More

    ಉದ್ದುದ್ದ ಬಾಲ, ಬೆರಗಿನ ಮಾಯಾಜಾಲ

    ಹುಬ್ಬಳ್ಳಿ: ನಗರದ ಹೊರವಲಯದಲ್ಲಿರುವ ಕುಸುಗಲ್ ರಸ್ತೆಯ ಆಗಸದಲ್ಲಿ ಸೋಮವಾರ ದಿನವಿಡೀ ನೂರು ಅಡಿ ಕಾಳಿಂಗ ಸರ್ಪ, ಮಿಕ್ಕಿ ಮೌಸ್, ಡಾಲ್ಪಿನ್​ಗಳು ಲೀಲಾಜಾಲವಾಗಿ ಹಾರಾಡಿದವು.

    ಹೌದು, ಇಂಥ ಭಿನ್ನ-ವಿಭಿನ್ನ ಆಕಾರಗಳ, ವಿಶೇಷ ವ್ಯಕ್ತಿಗಳ ಗಾಳಿಪಟಗಳ ಹಾರಾಟವನ್ನು ನೋಡಲು ಅಲ್ಲಿ ನೂರಾರು ಜನ ಸೇರಿದ್ದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪೋಷಿತ ಕ್ಷಮತಾ ಸೇವಾ ಸಂಸ್ಥೆ ಆಯೋಜಿಸಿರುವ 2 ದಿನಗಳ ಹುಬ್ಬಳ್ಳಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಸೋಮವಾರ ಆರಂಭಗೊಂಡಿದ್ದು, ದೇಶ-ವಿದೇಶಗಳ ತರಹೇವಾರಿ ಗಾಳಿಪಟಗಳು ಜನರನ್ನು ಆಕರ್ಷಿಸಿದವು.

    ನೂರು ಅಡಿ ಉದ್ದದ ಕಾಳಿಂಗ ಸರ್ಪ ಹಾಗೂ ರಾಣಿಯ ಪ್ರತಿರೂಪದ ಗಾಳಿಪಟ ಲೀಲಾಜಾಲವಾಗಿ ಹಾರಾಡುವ ಮೂಲಕ ಬೆರಗು ಮೂಡಿಸಿದ್ದು ಸುಳ್ಳಲ್ಲ. ಮಿಕ್ಕಿ ಮೌಸ್, ಟಾಮ್ ಆಂಡ್ ಜೆರ್ರಿ, ಸಾಂತಾ ಕ್ಲಾಸ್ ಮಕ್ಕಳನ್ನಷ್ಟೇ ಅಲ್ಲದೆ ದೊಡ್ಡವರನ್ನು ಸೆಳೆಯಿತು. ಮಹಾತ್ಮಾ ಗಾಂಧೀಜಿಯ 150ನೇ ಜನ್ಮ ವರ್ಷಾಚರಣೆ ಸಂದೇಶವನ್ನು ಗಾಳಿಪಟದ ಮೂಲಕ ಸಾರಲಾಯಿತು.

    ಆಕ್ಟೋಪಸ್, ಬೆಂಗಾಲ ಬಿಳಿ ಹುಲಿ, ಸ್ಟ್ರಾಬೆರಿ, ಹದ್ದು, ಹೆಣ್ಣು ಮಕ್ಕಳಿಗೆ ಶಿಕ್ಷಣದ ಮಹತ್ವ ಸಾರುವ ಗಾಳಿಪಟಗಳು ಬಾನಿನಲ್ಲಿ ಹಾರಾಡಿದವು. ಬೆಳಗಾವಿಯ ಕೀರ್ತಿ ಸುರಂಜನ್ ಹಾಗೂ ದೊಡ್ಡಬಳ್ಳಾಪುರದ ಸುಹಾಸ ಒಂದೇ ದಾರದಲ್ಲಿ ಸಾಲಾಗಿ ಜೋಡಿಸಿರುವ 108 ಹಾಗೂ 120 ಗಾಳಿಪಟಗಳ ರೈಲು ಬಂಡಿ ಗಾಳಿಪಟವನ್ನು ಹಾರಿಸಿದರು. ಬೆಂಗಳೂರಿನ ಯು.ಕೆ. ರಾವ್ ರಾಣಿ ರೂಪದ 100 ಅಡಿ ಗಾಳಿಪಟದೊಂದಿಗೆ ಬಂದಿದ್ದಾರೆ.

    ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಬೆಳಗಾವಿ ಶಾಸಕ ಅಭಯ ಪಾಟೀಲ, ಬೆಳಗಾವಿಯಲ್ಲಿ ಕಳೆದ 10 ವರ್ಷಗಳಿಂದ ಗಾಳಿಪಟ ಉತ್ಸವ ಆಯೋಜಿಸುತ್ತಿದ್ದೇನೆ. ಮೊದಲ ಬಾರಿ ಆಯೋಜನೆಗೆ ಮುಂದಾದಾಗ ಎಂಎಲ್​ಎಗೆ ಬೇರೆ ಕೆಲಸವಿಲ್ಲ ಎಂದು ಅಪಹಾಸ್ಯ ಮಾಡಿದ್ದರು. ಇಂದು ಗಾಳಿಪಟ ಉತ್ಸವದಲ್ಲಿ 3-4 ಕೋಟಿ ರೂ. ವ್ಯವಹಾರ ನಡೆಯುತ್ತಿದೆ. ಇಲ್ಲಿ ಸರ್ಕಾರದ್ದು ಏನೂ ಇಲ್ಲ. ಎಲ್ಲವೂ ಸಹಕಾರದಿಂದ ನಡೆಯುತ್ತಿದೆ ಎಂದರು.

    ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ ಪುರಾಣಿಕ, ಭಾರತದ ಮೊದಲ ಮಹಿಳಾ ಕೈಟ್ ಫ್ಲೈಯರ್ ಭಾವನಾ ಮೆಹ್ತಾ ಅವರನ್ನು ಸನ್ಮಾನಿಸಲಾಯಿತು. ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಮೇಯರ್ ಸುಧೀರ ಸರಾಫ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ, ಜ್ಯೋತಿ ಜೋಶಿ, ಲಿಂಗರಾಜ ಪಾಟೀಲ, ಮಾಜಿ ಉಪ ಮೇಯರ್ ಮೇನಕಾ ಹುರುಳಿ, ಶಿವು ಮೆಣಸಿನಕಾಯಿ, ಸಂತೋಷ ಚವ್ಹಾಣ, ರವಿ ನಾಯ್ಕ, ನಾಗೇಶ ಕಲಬುರ್ಗಿ, ಇತರರು ಇದ್ದರು.

    ಕ್ಷಮತಾ ಸೇವಾ ಸಂಸ್ಥೆ ಸಂಚಾಲಕ ಗೋವಿಂದ ಜೋಶಿ ಸ್ವಾಗತಿಸಿದರು. ಅನಿಲಕುಮಾರ ಮಾಲಗಾರ ನಿರೂಪಿಸಿದರು. ಕಿರಣ ಉಪ್ಪಾರ ನೇತೃತ್ವದಲ್ಲಿ ವಿವಿಧ ಶಾಲೆಗಳ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು.

    ವಿದೇಶಿಗರೂ ಭಾಗಿ

    ನೆದರ್​ಲ್ಯಾಂಡ್, ಟುನಿಷಿಯಾ, ಯುನೈಟೆಡ್ ಕಿಂಗಡಮ್ ಇಂಡೊನೇಷಿಯಾ, ಥೈಲ್ಯಾಂಡ್, ಈಸ್ಟೋನಿಯಾ, ಲಿಥುನಿಯಾ ಸೇರಿ 7 ರಾಷ್ಟ್ರಗಳ 15 ಜನ ಕೈಟ್ ಫ್ಲೈಯರ್ ಹಾಗೂ ಗುಜರಾತ್, ಮಹಾರಾಷ್ಟ್ರ, ಪಂಜಾಬ್ ಸೇರಿ ದೇಶದ ವಿವಿಧೆಡೆಯ 27 ಜನ ಫ್ಲೈಯರ್​ಗಳು ಪಾಲ್ಗೊಂಡಿದ್ದಾರೆ. ನೆದರ್​ಲ್ಯಾಂಡ್​ನ ಪೀಟರ್ ಹಾಗೂ ಫ್ರಾನ್ಸಿಸ್ಕಾ ಜನಸೆನಸ್, ಯುನೈಟೆಡ್ ಕಿಂಗಡಮ್ ರಾಬರ್ಟ್ ವಿಲಿಯಂ, ಇಂಡೊನೇಷಿಯಾದ ಅಮೆಲ್ಯಾ ಆಂಗ್ರೖೆನಿ ಪ್ರಮುಖರು. ಭಾರತದ ಮೊದಲ ಮಹಿಳಾ ಕೈಟ್ ಫ್ಲೈಯರ್ ಭಾವನಾ ಮೆಹ್ತಾ ಸಹ ಪಾಲ್ಗೊಂಡಿದ್ದಾರೆ. 2 ದಿನಗಳ ಗಾಳಿಪಟ ಉತ್ಸವದಲ್ಲಿ 300ಕ್ಕೂ ಹೆಚ್ಚು ಬಗೆ ಬಗೆಯ ಗಾಳಿಪಟಗಳು ಹಾರಾಡಲಿವೆ.

    ಫಿಟ್ನೆಸ್ ಸಮಸ್ಯೆ ಕಾಡುತ್ತಿದೆ

    ಇಂದಿನ ಜನಾಂಗ ಶೋಕಿ ಜೀವನಶೈಲಿಗೆ ಒಳಗಾಗಿರುವುದರಿಂದ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದೆ ಎಂದು ಪೊಲೀಸ್ ಆಯುಕ್ತ ಆರ್. ದಿಲೀಪ್ ಹೇಳಿದರು. ಹುಬ್ಬಳ್ಳಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಎಸಿ ರೂಮ್ಲ್ಲಿಯೇ ದೈಹಿಕ ಕಸರತ್ತು ನಡೆಸುವ ಸಮಾಜವನ್ನು ನಾವು ನೋಡುತ್ತಿದ್ದೇವೆ. ಪೊಲೀಸ್ ಇಲಾಖೆ ಸಹ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದೆ. ಗಾಳಿ-ಬೆಳಕು ನೈಸರ್ಗಿಕವಾಗಿ ಇರುವ ಸ್ಥಳದಲ್ಲಿ ವ್ಯಾಯಾಮ ಮಾಡುವುದು ಆರೋಗ್ಯಕರ ಎಂದರು.

    ಗಾಳಿಪಟ ಹಾರಾಟವು ದೇಹಾರೋಗ್ಯಕ್ಕೆ ಉತ್ತಮ. ಇಂಥ ಚಟುವಟಿಕೆಗಳು ಹೆಚ್ಚು ಹೆಚ್ಚಾಗಿ ನಡೆದರೆ, ಮನುಷ್ಯ ಸಮಾಜಮುಖಿಯಾಗಿ ಬೆರೆಯುತ್ತಾನೆ. ಜನತೆ ಉತ್ತಮ ಹವ್ಯಾಸಗಳಲ್ಲಿ ತೊಡಗಿಕೊಂಡರೆ ಪೊಲೀಸರ ಕೆಲಸವೂ ಕಡಿಮೆಯಾಗುತ್ತದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts