More

    ಉದ್ಯಾನಗಳ ನಿರ್ವಹಣೆಗೆ ಅನಾದರ

    ಹಾನಗಲ್ಲ: ಪುರಸಭೆಯ ನಿರ್ಲಕ್ಷ್ಯಂದಾಗಿ ಪಟ್ಟಣದ ನವನಗರ ಬಡಾವಣೆಯಲ್ಲಿರುವ ಎರಡು ಉದ್ಯಾನಗಳು ಸಂಪೂರ್ಣ ಹಾಳಾಗಿದ್ದು, ಹಂದಿ-ನಾಯಿಗಳ ವಾಸಸ್ಥಾನವಾಗಿ ಮಾರ್ಪಟ್ಟಿವೆ.

    ಉದ್ಯಾನ ನಿರ್ವಣಕ್ಕೆ ಪುರಸಭೆಯಿಂದ 2013ರಲ್ಲಿ 10 ಲಕ್ಷ ರೂ.ವ್ಯಯಿಸಲಾಗಿದೆ. ನಿರ್ವಹಣೆ ಕೊರತೆಯಿಂದ ಇದೀಗ ಕಸದ ತೊಟ್ಟಿಯಾಗಿದೆ. ಉದ್ಯಾನದಲ್ಲಿ ನೆಟ್ಟಿದ್ದ ವಿವಿಧ ಗಿಡಗಳು ಮಾಯವಾಗಿ ಮುಳ್ಳು ಕಂಟಿಗಳು ಬೆಳೆದು ನಿಂತಿದೆ. ಸುತ್ತಲೂ ಅಳವಡಿಸಿದ್ದ ಗ್ರಿಲ್​ಗಳು ಅಲ್ಲಲ್ಲಿ ಮುರಿದು ಬಿದ್ದಿವೆ.

    ನವನಗರ ಬಡಾವಣೆಯಲ್ಲಿ ಎರಡು ಉದ್ಯಾನಗಳನ್ನು ಏಕಕಾಲಕ್ಕೆ ನಿರ್ವಿುಸಲಾಗಿದೆ. ಎರಡರ ಸ್ಥಿತಿಯೂ ಭಿನ್ನವಾಗಿಲ್ಲ. ಕೆಲವೇ ದಿನಗಳ ಕಾಲ ಹಸಿರಾಗಿದ್ದ ಈ ಉದ್ಯಾನಗಳು ನೀರಿನ ಸಮಸ್ಯೆ ಹಾಗೂ ನಿರ್ವಹಣೆ ಮಾಡುವರಿಲ್ಲದೆ ದುಸ್ಥಿತಿಗೆ ತಲುಪಿವೆ. ಒಂದು ಉದ್ಯಾನದ ಪಕ್ಕದಲ್ಲೇ ಕಂದಾಯ ಇಲಾಖೆ ವಸತಿ ಸಂಕೀರ್ಣವಿದೆ. ಇಲ್ಲಿ ಹಲವು ಕುಟುಂಬಗಳು ವಾಸವಾಗಿವೆ. ಆದರೆ, ಅವರಾರೂ ಉದ್ಯಾನದ ಉಸ್ತುವಾರಿ ಮಾಡುತ್ತಿಲ್ಲ. ಉದ್ಯಾನದಲ್ಲಿನ ತ್ಯಾಜ್ಯ, ಕಸದ ವಾಸನೆಗೆ ಈ ಕುಟುಂಬಗಳು ಹೈರಾಣಾಗಿವೆ.

    ಉದ್ಯಾನಗಳಲ್ಲಿ ಮಕ್ಕಳು ಆಟವಾಡುವುದಕ್ಕಾಗಿ ಅಳವಡಿಸಿದ್ದ ದೈಹಿಕ ಶ್ರಮದ ಆಟಿಕೆಗಳು ತುಕ್ಕು ಹಿಡಿದು ಹಾಳಾಗಿವೆ. ಹಿಂದೊಮ್ಮೆ ಉದ್ಯಾನಗಳ ನಿರ್ವಹಣೆಯನ್ನು ಆಯಾ ಬಡಾವಣೆಗಳ ನಾಗರಿಕರು ಅಥವಾ ಸ್ಥಳೀಯ ಸಂಘ-ಸಂಸ್ಥೆಗಳು ದತ್ತು ಪಡೆಯುವಂತೆ ಮನವೊಲಿಸಲು ಪುರಸಭೆಯಲ್ಲಿ ಚರ್ಚೆ ನಡೆದಿತ್ತು. ಆದರೆ, ಅದು ಅನುಷ್ಠಾನಗೊಳ್ಳಲಿಲ್ಲ. ಉದ್ಯಾನಗಳಲ್ಲಿ ಕೊರೆಯಿಸಿದ್ದ ಕೊಳವೆಬಾವಿಗಳೂ ಬತ್ತಿ ಹೋಗಿದ್ದರಿಂದ ಉದ್ಯಾನಗಳ ಸ್ಥಿತಿ ಅಧೋಗತಿಗೆ ತಲುಪಿವೆ.

    ಪುರಸಭೆ ವ್ಯಾಪ್ತಿಯಲ್ಲಿನ ಉದ್ಯಾನ ಹಾಳಾಗಲು ಅನುದಾನದ ಕೊರತೆ ಒಂದೆಡೆಯಾದರೆ, ಇನ್ನೊಂದೆಡೆ ಸಿಬ್ಬಂದಿ ಸಮಸ್ಯೆ ಕಾರಣ. ಪುರಸಭೆ ತೆರಿಗೆ ಹಣ ನೀರು ಸರಬರಾಜು, ಸಿಬ್ಬಂದಿ ವೇತನ, ವಿದ್ಯುತ್ ಸಲಕರಣೆ, ನೀರು ಸರಬರಾಜಿನ ಬಿಡಿಭಾಗಗಳನ್ನು ಖರೀದಿಸಲು ಸಾಕಾಗುತ್ತಿಲ್ಲ. ಇಂಥ ಸ್ಥಿತಿಯಲ್ಲಿ ಉದ್ಯಾನಗಳ ನಿರ್ವಹಣೆ ಹೇಗೆ ಸಾಧ್ಯ ಎಂಬುದು ಅಧಿಕಾರಿಗಳ ಸಂಕಟ.

    ನವನಗರ ಬಡಾವಣೆಯಲ್ಲಿ ಎರಡು ಉದ್ಯಾನಗಳಿದ್ದರೂ, ಅವುಗಳ ನಿರ್ವಹಣೆಯಿಲ್ಲದೇ ಬಿಡಾಡಿ ದನಗಳ, ಹಂದಿ, ನಾಯಿಗಳಿಗೆ ಅನುಕೂಲವಾಗಿದೆ. ಇದನ್ನು ಸರಿಯಾಗಿ ನಿರ್ವಹಿಸಲು ಪುರಸಭೆ ಆಸಕ್ತಿ ತೋರುತ್ತಿಲ್ಲ. ಮಳೆಗಾಲದಲ್ಲಾದರೂ ಗಿಡ ನೆಟ್ಟು, ಇಲ್ಲಿನ ಜನರಿಗೆ ಮನವಿ ಮಾಡಿದ್ದರೆ ಅವರೆ ನೋಡಿಕೊಳ್ಳುತ್ತಿದ್ದರು. ಅಂಥದೊಂದು ಪ್ರಯತ್ನ ಕೈಗೊಳ್ಳಬೇಕಿದೆ.

    | ಪ್ರಕಾಶ ತಳ್ಳಳ್ಳಿ, ನವನಗರ ನಿವಾಸಿ

    ಪುರಸಭೆಯ ವ್ಯಾಪ್ತಿಯಲ್ಲಿ ಒಟ್ಟು 13 ಉದ್ಯಾನಗಳಿವೆ. ಸಾರ್ವಜನಿಕ ಆಸ್ತಿ ತೆರಿಗೆ ಹಣ ಯಾವುದಕ್ಕೂ ಸಾಕಾಗುತ್ತಿಲ್ಲ. ವಿಶೇಷ ಅನುದಾನಗಳಿಲ್ಲ. ಹೀಗಾಗಿ ಉದ್ಯಾನಗಳ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಸಾರ್ವಜನಿಕರು, ಸ್ಥಳೀಯ ಸಂಸ್ಥೆಗಳು ಹಾಗೂ ಬ್ಯಾಂಕ್​ಗಳು ಆಸಕ್ತಿ ತೋರಿದರೆ ಅವರ ಸಹಭಾಗಿತ್ವದಲ್ಲಿ ಉದ್ಯಾನದ ನಿರ್ವಹಣೆ ಮಾಡಬಹುದಾಗಿದೆ. ಈ ಕುರಿತು ಸಭೆ ಕೈಗೊಳ್ಳುತ್ತೇವೆ.

    | ಎಚ್.ಎನ್. ಭಜಕ್ಕನವರ ಪುರಸಭೆ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts