More

    ಊರೆಲ್ಲ ಕೊಳ್ಳೆ ಹೊಡೆದ ಮೇಲೆ…| ಶೇಂಗಾ ಬೆಳೆಗಾರರ ವ್ಯಥೆ

    ಲಕ್ಷ್ಮೇಶ್ವರ: ‘ಊರೆಲ್ಲ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದರು’ ಎಂಬಂತೆ ರೈತರೆಲ್ಲ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಶೇಂಗಾ ಮಾರಾಟ ಮಾಡಿದ ನಂತರ ಸರ್ಕಾರ ಈಗ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ಆರಂಭಿಸಲು ಮುಂದಾಗಿದೆ. ಇದು ಶೇಂಗಾ ಬೆಳೆಗಾರರ ಅಸಮಾಧಾನಕ್ಕೆ ಕಾರಣವಾಗಿದೆ.

    ಲಕ್ಷ್ಮೇಶ್ವರ ತಾಲೂಕೊಂದರಲ್ಲಿಯೇ 12535 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆಯಲಾಗಿತ್ತು. ಮುಂಗಾರಿನ ಗೆಜ್ಜೆ ಮತ್ತು ಬಳ್ಳಿ ಶೇಂಗಾವನ್ನು ಈಗಾಗಲೇ ಬಹುತೇಕ ರೈತರು ಮುಕ್ತ ಮಾರುಕಟ್ಟೆಯಲ್ಲಿ ಕ್ವಿಂಟಾಲ್​ಗೆ 3500 ರೂ. ದಿಂದ 4600 ರೂ. ವರೆಗೆ ಗೆಜ್ಜೆ ಶೇಂಗಾ ಮತ್ತು 3100 ರೂ. ದಿಂದ 4500 ರೂ. ವರೆಗೆ ಬಳ್ಳಿ ಶೇಂಗಾವನ್ನು ಮಾರಾಟ ಮಾಡಿದ್ದಾರೆ. ಆದರೆ, ಈಗ ಸರ್ಕಾರ ಧಾರವಾಡ, ಗದಗ ಸೇರಿ 9 ಜಿಲ್ಲೆಗಳಲ್ಲಿ ಬೆಂಬಲ ಬೆಲೆ ಯೋಜನೆಯಡಿ ಕ್ವಿಂಟಾಲ್​ಗೆ 5090 ರೂ. ದರದಲ್ಲಿ ಪ್ರತಿ ಎಕರೆಗೆ 6 ಕ್ವಿಂಟಾಲ್​ನಂತೆ (ಒಬ್ಬ ರೈತರಿಂದ ಗರಿಷ್ಠ 15 ಕ್ವಿಂಟಾಲ್) ಶೇಂಗಾ ನ್ಯಾಫೆಡ್ ಮತ್ತು ಕೆಒಎಫ್​ದಿಂದ ಖರೀದಿಸಲು ಸೂಚನೆ ನೀಡಿದೆ.

    ಲಕ್ಷ್ಮೇಶ್ವರ ಎಪಿಎಂಸಿಯಲ್ಲಿ ಜ. 20ರವರೆಗೆ 47 ಸಾವಿರ ಕ್ವಿಂಟಾಲ್ ಶೇಂಗಾ ಮಾರಾಟವಾಗಿದೆ. ಕಳೆದ ಅಕ್ಟೋಬರ್​ನಲ್ಲಿ ಗೆಜ್ಜೆ ಶೇಂಗಾ, ನವೆಂಬರ್​ನಲ್ಲಿ ಬಳ್ಳಿ ಶೇಂಗಾ ಫಸಲು ರೈತರ ಕೈ ಸೇರಿತ್ತು. ಆಗ ಮುಕ್ತ ಮಾರುಕಟ್ಟೆಯಲ್ಲಿ ದರ ಕಡಿಮೆ ಇದ್ದರೂ ರೈತರು ತಮ್ಮ ಅಡಚಣೆ, ಆಪತ್ತು, ಸಾಲ, ಮದುವೆ, ಮುಂಜಿ ಮತ್ತಿತರ ಕಾರಣಕ್ಕೆ ಅನಿವಾರ್ಯವಾಗಿ ಮಾರಾಟ ಮಾಡಿದ್ದರು. ಆಗ ರೈತರು, ರೈತ ಪರ ಸಂಘಟನೆಗಳು ಶೇಂಗಾ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿದರೂ ಕ್ಯಾರೇ ಎನ್ನದ ಸರ್ಕಾರ ಈಗ ರೈತರೆಲ್ಲ ಶೇಂಗಾ ಮಾರಾಟ ಮಾಡಿದ ಮೇಲೆ ಯಾರ ಲಾಭಕ್ಕಾಗಿ? ಯಾವ ಪುರುಷಾರ್ಥಕ್ಕಾಗಿ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸುತ್ತಿದೆ? ಎಂಬುದು ರೈತರ ಪ್ರಶ್ನೆಯಾಗಿದೆ.

    ಮೊದಲೇ ಆರಂಭಿಸಲಿ: ಈ ವರ್ಷ ಅತಿವೃಷ್ಟಿಯಿಂದ ವಾಣಿಜ್ಯ ಬೆಳೆ ಶೇಂಗಾ ಬೆಳೆ ಹಾನಿಯಾಗಿದೆ. ಇಳುವರಿ ಕುಂಠಿತವಾಗಿದೆ. ಅಂತಹದ್ದರಲ್ಲಿ ಅಳಿದುಳಿದ ಅಲ್ಪ ಶೇಂಗಾವನ್ನು ರೈತರು ಮುಕ್ತಮಾರುಕಟ್ಟೆಯಲ್ಲಿ ಕೈಗೆ ಬಂದ ಬೆಲೆಗೆ ಮಾರಾಟ ಮಾಡಿ ಕೈ ಸುಟ್ಟುಕೊಂಡಿದ್ದಾರೆ. ಆಗ ಕಣ್ಮುಚ್ಚಿ ಕುಳಿತ ಸರ್ಕಾರ ರೈತರೆಲ್ಲ ಶೇಂಗಾ ಮಾರಾಟ ಮಾಡಿದ ಮೇಲೆ ಈಗ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸುತ್ತಿರುವುದು ರೈತರಿಗೆ ಮಾಡಿದ ಮೋಸ. ರೈತರ ಹೆಸರಿನಲ್ಲಿ ಮೊಸಳೆ ಕಣ್ಣೀರು ಸುರಿಸುವ ಸರ್ಕಾರ ಇದುವರೆಗೂ ಮಲಗಿತ್ತೇ ಅಥವಾ ಇದು ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡುವ ಷಡ್ಯಂತ್ರವೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಬೆಳೆ ಹಾನಿ ಪರಿಹಾರ ಕೊಡಬೇಕು. ರೈತರ ಬೆಳೆಗಳು ಮಾರುಕಟ್ಟೆ ಪ್ರವೇಶಿಸುವ ಮೊದಲೇ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಮಾಜಿ ಶಾಸಕ ಎಸ್.ಎನ್. ಪಾಟೀಲ ಒತ್ತಾಯಿಸಿದರು.

    ಶೇಂಗಾ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಲು ಸರ್ಕಾರ ಕೇಳಿದ ಮಾಹಿತಿ ಪೂರೈಸಲಾಗಿದೆ. ಶಿರಹಟ್ಟಿ/ ಲಕ್ಷ್ಮೇಶ್ವರ ತಾಲೂಕಿನಲ್ಲಿ ಮಾಗಡಿ, ಶಿಗ್ಲಿ, ರಣತೂರ ವ್ಯವಸಾಯ ಸೇವಾ ಸಹಕಾರಿ ಸಂಘದ ಮೂಲಕ ಖರೀದಿ ಕೇಂದ್ರ ಆರಂಭಿಸಲು ಮಾಹಿತಿ ಕಳುಹಿಸಲಾಗಿದೆ. ಸರ್ಕಾರದಿಂದ ಖರೀದಿಗೆ ಅನುಮತಿ ದೊರೆತ ಕೂಡಲೆ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು.
    | ಜಿ.ಎಚ್. ಪಾಟೀಲ ಗದಗ ಜಿಲ್ಲಾ ಕೆಒಎಫ್ ಸಹಾಯಕ ವ್ಯವಸ್ಥಾಪಕ

    2 ತಿಂಗಳ ಹಿಂದೆಯೇ ಶೇಂಗಾವನ್ನು ಕ್ವಿಂಟಾಲ್​ಗೆ ಕೇವಲ 3500 ರೂ. ಗೆ ಮಾರಿದ್ದೇವೆ. ಈಗ ಸರ್ಕಾರ 5090 ರೂ. ದರದಲ್ಲಿ ಬೆಂಬಲ ಬೆಲೆ ಯೋಜನೆಯಡಿ ಶೇಂಗಾ ಖರೀದಿಸುವುದರಿಂದ ನಮಗೆ ಅನ್ಯಾಯವಾಗಿದೆ. ಮೊದಲೇ ಸರ್ಕಾರ ಖರೀದಿ ಕೇಂದ್ರ ಆರಂಭಿಸಿದ್ದರೆ ನಮಗೂ ಲಾಭವಾಗುತ್ತಿತ್ತು. ಈಗ ಯಾರಿಗಾಗಿ ಈ ಖರೀದಿ ಕೇಂದ್ರ?
    | ಬಾಪುಗೌಡ ಪಾಟೀಲ ಯಳವತ್ತಿ ಗ್ರಾಮದ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts