More

    ಪಿಎಸ್​ಐ ಫಿಟ್ನೆಸ್ ಪರೀಕ್ಷೆ ಗೊಂದಲ

    ಬಳ್ಳಾರಿ: ಪಿಎಸ್​ಐ ನೇಮಕಾತಿ ಸಂಬಂಧ ದೇಹದಾರ್ಢ್ಯ ಪರೀಕ್ಷೆ ಪದೇಪದೆ ಮುಂದೂಡಲ್ಪಡುತ್ತಿದ್ದು, ಪರೀಕ್ಷೆ ನಡೆಯುವ ದಿನಾಂಕದ ಸ್ಪಷ್ಟತೆ ಸಿಗದೆ ಅಭ್ಯರ್ಥಿಗಳು ಆತಂಕದ ಜತೆಗೆ ಗೊಂದಲದಲ್ಲಿದ್ದಾರೆ.

    ಸಿವಿಲ್ ವಿಭಾಗದ ಪುರುಷ ಮತ್ತು ಮಹಿಳೆಯರ 300 ಪಿಎಸ್​ಐ ಹುದ್ದೆಗೆ 2019ರಲ್ಲಿ ಅರ್ಜಿ ಕರೆಯಲಾಗಿತ್ತು. ರಾಜ್ಯದ ಎಂಟು ನಗರಗಳ 12 ಕೇಂದ್ರಗಳಲ್ಲಿ ಡಿ.20ರಿಂದ 24ರವರೆಗೆ ದೇಹದಾರ್ಢ್ಯತೆ ಪರೀಕ್ಷೆ ನಡೆಯಬೇಕಿತ್ತು. ಆಡಳಿತಾತ್ಮಕ ಕಾರಣ ನೀಡಿ ಪರೀಕ್ಷಾ ಕೇಂದ್ರವಾರು ಹೊಸ ದಿನಾಂಕ ಪ್ರಕಟಿಸಿ ಪರೀಕ್ಷೆ ಮುಂದೂಡಲಾಯಿತು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪರಿಷ್ಕೃತ ವೇಳಾಪಟ್ಟಿಯಂತೆ ಜ.8ರಿಂದ 10 ಹಾಗೂ 13ರಂದು ಪರೀಕ್ಷೆ ನಡೆಯಬೇಕಿತ್ತು. ಕಾರ್ವಿುಕ ಸಂಘಟನೆಗಳ ಮುಷ್ಕರ ಹಿನ್ನೆಲೆಯಲ್ಲಿ ಜ.8ರ ಪರೀಕ್ಷೆಯನ್ನು 13ಕ್ಕೆ ಮುಂದೂಡಲಾಗಿತ್ತು. ಆದರೆ, ಆಗಲೂ ನಿಗದಿಯಂತೆ ಪರೀಕ್ಷೆ ನಡೆದಿಲ್ಲ.

    ಡಿ.30 ಹಾಗೂ ಜ.2ರಂದು ಅಭ್ಯರ್ಥಿಗಳಿಗೆ ಸಂದೇಶ ಕಳುಹಿಸಿ ವೆಬ್​ಸೈಟ್​ನಲ್ಲಿ ಕರೆಪತ್ರ ಡೌನ್​ಲೋಡ್ ಮಾಡಿಕೊಂಡು ಜ.20ರಂದು ಪರೀಕ್ಷೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ಮತ್ತೆ ಜ.20ರಿಂದ 24ರವರೆಗೆ ದಿನಾಂಕ ನಿಗದಿ ಮಾಡಲಾಗಿದೆ. 20ರಂದು ನಿಗದಿಯಾಗಿದ್ದ ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಗಳು ವೆಬ್​ಸೈಟ್​ನಲ್ಲಿ ಕರೆಪತ್ರ ಡೌನ್​ಲೋಡ್ ಮಾಡಿಕೊಂಡಾಗ ಮತ್ತೊಂದು ಅಚ್ಚರಿ ಕಾದಿತ್ತು. ಜ.17ರ ಬೆಳಗ್ಗೆ 7ಕ್ಕೆ ಪರೀಕ್ಷೆಗೆ ಹಾಜರಾಗುವಂತೆ ಕರೆಪತ್ರದಲ್ಲಿ ಸೂಚಿಸಲಾಗಿತ್ತು. ಈ ಕುರಿತ ಗೊಂದಲ ಪರಿಹರಿಸಿಕೊಂಡರೂ ಜ.20ರಂದು ನಿಗದಿಯಂತೆ ಪರೀಕ್ಷೆ ನಡೆದಿಲ್ಲ.

    21ರಿಂದ ದೇಹದಾರ್ಢ್ಯತೆ ಪರೀಕ್ಷೆ ಆರಂಭವಾಗಿರುವ ಬಗ್ಗೆ ಮಾಹಿತಿ ತಿಳಿದು ನಗರದ ಜಿಲ್ಲಾ ಕ್ರೀಡಾಂಗಣಕ್ಕೆ ಬರುತ್ತಿರುವ ಕೆಲವು ಅಭ್ಯರ್ಥಿಗಳು ನಿರಾಸೆಯಿಂದ ಹಿಂದಿರುಗುತ್ತಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ಜ.24ರಂದು ಹಾಜರಾಗುವಂತೆ ಮೊಬೈಲ್​ಗೆ ಸಂದೇಶ ಬರಲಿದೆ ಎಂಬ ಮಾಹಿತಿಯಿಂದಾಗಿ 20ರಂದು ಪರೀಕ್ಷೆ ಎದುರಿಸಬೇಕಿದ್ದ ಅಭ್ಯರ್ಥಿಗಳು ಗೊಂದಲದಲ್ಲಿದ್ದಾರೆ. ಸೂಕ್ತ ಮಾಹಿತಿ ಹಾಗೂ ಸಂಪರ್ಕ ಇಲ್ಲದೆ ಹೊರ ಜಿಲ್ಲೆಗಳ ಅಭ್ಯರ್ಥಿಗಳು ಹೆಚ್ಚು ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

    ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳ ಬಂದೋಬಸ್ತ್ ಕಾರಣಕ್ಕೆ ಪಿಎಸ್​ಐ ನೇಮಕಾತಿಯ ದೇಹದಾರ್ಢ್ಯ ಪರೀಕ್ಷೆ ಮುಂದೂಡಿಕೆಯಾಗಿತ್ತು. ಕೆಎಸ್​ಆರ್​ಪಿ ಡಿಐಜಿ ನೇತೃತ್ವದಲ್ಲಿ ನಿಗದಿಯಂತೆ ಫಿಟ್ನೆಸ್ ಪರೀಕ್ಷೆ ಆರಂಭವಾಗಿದೆ. ಕೆಲವರಿಗೆ ಸಂವಹನ ಸಮಸ್ಯೆಯಿಂದ ದಿನಾಂಕದ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಅಂಥವರು ಬಂದು ಭೇಟಿ ಮಾಡಿದರೆ ನೇಮಕಾತಿ ವಿಭಾಗದ ಎಡಿಜಿಪಿಗೆ ಪತ್ರ ಬರೆದು ಪರೀಕ್ಷೆಗೆ ದಿನಾಂಕ ನಿಗದಿ ಪಡಿಸಲಾಗುವುದು.

    | ಎಂ.ನಂಜುಂಡಸ್ವಾಮಿ ಬಳ್ಳಾರಿ ಐಜಿಪಿ

    ಅಶೋಕ ನೀಮಕರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts