More

    ಋಗ್ವೇದಕ್ಕಿಂತ ದೇಶದ ಸಂಸ್ಕೃತಿ ಹಳೆಯದು

    ಧಾರವಾಡ: ಸಂಗೀತ ನಮ್ಮ ದೇಶದ ಸಭ್ಯತೆಯ ಸೃಷ್ಟಿಯಾಗಿದೆ. ಸಂಗೀತದ ಎದುರು ನಾವೆಲ್ಲ ಒಂದೇ ಆಗಿದ್ದೇವೆ ಎಂದು ಪದ್ಮಶ್ರೀ ಪುರಸ್ಕೃತ ಪಂ. ರಾಜೀವ ತಾರಾನಾಥ ಹೇಳಿದರು. ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್, ಮನೋಹರ ಗ್ರಂಥಮಾಲಾ ಹಾಗೂ ಅಣ್ಣಾಜಿರಾವ್ ಶಿರೂರ ರಂಗಮಂದಿರ ಟ್ರಸ್ಟ್ ವತಿಯಿಂದ ನಗರದ ಸೃಜನಾ ರಂಗ ಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

    ದೇವರಿಗೆ ಸಾವಿರಾರು ಹೆಸರುಗಳನ್ನಿಟ್ಟರೂ ತೃಪ್ತಿಯಾಗದೆ, ಅದೇ ವಿಷಯಗಳನ್ನಿಟ್ಟುಕೊಂಡು ಹೋರಾಟ ನಡೆಸುತ್ತಾರೆ. ಆದರೆ ಎಷ್ಟೇ ಹೆಸರಿಟ್ಟರೂ ದೇವರು ಮಾತ್ರ ಒಂದೇ ಆಗಿದ್ದು, ಏಕರೂಪ ದೇವ ಎಂಬ ಸತ್ಯದ ಅರಿವು ಮೂಡಿದಾಗಲೇ ಸಮಾಜದಲ್ಲಿ ಸಹಬಾಳ್ವೆ, ಶಾಂತಿ ಸಿಗಲು ಸಾಧ್ಯ ಎಂದರು.

    ಋಗ್ವೇದ ಬಹಳ ಹಳೆಯದು ಎಂದು ಹೇಳುತ್ತಾರೆ. ಆದರೆ, ಅದಕ್ಕಿಂತ ಹಳೆಯದು ನಮ್ಮ ಸಂಸ್ಕೃತಿ. ಸಾವಿರಾರು ಹೃದಯಗಳಿಗಿಂತ ನೋವು ಸಹನೆ ಮಾಡುವ ಹೃದಯವೊಂದಿದ್ದರೆ ಸಾಕು. ಅಂತಹ ಹೃದಯ ನಮ್ಮದಾಗಬೇಕು. ದುಃಖ ಅನುಭವಿಸಿದಾಗ ಮಾತ್ರ ಎಲ್ಲವನ್ನೂ ಸಹನೆ ಮಾಡಿ ಸಹಬಾಳ್ವೆಯಿಂದ ಜೀವನದಲ್ಲಿ ಯಶಸ್ಸು ಕಾಣಬಹುದು ಎಂದರು.

    ಕತೆಗಾರ ಜಯಂತ ಕಾಯ್ಕಿಣಿ, ನಮ್ಮ ನಡುವಿನ ಚೇತನಗಳನ್ನು ಆರಾಧನೆ ಮಾಡಿದರೆ ಸಾಲದು. ಆವಾಹನೆ ಮಾಡಿಕೊಳ್ಳಬೇಕಿದೆ. ನಮ್ಮೊಳಗಿನ ಸಮಾಜವನ್ನು ಜಾಗೃತಗೊಳಿಸಬೇಕಿದೆ. ಅಂತಹ ಜಾಗೃತಿ ಮತ್ತು ಪ್ರಜ್ಞೆಯ ಮೂಲಕವೇ ಕಲೆ ಬೆಳೆಸಿಕೊಂಡು ಬಂದವರು ರಾಜೀವ ತಾರಾನಾಥರು. ಅವರ ಬದುಕು ಮತ್ತು ಸಾಧನೆ ನಮಗೆಲ್ಲ ಪ್ರೇರಣೆಯಾಗಬೇಕು ಎಂದರು. ಡಾ. ರಮಾಕಾಂತ ಜೋಶಿ, ಪ್ರೊ. ಎಸ್.ಎಂ. ಶಿವಪ್ರಸಾದ ಮಾತನಾಡಿದರು. ಹು-ಧಾ ಪೊಲೀಸ್ ಆಯುಕ್ತ ಆರ್. ದಿಲೀಪ, ಡಾ. ರಾಜೇಂದ್ರ ದೇಶಪಾಂಡೆ, ಡಾ. ಶಶಿಧರ ನರೇಂದ್ರ, ಸಮೀರ ಜೋಶಿ, ಡಾ. ಕೃಷ್ಣ ಮುನವಳ್ಳಿ, ಹರ್ಷ ಡಂಬಳ, ಇತರರು ಇದ್ದರು. ಪ್ರೊ. ರಾಜಶೇಖರ ಜಾಡರ ಸ್ವಾಗತಿಸಿದರು. ರವಿ ಕುಲಕರ್ಣಿ ನಿರೂಪಿಸಿದರು.

    ನಂತರ ತಾರಾನಾಥ ಅವರು ಮಧರ ಮಂಜರಿ ರಾಗದ ಮೂಲಕ ಸಂಗೀತ ಕಛೇರಿ ಪ್ರಾರಂಭಿಸಿ ವಿವಿಧ ರಾಗಗಳನ್ನು ನುಡಿಸುವ ಮೂಲಕ ಸಂಗೀತಾಸಕ್ತರ ಮನ ತಣಿಸಿದರು. ಉದಯ ಕರ್ಪರ ತಬಲಾ ಸಾಥ್ ನೀಡಿದರು. ಇದಕ್ಕೂ ಪೂರ್ವದಲ್ಲಿ ಗಾಯಕ ನಿಶಾಂತ ಪಣಿಕ್ಕರ್ ಅವರ ಗಾಯನ, 9 ವರ್ಷದ ಬಾಲಕ ಬೆಂಗಳೂರಿನ ಪ್ರದ್ಯುಮ್ನ ಉದಯ ಕರ್ಪರ ತಬಲಾ ಸೋಲೋ ಪ್ರಸ್ತುತಪಡಿಸಿ ಗಮನ ಸೆಳೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts