More

    ಇದ್ದೂ ಇಲ್ಲದಂತಾದ ಸುಸಜ್ಜಿತ ಸೇತುವೆ, ಸರ್ವಋತು ರಸ್ತೆ

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
    ಸೇತುವೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಂಧು ಜೋಡಿಸುವ ರಸ್ತೆ ಬಳಿಯ ಕಟ್ಟಡಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಪರಿಹಾರ ಹಣ ಬಾಕಿ ಉಳಿಸಿಕೊಂಡಿದ್ದರಿಂದ ಸಂಪರ್ಕ ಸಮಸ್ಯೆ ಬಿಗಡಾಯಿಸುತ್ತಿದೆ. ನಮ್ಮ ಗ್ರಾಮ, ನಮ್ಮ ಪಥ ಯೋಜನೆಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಸರ್ವಋತು ರಸ್ತೆ, 5 ಕೋಟಿ ರೂ. ವೆಚ್ಚದಲ್ಲಿ ವರಾಹ ಶ್ರೀ ಮಹಾರಾಜ ಸ್ವಾಮಿ ದೇವಸ್ಥಾನ ಬಳಿ ಸೌಪರ್ಣಿಕಾ ನದಿಗೆ ನಿರ್ಮಿಸಿದ ಸೇತುವೆ ಇದ್ದೂ ಇಲ್ಲಂತಾಗಿದೆ. ಮೂರು ವರ್ಷದಿಂದ ಸೇತುವೆಯಿಂದ ಎಡಕ್ಕೆ ಹೊರಳಿ ಅಪಾಯಕಾರಿ ಕಡಿದಾದ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸೇರಿ ಪ್ರಯಾಣ ಮುಂದುವರಿಸುವುದು ಅನಿವಾರ್ಯ. ಕಡಿದಾದ ರಸ್ತೆ ಏರುವ ಸಂದರ್ಭ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ವಾಹನ ಗಮನಕ್ಕೆ ಬಾರದೆ, ಸಮುದ್ರ ವೀಕ್ಷಣೆಗಾಗಿ ರಾಷ್ಟ್ರೀಯ ಹೆದ್ದಾರಿ ಬದಿ ವಾಹನಗಳನ್ನು ಪಾರ್ಕ್ ಮಾಡುವುದರಿಂದ ಅಪಘಾತಕ್ಕೆ ಕಾರಣವಾಗುತ್ತಿದೆ. ಹಲವು ವರ್ಷದ ಹೋರಾಟ ಫಲವಾಗಿ ಮೂರು ವರ್ಷದ ಹಿಂದೆ ಮರವಂತೆ ಸೌಪರ್ಣಿಕಾ ನದಿಗೆ ಸೇತುವೆ ಲೋಕೋಪಯೋಗಿ ಇಲಾಖೆ ಮೂಲಕ ನಿರ್ಮಿಸಲಾಗಿದೆ. ದೇವಸ್ಥಾನ ಬಳಿ ಹೆದ್ದಾರಿ ಬಳಿ ಖಾಸಗಿ ಜಾಗವಿದ್ದು, ಕಟ್ಟಡ ಕೂಡ ಇದೆ. ಹೆದ್ದಾರಿ ಪಕ್ಕದ 5 ಸೆಂಟ್ಸ್ ಜಾಗ ಹೆದ್ದಾರಿ ಇಲಾಖೆ ವಶಕ್ಕೆ ಪಡೆದು 2.60 ಲಕ್ಷ ರೂ. ಪರಿಹಾರ ನೀಡಿದೆ. ಆದರೆ ಸ್ವಾಗತ ಗೋಪುರ ಬಳಿ ಇರುವ ಕಟ್ಟಡಕ್ಕೆ ಪರಿಹಾರ ನೀಡದಿರುವುದರಿಂದ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಕಟ್ಟಡಕ್ಕೆ ಈಗ ಲೋಕೋಪಯೋಗಿ ಇಲಾಖೆಯಿಂದ ಪರಿಹಾರ ಕೊಡಲು ಆಗುವುದಿಲ್ಲ. ಎನ್‌ಎಚ್‌ನವರೇ ಪರಿಹಾರ ನೀಡಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಸರಿ ಮಾಡಿಕೊಟ್ಟರೆ ಲೋಕೋಪಯೋಗಿ ಇಲಾಖೆ ರಸ್ತೆ ನಿರ್ಮಿಸಿಕೊಡಲಿದೆ ಎಂದು ಇಲಾಖೆ ಸಹಾಯಕ ಅಭಿಯಂತ ವಿಜಯವಾಣಿಗೆ ತಿಳಿಸಿದ್ದಾರೆ.

    ಹೈವೇಯಲ್ಲಿ ಬಸ್ ನಿಲ್ಲಿಸಿದರೆ ಅಪಾಯ
    ಮರವಂತೆ ವರಾಹ ಶ್ರೀ ಮಹಾರಾಜ ಸ್ವಾಮಿ ದೇವಸ್ಥಾನ ಹಾಗೂ ರಾಷ್ಟ್ರೀಯ ಹೆದ್ದಾರಿ ಕೂಡು ಮಾರ್ಗ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೂ ಮೊದಲು ಸಮತಟ್ಟಾಗಿತ್ತು. ಹೆದ್ದಾರಿ ವಿಸ್ತರಣೆ ನಿಮಿತ್ತ ಹೆದ್ದಾರಿ ಎತ್ತರ ಹೆಚ್ಚಿಸಿದ್ದರಿಂದ ದೇವಸ್ಥಾನ ಹಾಗೂ ಹೆದ್ದಾರಿ ನಡುವೆ ಎತ್ತರ ನಿರ್ಮಾಣವಾಗಿದೆ. ಹೈವೇಯಲ್ಲೇ ಬಸ್‌ಗಳನ್ನು ನಿಲ್ಲಿಸುವುದು ಕೂಡ ಅಪಾಯಕಾರಿ. ಕಡಿದಾದ ಹಾದಿ ಏರುವಾಗ ಎಚ್ಚರ ತಪ್ಪಿದರೆ ವಾಹನ ಹಿಂದಕ್ಕೆ ಬರುತ್ತದೆ. ಎಲ್ಲಾದರೂ ಹಿಮ್ಮುಖವಾಗಿ ಚಲಿಸಿದರೆ, ಅಪಾಯ ಖಚಿತ. ಎಷ್ಟೋ ಸಲ ವಾಹನ ಮಧ್ಯದಲ್ಲಿ ನಿಂತು ಹಿಂದಕ್ಕೆ ಚಲಿಸಿ, ಅಪಾಯ ಆಗಿದ್ದೂ ಇದೆ. ದ್ವಿಚಕ್ರ ವಾಹನ ಸವಾರರು ಬೀಳೋದಂತೂ ಮಾಮೂಲಿ. ಅದೇ ಸೇತುವೆಯಿಂದ ಹೈವೇಗೆ ನೇರ ಸಂಪರ್ಕ ನೀಡಿದರೆ, ಈ ಸಮಸ್ಯೆ ಇರುವುದಿಲ್ಲ. ಹೆದ್ದಾರಿಗೆ ಸೇರುವ ರಸ್ತೆ ಆದರೆ, ಆಲೂರು ಪಡುಕೋಣೆ ಮೂಲಕ ಕುಂದಾಪುರಕ್ಕೆ ಹಾಗೂ ಕೊಲ್ಲೂರು ಸಂಪರ್ಕಕ್ಕೆ ಬಸ್‌ಗಳ ಓಡಾಟ ಕೂಡ ನಡೆಯಲಿದೆ.

    ಸೇತುವೆ ಸಂಪರ್ಕ ರಸ್ತೆ ಎಂದು ಸರ್ಕಾರ 7 ಕೋಟಿ ರೂ. ಖರ್ಚು ಮಾಡಿದ್ದು, ಅದರ ಪ್ರಯೋಜನ ಜನಸಾಮಾನ್ಯರಿಗೆ ಸಿಗದಿರುವುದು ಬೇಸರ. ಸೇತುವೆಯಿಂದ ಹೈವೇಗೆ ಸಂಪರ್ಕ ರಸ್ತೆ ಆದರೆ ಆಲೂರಿಂದ ಮಾರಸ್ವಾಮಿ ಮೂಲಕ ಕುಂದಾಪುರಕ್ಕೆ ಬಸ್ ಸಂಪರ್ಕ ಸಿಗಲಿದೆ. ಆಲೂರು ಮೂಲಕ ಕೊಲ್ಲೂರಿಗೂ ಹೋಗಲು ಸಾಧ್ಯ. ಕೂಡು ರಸ್ತೆ ಮಾಡಿಕೊಡುವಂತೆ ಮೂರು ವರ್ಷದಿಂದ ಸಲ್ಲಿಸಿದ ಮನವಿಗೆ ಫಲ ಸಿಕ್ಕಿಲ್ಲ.
    ರಾಘವೇಂದ್ರ ಭಟ್ ಭಟ್ರತೋಟ, ಕೃಷಿಕ ಪಡುಕೋಣೆ.

    ಸ್ವಾಗತ ಗೋಪುರ ಪಕ್ಕದ ಕಟ್ಟಡಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಪರಿಹಾರ ನೀಡಿ ತೆರವು ಮಾಡಿ, ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಬೇಕು. ಆದಷ್ಟು ಬೇಗ ಕಟ್ಟಡ ತೆರವು ಮಾಡಿ, ಸೇತುವೆ ಹಾಗೂ ರಾಷ್ಟ್ರೀಯ ಹೆದ್ದಾರಿ ನಡುವೆ ಸಂಪರ್ಕ ರಸ್ತೆ ಮಾಡಿಕೊಡುವಂತೆ ಗ್ರಾಮಸಭೆಯಲ್ಲಿ ನಿರ್ಣಯ ಮಾಡಿ, ನಿರ್ಣಯದ ಪ್ರತಿ ಲೋಕೋಪಯೋಗಿ ಇಲಾಖೆ ಹಾಗೂ ಹೆದ್ದಾರಿ ಇಲಾಖೆಗೂ ಸಲ್ಲಿಸಲಾಗುತ್ತದೆ. ಸಂಸದರು ಹಾಗೂ ಶಾಸಕರ ಮೂಲಕ ರಾಷ್ಟ್ರೀಯ ಹೆದ್ದಾರಿ ಇಲಾಖೆ ಕಟ್ಟಡ ಪರಿಹಾರ ಹಣ ನೀಡುವಂತೆ ಮನವಿ ಮಾಡಲಾಗುತ್ತದೆ.
    ಅರವಿಂದ ಪೂಜಾರಿ ಉಪಾಧ್ಯಕ್ಷ, ನಾಡಾ ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts