More

    ಎಲ್ಲರನ್ನೂ ಪ್ರೀತಿ, ಗೌರವದಿಂದ ಕಾಣಿ

    ರಟ್ಟಿಹಳ್ಳಿ: ಸಮಾಜದಲ್ಲಿ ಎಲ್ಲರನ್ನೂ ಪ್ರೀತಿ ಮತ್ತು ಗೌರವದಿಂದ ಕಂಡರೆ ಎಲ್ಲರ ಮನಸ್ಸು ಗೆಲ್ಲಬಹುದು. ಯಾವುದೇ ವ್ಯಕ್ತಿ ಅಥವಾ ಸಮಾಜದ ವಿರುದ್ಧ ದ್ವೇಷ ಸಾಧಿಸಬಾರದು. ಇಂದಿನ ಯುವಕರು ಸಮಾಜದ ಭವಿಷ್ಯವನ್ನು ರೂಪಿಸುವಂಥ ವ್ಯಕ್ತಿಗಳು ಎಂದು ಕಾಗಿನೆಲೆ ಕನಕ ಗುರು ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

    ಪಟ್ಟಣದ ಹಾಲುಮತ ಕುರುಬ ಸಮಾಜ ಮತ್ತು ಬೀರಲಿಂಗೇಶ್ವರ ಗೆಳೆಯರ ಬಳಗದ ವತಿಯಿಂದ ಭಾನುವಾರ ಆಯೋಜಿಸಿದ್ದ ಭಕ್ತ ಕನಕದಾಸರ ಜಯಂತ್ಯುತ್ಸವದಲ್ಲಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

    ದಾರ್ಶನಿಕರ ಜಯಂತಿ ಸಂದರ್ಭ ಡಿಜೆ ಎದುರು ಕುಣಿದು ಕುಪ್ಪಳಿಸಿದರೆ ಅದು ನಿಮ್ಮಗಳ ಚಟ ತೀರಿಸಿಕೊಳ್ಳುವುದಕ್ಕೆ ಮಾಡಿದಂತಾಗುತ್ತದೆ. ಕನಕ ಗುರುಪೀಠ ಯಾವುದೇ ಕಾರಣಕ್ಕೂ ಇಂತಹ ಆಡಂಬರದ ಆಚರಣೆಗಳನ್ನು ಒಪ್ಪುವುದಿಲ್ಲ. ಅದೇ ಹಣದಲ್ಲಿ ಕನಕದಾಸರ ಪುಸ್ತಕ ತಂದು ಜನರಿಗೆ ವಿತರಿಸಿ. ಟಿ ಶರ್ಟ್​ಗಳ ಮೇಲೆ ಜಾತಿ ಜಾತಿಗಳ ಮಧ್ಯೆ ಜಗಳ ತರುವಂಥ ಬರಹಗಳನ್ನು ಯುವಕರು ಬರೆದುಕೊಳ್ಳುತ್ತಿರುವುದು ಸರಿಯಲ್ಲ ಎಂದು ಎಚ್ಚರಿಸಿದರು.

    ಕನಕದಾಸರ ಜೀವನದ ಸಂದರ್ಭದಲ್ಲಿ ಜಾತಿ ವ್ಯವಸ್ಥೆ ಕಠೋರವಾಗಿತ್ತು. ಆದರೂ ಅವರು ಮಡಿವಂತರಿಗೆ ತಮ್ಮ ಜಾಣ್ಮೆಯ ಮಾತು, ಪ್ರೀತಿಯ ಮೂಲಕ ಅವರ ಮನಸ್ಸುಗಳನ್ನು ಗೆದ್ದರೇ ವಿನಃ ದ್ವೇಷದಿಂದಲ್ಲ. ಜಾತಿ ಜಾತಿಗಳ ಮಧ್ಯೆ ಕಂದಕಗಳನ್ನು ನಿರ್ವಿುಸಿಕೊಂಡು ಜಯಂತಿಗಳನ್ನು ಮಾಡುವುದು ಜಯಂತಿಗಳಲ್ಲ ಎಂದು ಮಾರ್ವಿುಕವಾಗಿ ನುಡಿದರು.

    ಶಾಸಕ ಬಿ.ಸಿ. ಪಾಟೀಲ ಮಾತನಾಡಿ, ನಾವು ಯಾರಾದರೂ ಸತ್ತರೆ ಕೆಲವು ದಿನಗಳು ಮಾತ್ರ ನೆನಪಿನಲ್ಲಿ ಇಟ್ಟುಕೊಳ್ಳುತ್ತವೆ. ಬಳಿಕ ಮರೆತು ಬಿಡುತ್ತವೆ. ಆದರೆ, 532 ವರ್ಷಗಳ ಕಾಲ ನಾವು ಕನಕದಾಸರನ್ನು ನೆನಪಿಸಿಕೊಂಡು ಬರುತ್ತಿದ್ದೇವೆ ಎಂದರೆ ಅವರ ತತ್ತ್ವ ಸಿದ್ಧಾಂತಗಳು ಬದುಕಿವೆ ಎಂದರ್ಥ. ಜಾತಿ ಜಾತಿ ಎಂದು ನಾವು ಬಡೆದಾಡುತ್ತೇವೆ. ಆದರೆ ಮಾನವ ಕುಲವೆಂಬುದು ಒಂದೇ ಎಂದರು.

    ಮಾಜಿ ಸಚಿವ ಆರ್. ಶಂಕರ, ರಾಣೆಬೆನ್ನೂರ ಶಾಸಕ ಅರುಣಕುಮಾರ ಪೂಜಾರ, ಜಿ.ಪಂ. ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ, ವಕೀಲರಾದ ಸಿ.ಎಂ. ಒಡಿಯರ್ ಮಾತನಾಡಿದರು. ಹಾಲುಮತ ಕುರುಬ ಸಮಾಜದ ರಾಮಪ್ಪ ಕಟ್ಟೇಕಾರ ಅಧ್ಯಕ್ಷತೆ ವಹಿಸಿದ್ದರು.

    ಭವ್ಯ ಮೆರವಣಿಗೆ: ಸಂಜೆ ಕನಕದಾಸರ ಪುತ್ಥಳಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾತಂಡಗಳೊಂದಿಗೆ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಯಿತು.

    ಮಾಜಿ ಮುಖ್ಯ ಸಚೇತಕ ಡಿ.ಎಂ. ಸಾಲಿ, ಬೋಜರಾಜ ಕೆರೂದಿ, ಬಸಪ್ಪ ಕುರಿಯವರ, ಶಾಂತಮ್ಮ ಹಾದಿಮನಿ, ಗ್ರಾ.ಪಂ. ಅಧ್ಯಕ್ಷೆ ರೇಣುಕಾ ಕಮತಳ್ಳಿ, ಗ್ರಾ.ಪಂ. ಉಪಾಧ್ಯಕ್ಷ ಗೋಪಾಲ ಮಡಿವಾಳರ, ಗ್ರಾ.ಪಂ. ಸದಸ್ಯ ಬಸವರಾಜ ಆಡಿನವರ, ಸಿದ್ದಮ್ಮ ಬಳಗಾವಿ, ಆರ್.ಎನ್. ಗಂಗೋಳ, ಶಂಬಣ್ಣ ಗೂಳಪ್ಪನವರ, ಕೆ.ಎಂ.ಎಫ್. ನಿರ್ದೇಶಕರು ಹನುಮಂತಗೌಡ ಭರಮಣ್ಣನವರ, ಕರಿಯಪ್ಪ ಹಂಚಿನಮನಿ, ಶೇಖಪ್ಪ ಉಕ್ಕುಂದ, ಮಹಬೂಬ್​ಸಾಬ್ ಮುಲ್ಲಾ, ಆನಂದಪ್ಪ ಹಾದಿಮನಿ, ನಿಂಗರಾಜ ಕರಡೇರ, ರಾಜು ಅಡಿವೆಪ್ಪನವರ, ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts