More

    ಎಲ್ಲುಬೆಲ್ಲ ತಿಂದು ಒಳ್ಳೆಯ ಮಾತಾಡಿ: ಜಿಲ್ಲೆಯಾದ್ಯಂತ ಮಕರ ಸಂಕ್ರಾಂತಿ ಸಂಭ್ರಮ

    ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಮಕರ ಸಂಕ್ರಾಂತಿಯ ಸಂಭ್ರಮ ಮನೆಮಾಡಿತ್ತು, ಧಾರ್ಮಿಕ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

    ಮನೆಯ ಮುಂದೆ ವಿವಿಧ ಬಣ್ಣಗಳಿಂದ ಆಕರ್ಷಕ ರಂಗೋಲೆ ಬಿಡಿಸಿ, ಬಣ್ಣ ಮತ್ತು ಹೂವಿನಿಂದ ಅಲಂಕರಿಸಲಾಗಿತ್ತು. ರಾಸುಗಳನ್ನು ಅಲಂಕರಿಸಿ, ಪೂಜಿಸಲಾಯಿತು. ಮಹಿಳೆಯರು ನೆರೆಹೊರೆಯವರೊಂದಿಗೆ ಎಲ್ಲುಬೆಲ್ಲ ತಿಂದು ಒಳ್ಳೆಯ ಮಾತಾಡಿ ಎಂದು ಪರಸ್ಪರ ವಿನಿಮಯ ಮಾಡಿಕೊಳ್ಳುವ ಮೂಲಕ ಹಬ್ಬದ ಶುಭಾಷಯ ಕೋರಿದರು.

    ಬೆಳಗ್ಗೆಯಿಂದಲೇ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಇನ್ನೂ ದೇವರಿಗೆ ವಿಶೇಷ ಅಭಿಷೇಕ, ಅಲಂಕಾರವನ್ನು ಕೈಗೊಳ್ಳಲಾಗಿತ್ತು.

    ವಿವಿಧೆಡೆ ರಥೋತ್ಸವ: ಹಬ್ಬದ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ರಥೋತ್ಸವಗಳು ಮಂಗಳವಾದ್ಯ, ಭಜನಾ ತಂಡಗಳಿಂದ ದೇವರನಾಮಗಳ ಕೀರ್ತನೆಗಳ ಗಾಯನ ನಡೆಯಿತು. ನಗರದ ಬಾಲಕೃಷ ಭಜನಾ ಮಂದಿರ, ಶ್ರೀ ವೇಣುಗೋಪಾಲಸ್ವಾಮಿ ಭಜನಾ ಮಂದಿರ, ಶ್ರೀ ಕನಕ ಭಜನಾ ಮಂದಿರ, ವೆಂಕಟರಮಣಸ್ವಾಮಿ ಆಲಯದಿಂದ ದೇವರ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿದ್ದ ರಥಗಳು ಪ್ರತ್ಯೇಕವಾಗಿ ನಗರದ ಬಿ.ಬಿ.ರಸ್ತೆ, ಬಜಾರ್ ರಸ್ತೆ ಸೇರಿ ಪ್ರಮುಖ ಬೀದಿಗಳಲ್ಲಿ ಸಾಗಿದವು.

    ಅಯ್ಯಪ್ಪ ಸ್ವಾಮಿ ಮೂರ್ತಿ ಮೆರವಣಿಗೆ: ನಗರದ ಬಿ.ಬಿ.ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಶಬರಿಮಲೆ ಆಲಯದ ಮಾದರಿಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.

    ಮಾಲಾಧಾರಿಗಳು ದೇವರ ಆಭರಣಗಳ ಪೆಟ್ಟಿಗೆ ಹೊತ್ತು ಆಲಯಕ್ಕೆ ಆಗಮಿಸಿದರು. ಬಳಿಕ ಸ್ವಾಮಿಯ ಮೂರ್ತಿಗೆ ವಿಶೇಷ ಅಭಿಷೇಕ ಮತ್ತು ಹೂವಿನ ಅಲಂಕಾರ ನೆರವೇರಿಸಲಾಯಿತು. ಗಣಪತಿ ಪೂಜೆ, ಪುಣ್ಯಾಹ ವಾಚನ, ಅಯ್ಯಪ್ಪ ಸ್ವಾಮಿ ಮತ್ತು ಶಾಂತಿ ಹೋಮ ನಡೆಯಿತು.

    ಸಂಜೆ ಹೂವಿನಿಂದ ಸಿಂಗಾರಗೊಂಡಿದ್ದ ಪಲ್ಲಕ್ಕಿಯಲ್ಲಿ ದೇವರ ಉತ್ಸವ ಮೂರ್ತಿಯ ಮೆರವಣಿಗೆ ನಡೆಸಲಾಯಿತು. ದೇವಾಲಯದಿಂದ ಬಜಾರ್ ರಸ್ತೆ, ಭುವನೇಶ್ವರಿ ವೃತ್ತ, ಗಂಗಮ್ಮನ ಗುಡಿ, ಎಂ.ಜಿ.ರಸ್ತೆ, ಶಿಡ್ಲಘಟ್ಟ ವೃತ್ತ, ವಾಪಸಂದ್ರ ಶ್ರೀ ರಂಗನಾಥಸ್ವಾಮಿ ದೇವಾಲಯದಿಂದ ಬಿ.ಬಿ.ರಸ್ತೆಯ ಮೂಲಕ ದೇವಾಲಯಕ್ಕೆ ಹಿಂತಿರುಗಿತು. ಕೇರಳದ ಕಲಾವಿದ ಮೋಹನ್‌ದಾಸ್ ತಂಡದವರ ಚಂಡಿ ಪಂಚವಾದ್ಯ ಗಮನ ಸೆಳೆಯಿತು. ಮಹಿಳೆಯರು, ಹೆಣ್ಣು ಮಕ್ಕಳು ತಟ್ಟೆಗಳಲ್ಲಿ ಅಕ್ಕಿಯನ್ನಿಟ್ಟು ದೀಪಗಳೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆಹಾಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts