ, ಇಂತಹ ಸಮ್ಮೇಳನಗಳಿಂದ ನಮ್ಮ ಮಕ್ಕಳ ಪ್ರತಿಭೆ ಅನಾವರಣವಾಗುತ್ತದೆ. ಅವರ ಕನ್ನಡದ ಪ್ರೀತಿಯ ಹರಿವು ಜಾಸ್ತಿ ಆಗುತ್ತದೆ. ಅವರಲ್ಲಿಯೂ ಸಾಹಿತ್ಯಿಕ ಚಿಂತನೆಗಳು ಮೂಡುತ್ತವೆ. ಕನ್ನಡ ಭಾಷೆ, ಅದರ ಇತಿಹಾಸ ,ಕನ್ನಡ ಸಂಸ್ಕೃತಿಯ ಬಗ್ಗೆ ಕುತೂಹಲ ಬೆಳೆಯುತ್ತದೆ ಎಂದರು ಹೇಳಿದರು.

    ಜನಪದ ಪರಿಷತ್ತಿನ ತಾಲೂಕು ಅಧ್ಯಕ್ಷ ಬಿ.ಪಾಪಯ್ಯ ಮಾತನಾಡಿ, ಈಗಾಗಲೇ ಐದು ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿದ್ದೇವೆ. ನಮ್ಮ ಮಕ್ಕಳು ನಿರಂತರವಾಗಿ ಕನ್ನಡದ ಕಾರ್ಯಗಳಲ್ಲಿ ಭಾಗವಹಿಸಬೇಕು. ಎಲ್ಲರೂ ಒಂದಾಗಿ ಕನ್ನಡ ದ ತೇರು ಎಳೆಯೋಣ ಎಂದರು.

    ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೆ.ಎಸ್.ಹುಚ್ರಾಯಪ್ಪ ಮಾತನಾಡಿ, ನಮ್ಮ ಮಕ್ಕಳಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ಕನ್ನಡ ಭಾಷೆಯ ಬಗ್ಗೆ, ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಬೇಕು. ಅವರಲ್ಲಿ ಕಥೆ, ಕವನ, ಪದ್ಯ, ಗದ್ಯ, ಗಳನ್ನು ಬರೆಯುವ ನಿಟ್ಟಿನಲ್ಲಿ ಅವರು ಪ್ರಯತ್ನ ಮಾಡಬೇಕು ಎಂದರು ಹೇಳಿದರು.

    ಬಾಪೂಜಿ ವಿದ್ಯಾಸಂಸ್ಥೆ ವಿದ್ಯಾರ್ಥಿನಿ ಮಹಾಲಕ್ಷ್ಮೀ ಉದ್ಘಾಟಿಸಿದರು. ಲಯನ್ಸ ಕ್ಲಬ್ ಅಧ್ಯಕ್ಷ ಎಚ್.ಬಿ.ಜಯದೇವಪ್ಪ, ಬನಸಿರಿ ಲಯನ್ಸ್ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಶಿವಾನಂದ ಶಾಸ್ತ್ರಿ, ಪುಷ್ಪಾ ವಿದ್ಯಾಸಂಸ್ಥೆ ಯ ರೆ.ಫಾ.ಸಂತೋಷ್ ವಿನ್ಸೆಂಟ್ ಡಿ ಅಲ್ಮೆಡಾ, ಲಯನ್ಸ್ ಉಪಾಧ್ಯಕ್ಷ ಜಯಣ್ಣ, ಕಾರ್ಯದರ್ಶಿ ಡಿ.ಕೆ.ಮಲ್ಲಿಕಾರ್ಜುನ್, ವಸಂತಕುಮಾರ್, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುಭಾಷ್​ಚಂದ್ರ ಸ್ಥಾನಿಕ್ ಸಿದ್ದಾರೂಢ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಉಪಾಧ್ಯಕ್ಷ ನವೀನ್​ಕುಮಾರ್ ಶಿರಾಳಕೊಪ್ಪ, ಲಯನ್ಸ್ ಆಡಳಿತಾಧಿಕಾರಿ ಪ್ರಶಾಂತ್ ಕುಮಾರ್, ಶಿಕ್ಷಕ ಸತೀಶ್ ಗಟ್ಟಿ, ಕೆ.ಗಣಪತಿ ಭಟ್, ತಾಲೂಕು ಜಾನಪದ ಪರಿಷತ್ತಿನ ಕಾರ್ಯದರ್ಶಿ ಸತ್ಯನಾರಾಯಣ, ಕಾಳಿಂಗರಾವ್,ನರಸಿಂಹಸ್ವಾಮಿ ಇತರರಿದ್ದರು. ಜಿ.ಟಿ.ಸೌಂದರ್ಯ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ, ಆದಿತ್ಯ ಅಧ್ಯಕ್ಷತೆಯಲ್ಲಿ ಕಥಾಗೋಷ್ಠಿ, ಅನುಷಾ ಅಧ್ಯಕ್ಷ ತೆಯಲ್ಲಿ ಭಾಷಣ ಗೋಷ್ಠಿ ಏರ್ಪಡಿಸಲಾಗಿತ್ತು.

    ಶಿಕಾರಿಪುರ ಮಣ್ಣಿನಲ್ಲಿ ಕನ್ನಡದ ಸುಗಂಧ: ಅನುಭವ ಮಂಟಪದಲ್ಲಿ ಅರ್ನ್ಯಘರತ್ನವಾಗಿದ್ದ ವೀರವಿರಾಗಿನಿ ಅಕ್ಕಮಹಾದೇವಿಯಿಂದ ಹಿಡಿದು 23ಕ್ಕೂ ಹೆಚ್ಚು ಶರಣರು ಜನಿಸಿದ ನಾಡಿದು. ಕನ್ನಡದ ಮೊದಲ ಸಾಮ್ರಾಜ್ಯವಿದು, ಕನ್ನಡದ ಮೊದಲ ಶಾಸನದ ಮಣ್ಣಿದು..ಇಂತಹ ಮಣ್ಣಿನಲ್ಲಿ ಕನ್ನಡದ ಸುಗಂಧ ಹರಡಿದೆ ಸರ್ವಾಧ್ಯಕ್ಷೆ ಜಿ.ಅಮೃತಾ ಸಂತಸಪಟ್ಟರು.

    ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯತೆ ಪಡೆದ ಭಾಷೆಯೂ, ಪುರಾತನ ಭಾಷೆಯೂ ಆಗಿರುವ ಕನ್ನಡವನ್ನು 45 ದಶಲಕ್ಷ ಜನರು ಆಡುನುಡಿಯಾಗಿ ಬಳಸುತ್ತಿದ್ದಾರೆ. ಕನ್ನಡ ಜಗತ್ತಿನ ಅತಿ ಹೆಚ್ಚು ಮಂದಿ ಮಾತನಾಡವ ಭಾಷೆಯೆಂಬ ನೆಲೆಯಲ್ಲಿ 29ನೇ ಸ್ಥಾನ ಪಡೆದುಕೊಂಡಿದೆ. 2011ರ ಜನಗಣತಿಯ ಪ್ರಕಾರ ಜಗತ್ತಿನಲ್ಲಿ 4ರಿಂದ 8ಕೋಟಿ ಯಷ್ಟು ಜನ ಕನ್ನಡ ಮಾತನಾಡುತ್ತಾರೆ ಎಂದು ತಿಳಿದು ಬಂದಿದೆ. ಬ್ರಾಹ್ಮೀ ಲಿಪಿಯಿಂದ ರೂಪುಗೊಂಡ ಕನ್ನಡ ಲಿಪಿ ಅಭೂತಪೂರ್ವ ಇತಿಹಾಸವನ್ನು ಹೊಂದಿದೆ. ವಿನೋಬ ಭಾವೆಯವರು ಕನ್ನಡ ಲಿಪಿಯನ್ನು ಲಿಪಿಗಳ ರಾಶಿಗಳ ರಾಣಿ ಎಂದು ಹೊಗಳಿದ್ದಾರೆ ಎಂದು ಹೇಳಿದರು.</p><p>ಅತ್ಯಂತ ಸರಳವಾಗಿ ಮತ್ತು ಸಮರ್ಥವಾಗಿ ಅರ್ಥೈಸಿಕೊಳ್ಳುವ ಭಾಷೆ ಕನ್ನಡ. ಸುಲಿದ ಬಾಳೆಯ ಹಣ್ಣಿನಂದದಿ, ಕಳಿದ ಸಿಗುರಿನ ಕಬ್ಬಿನಂದದಿ, ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪದು ಈ ಕನ್ನಡ ನುಡಿ ಎಂಬ ನಮಗೆ ಸ್ಪೂರ್ತಿಯಾಗಿರಬೇಕು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts