More

    ಉತ್ತಮ ಚಿಂತನೆಯಿಂದ ಆರೋಗ್ಯ ವೃದ್ಧಿ

    ಚನ್ನರಾಯಪಟ್ಟಣ: ಹಣ ಸಂಪಾದಿಸುವ ಚಿಂತೆಯನ್ನು ಬದಿಗೊತ್ತಿ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಚಿಂತನೆ ನಡೆಸುವುದು ಸೂಕ್ತ ಎಂದು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಹೇಳಿದರು.


    ಪಟ್ಟಣದ ಡಿ.ಕಾಳೇನಹಳ್ಳಿ ರಸ್ತೆಯಲ್ಲಿ ತೆರೆದಿರುವ ನಮ್ಮ ಕ್ಲಿನಿಕ್ ಕೇಂದ್ರವನ್ನು ಬುಧವಾರ ವೀಕ್ಷಿಸಿ ಮಾತನಾಡಿ, ಆರೋಗ್ಯದೊಂದಿಗೆ ಸದೃಢವಾಗಿದ್ದರೆ ಬದುಕಿನಲ್ಲಿ ಏನುಬೇಕಾದರೂ ಸಂಪಾದಿಸಬಹುದು. ಶಕ್ತಿ ಮೀರಿ ಸಾಧನೆ ಮಾಡಬಹುದು. ಆರೋಗ್ಯವೇ ಸರಿ ಇಲ್ಲದ ಮೇಲೆ ಅದೆಷ್ಟೇ ಹಣವಿದ್ದರೂ ವ್ಯರ್ಥವಾಗಲಿದೆ. ಆದ್ದರಿಂದ ಆರೋಗ್ಯದಲ್ಲಿ ಯಾವುದೇ ಸಣ್ಣ ವ್ಯತ್ಯಾಸ ಕಂಡುಬಂದರೂ ತಕ್ಷಣವೇ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಿ. ಪಟ್ಟಣದ ಜನತೆಯ ಆರೋಗ್ಯದ ಸಲುವಾಗಿ ರಾಜ್ಯ ಸರ್ಕಾರವು ತೆರೆದಿರುವ ನಮ್ಮ ಕ್ಲಿನಿಕ್‌ನ ಸದ್ಬಳಕೆ ಮಾಡಿಕೊಳ್ಳಿ ಎಂದು ಜನತೆಗೆ ಸಲಹೆ ನೀಡಿದರು.


    ನಮ್ಮ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದ ಶಾಸಕ ಸಿ.ಎನ್.ಬಾಲಕೃಷ್ಣ, ಪಟ್ಟಣದಲ್ಲಿ ಎರಡು ಕಡೆ ನಮ್ಮ ಕ್ಲಿನಿಕ್ ತೆರೆಯಲಾಗಿದ್ದು, ಇದರಿಂದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸಾಕಷ್ಟು ಒತ್ತಡ ಕಡಿಮೆಯಾಗಲಿದೆ. ಜನಸಂಖ್ಯೆ ಆಧಾರದ ಮೇಲೆ ಮತ್ತೊಂದು ನಮ್ಮ ಕ್ಲಿನಿಕ್ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

    ನಮ್ಮ ಕ್ಲಿನಿಕ್‌ನಲ್ಲಿ 12 ಸೇವೆಗಳು ಲಭ್ಯವಿದ್ದು, 14 ರೀತಿಯ ತಪಾಸಣೆಗಳನ್ನು ಮಾಡಲಾಗುವುದು. ಇದರಿಂದ ಪಟ್ಟಣದ ಜನತೆಗೆ ಹೆಚ್ಚಿನ ಅನುಕೂಲವಾಗಲಿದೆ. ಮಧುಮೇಹ ಇರುವವರ ತಪಾಸಣೆಗೆ ಎಚ್‌ಬಿಎಒನ್‌ಸಿ ಯಂತ್ರ ಅಗತ್ಯವಿದ್ದು, ಶೀಘ್ರದಲ್ಲಿಯೇ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.


    ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕಟ್ಟಡದ ಕೊರತೆ ಇದ್ದು, ಸರ್ಕಾರದ ಗಮನ ಸೆಳೆದ ಪರಿಣಾಮ ಮೇಲಂತಸ್ತು ನಿರ್ಮಾಣಕ್ಕೆ ಒಂದೂವರೆ ಕೋಟಿ ರೂ. ಮಂಜೂರಾಗಿದೆ. ಇನ್ನು ಹಿರೀಸಾವೆ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ನವೀಕರಣಕ್ಕೆ 50 ಲಕ್ಷ ರೂ. ಅನುದಾನಕ್ಕೆ ಅನುಮೋದನೆ ದೊರೆತಿದೆ ಎಂದು ಮಾಹಿತಿ ನೀಡಿದರು.


    ತಹಸೀಲ್ದಾರ್ ಬಿ.ಎಂ.ಗೋವಿಂದರಾಜ್, ಪುರಸಭಾ ಅಧ್ಯಕ್ಷೆ ರಾಧಾ ಮಂಜುನಾಥ್, ಉಪಾಧ್ಯಕ್ಷೆ ಲಕ್ಷ್ಮೀ, ಸ್ಥಾಯಿ ಸಮಿತಿ ಅಧ್ಯಕ್ಷೆ ಬನಶಂಕರಿ, ನಾಮನಿರ್ದೇಶನ ಸದಸ್ಯ ನಂಜುಂಡ ಮೈಮ್, ಸದಸ್ಯರಾದ ಧರಣೀಶ್, ಜಗದೀಶ್, ಡಿಎಚ್‌ಒ ಡಾ.ಶಿವಸ್ವಾಮಿ, ಟಿಎಚ್‌ಒ ಡಾ.ಕಿಶೋರ್, ನಮ್ಮ ಕ್ಲಿನಿಕ್‌ನ ವೈದ್ಯೆ ಡಾ.ಕೀರ್ತನಾ ಮುಖಂಡರಾದ ಕುಂಬಾರಹಳ್ಳಿ ರಮೇಶ್, ಅನಿಲ್ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts