More

    ಉಡಾನ್ ಯೋಜನೆಯಿಂದ ಶುಕ್ರದೆಸೆ

    ಹುಬ್ಬಳ್ಳಿ: ಅಂತಾರಾಷ್ಟ್ರೀಯ ದರ್ಜೆಯ ವಿಮಾನ ನಿಲ್ದಾಣವಾಗಿ ಮಾರ್ಪಟ್ಟ ಬಳಿಕ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. 2019ರಲ್ಲಿ ಹುಬ್ಬಳ್ಳಿ ಮಾರ್ಗವಾಗಿ 6,900 ವಿಮಾನಗಳು ಹಾರಾಟ ನಡೆಸಿದ್ದು, ಒಟ್ಟು 5 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಇಲ್ಲಿಂದ ಸಂಚರಿಸಿದ್ದಾರೆ.

    ಉಡೇ ದೇಶ್ ಕಾ ಆಮ್ ನಾಗರಿಕ್ (ಉಡಾನ್) ಯೋಜನೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣ ಆಯ್ಕೆಯಾದ ಬಳಿಕ ವಿಮಾನಯಾನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ಹುಬ್ಬಳ್ಳಿಯಿಂದ ಬೆಂಗಳೂರು, ನವದೆಹಲಿ, ಹೈದರಾಬಾದ್, ಚೆನ್ನೈ, ಕೊಚ್ಚಿ ಮತ್ತಿತರ ಮಹಾನಗರಗಳಿಗೆ ಉಡಾನ್ ಯೋಜನೆಯಡಿ ವಿಮಾನ ಸೇವೆ ನೀಡಲಾಗುತ್ತಿದೆ. ಇದರಿಂದಾಗಿ ಪ್ರಯಾಣಿಕರು ವಿಮಾನ ಪ್ರಯಾಣದತ್ತ ಆಸಕ್ತಿ ತೋರುತ್ತಿದ್ದಾರೆ.

    2019ರ ಜನವರಿಯಿಂದ ಡಿಸೆಂಬರ್ ಕೊನೆಯವರೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ 6,930 ವಿಮಾನಗಳು ಟೇಕಾಫ್ ಮತ್ತು ಲ್ಯಾಂಡಿಂಗ್ ಮಾಡಿವೆ. 5,15,560 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ನಿತ್ಯ ಅಂದಾಜು 18 ವಿಮಾನಗಳ ಹಾರಾಟ ಹಾಗೂ 1,300 ಪ್ರಯಾಣಿಕರು ಸಂಚರಿಸಿದ್ದಾರೆ. 2018ಕ್ಕೆ ಹೋಲಿಸಿದರೆ 2019ರಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.130ರಷ್ಟು ಹೆಚ್ಚಳ ಕಂಡಿದೆ. ಕಾಗೋ ಸೇವೆಗೂ ಕೂಡ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ಪ್ರಸಕ್ತ ವರ್ಷ 110 ಮೆಟ್ರಿಕ್ ಟನ್ ಸರಕು ಸಾಗಣೆಯಾಗಿದೆ ಎಂದು ಮೂಲಗಳು ತಿಳಿಸಿವೆ.ಹುಬ್ಬಳ್ಳಿ- ಮುಂಬೈ ಸೇವೆ 20ರಿಂದ

    ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿ ಹಾಗೂ ಮುಂಬೈ ನಡುವೆ ವಿಮಾನ ಸೇವೆ ಉತ್ತರ ಕರ್ನಾಟಕ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಏರ್ ಇಂಡಿಯಾ ಸಂಸ್ಥೆ ಜ.20ರಿಂದ ಹುಬ್ಬಳ್ಳಿ- ಮುಂಬೈ ನಡುವೆ ನೇರ ವಿಮಾನ ಸೇವೆ ಆರಂಭಿಸಲಿದೆ. ವಾರಕ್ಕೆ ನಾಲ್ಕು ದಿನ (ಭಾನುವಾರ, ಸೋಮವಾರ, ಗುರುವಾರ ಹಾಗೂ ಶುಕ್ರವಾರ) ಎ-320 ವಿಮಾನ ಸಂಚರಿಸಲಿದೆ. ಮಂಗಳವಾರ, ಬುಧವಾರ ಹಾಗೂ ಶನಿವಾರ ಹುಬ್ಬಳ್ಳಿ- ಬೆಂಗಳೂರು ನಡುವೆ ಸಂಚರಿಸಲಿದೆ. ಆನ್​ಲೈನ್ ಟಿಕೆಟ್ ಬುಕಿಂಗ್ ಈಗಾಗಲೇ ಆರಂಭಿಸಲಾಗಿದೆ. ಇಂಡಿಗೋ ಕೂಡ ಹುಬ್ಬಳ್ಳಿ- ಮುಂಬೈ ಸೇವೆಗೆ ಆಸಕ್ತಿ ತೋರುತ್ತಿದೆ ಎಂದು ಮೂಲಗಳು ತಿಳಿಸಿವೆ.

    ವರ್ಷದಿಂದ ವರ್ಷಕ್ಕೆ ಹುಬ್ಬಳ್ಳಿಯಲ್ಲಿ ವಿಮಾನಗಳು ಮತ್ತು ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. 2019ರಲ್ಲಿ 5 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಪ್ರಯಾಣಿಸಿದ್ದಾರೆ. 2020ರಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಳವಾಗುವ ನಿರೀಕ್ಷೆ ಇದೆ.

    | ಪ್ರಮೋದ ಠಾಕರೆ, ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts