More

    ಎಸ್ಟಿ ಮೀಸಲಾತಿ ಶೇ. 7.5ಕ್ಕೆ ಹೆಚ್ಚಿಸಲು ಒತ್ತಾಯ

    ಹಾವೇರಿ: ಎಸ್​ಟಿ ಜನಾಂಗದ ಮೀಸಲಾತಿಯನ್ನು ಶೇ. 7.5ಕ್ಕೆ ಹೆಚ್ಚಿಸಲು ಸಚಿವ ಸಂಪುಟದಲ್ಲಿ ಕೂಡಲೆ ಅನುಮೋದನೆ ನೀಡಬೇಕು. ಇಲ್ಲವಾದಲ್ಲಿ ಎಸ್​ಟಿ ಸಮಾಜದ ಎಲ್ಲ ಸಚಿವರು, ಶಾಸಕರು ರಾಜೀನಾಮೆ ನೀಡಬೇಕು ಎಂದು ವಾಲ್ಮೀಕಿ ನಾಯಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ರಮೇಶ ಆನವಟ್ಟಿ ಒತ್ತಾಯಿಸಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಹೆಚ್ಚಿಸುವ ಕುರಿತು ನ್ಯಾಯಮೂರ್ತಿ ನಾಗಮೋಹನದಾಸ ನೇತೃತ್ವದ ಸಮಿತಿ ಈಗಾಗಲೇ ಶಿಫಾರಸು ಮಾಡಿದೆ. ಶಿಫಾರಸಿನಂತೆ ಸರ್ಕಾರ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಹಲವಾರು ವರ್ಷಗಳಿಂದ ಹೆಚ್ಚಿನ ಮೀಸಲಾತಿ ಸೌಲಭ್ಯ ನೀಡದ ಪರಿಣಾಮ ಶೈಕ್ಷಣಿಕ, ಉದ್ಯೋಗ, ಸಾಮಾಜಿಕ ಹಾಗೂ ಆರ್ಥಿಕವಾಗಿ ಸಮಾಜದವರಿಗೆ ಅನ್ಯಾಯವಾಗುತ್ತಿದೆ. ಕೇಂದ್ರ ಸರ್ಕಾರ ಈಗಾಗಲೇ ಜಾರಿಗೊಳಿಸಿರುವ ಶೇ. 7.5 ಮೀಸಲಾತಿಯನ್ನು ರಾಜ್ಯ ಸರ್ಕಾರ ಜಾರಿಗೊಳಿಸದೇ ಇರುವುದು ಖಂಡನೀಯ. ಮೀಸಲಾತಿ ಹೆಚ್ಚಳ ಕುರಿತು ಈ ಹಿಂದೆ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿಗಳ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಸರ್ಕಾರ ಕೂಡಲೆ ಎಚ್ಚೆತ್ತುಕೊಳ್ಳದಿದ್ದರೆ ಮತ್ತೆ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಎಸ್​ಟಿ ಜನಾಂಗದ ಸೌಲಭ್ಯವನ್ನು ಈಗಾಗಲೇ ಅನೇಕರು ನಕಲಿ ಪ್ರಮಾಣಪತ್ರದ ಪಡೆದು ಕಬಳಿಸುತ್ತಿದ್ದಾರೆ. ಇದರ ಬಗ್ಗೆಯೂ ತನಿಖೆ ನಡೆಸಬೇಕು. ವಿಧಾನಸಭೆ ಚುನಾವಣೆಯ ವೇಳೆ ನೀಡಿದ್ದ ಭರವಸೆಯಂತೆ ಎಸ್​ಟಿ ಸಮುದಾಯದ ಸಚಿವ ಬಿ. ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ನೀಡಬೇಕು ಎಂದರು. ಸಂಘದ ಪ್ರಧಾನ ಕಾರ್ಯದರ್ಶಿ ಶೇಖರ ಕಳ್ಳಿಮನಿ, ಖಜಾಂಜಿ ಶ್ರೀಧರ ದೊಡ್ಡಮನಿ, ಅಶೋಕ ಹರನಗಿರಿ, ಚಂದ್ರಣ್ಣ ಬೇಡರ ಇತರರಿದ್ದರು.

    ಸದಾಶಿವ ಆಯೋಗದ ವರದಿ ಜಾರಿಗೊಳಿಸಿ: ನ್ಯಾ. ಸದಾಶಿವ ಆಯೋಗದ ಒಳ ಮೀಸಲಾತಿ ವರದಿಯನ್ನು ಅಧಿವೇಶನದಲ್ಲಿ ಮಂಡಿಸಿ ಜಾರಿಗೊಳಿಸಬೇಕು ಎಂದು ಆದಿಜಾಂಬವ ಮಾದಿಗ ಸಂಘ ಹಾಗೂ ದಲಿತ ಸಂಘರ್ಷ ಸಮಿತಿ ವತಿಯಿಂದ ರಾಣೆಬೆನ್ನೂರಲ್ಲಿ ಶಿರಸ್ತೇದಾರ್ ಎಂ.ಎನ್. ಹಾದಿಮನಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಸೋಮವಾರ ಮನವಿ ಸಲ್ಲಿಸಲಾಯಿತು. ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರವು ಆಯಾ ರಾಜ್ಯ ಸರ್ಕಾರಗಳಿಗಿದೆ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೆ ಅಧಿವೇಶನದಲ್ಲಿ ರ್ಚಚಿಸಿ ನ್ಯಾ. ಸದಾಶಿವ ಆಯೋಗದ ಒಳ ಮೀಸಲಾತಿ ವರದಿಯನ್ನು ಮಂಡಿಸಿ ಜಾರಿಗೊಳಿಸುವ ಮೂಲಕ ದಲಿತ ಸಮಾಜದವರಿಗೆ ನ್ಯಾಯ ಒದಗಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಪ್ರಮುಖರಾದ ನೀಲಕಂಠಪ್ಪ ಕೂಸಗೂರ, ಪ್ರಕಾಶ ಪೂಜಾರ, ಮೈಲಪ್ಪ ದಾಸಪ್ಪನವರ, ಮೈಲಪ್ಪ ಗೋಣಿಬಸಮ್ಮನವರ, ಮಾಲತೇಶ ಬ್ಯಾಡಗಿ, ರಘು ಆಡೂರ, ಶ್ರೀಕಾಂತ ಸಣ್ಣಮನಿ, ಮಂಜುನಾಥ ಗಂಗಾಪುರ, ಧರ್ಮಣ್ಣ ಮೇಗಳಮನಿ, ಸಿದ್ದಪ್ಪ ನಿಟ್ಟೂರ, ರವಿ ಹುಚ್ಚಪ್ಪನವರ, ದುರ್ಗಪ್ಪ ಬಾಲಬಸಮ್ಮನವರ, ಹೊನ್ನಪ್ಪ ಹೊನ್ನಕ್ಕಳವರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts