More

    ಆಹಾರ ಪದ್ಧತಿಯೇ ಉತ್ತಮ ಔಷಧ


    ಹುಬ್ಬಳ್ಳಿ: ಆಹಾರವೂ ಒಂದು ಔಷಧ. ಸಿರಿಧಾನ್ಯ ಸಮೇತ ಆಹಾರ ಪದ್ಧತಿಯನ್ನು ರೂಢಿಸಿಕೊಂಡಲ್ಲಿ ಮನುಷ್ಯನ ದೇಹಕ್ಕೆ ತಾನೇ ತಾನಾಗಿ ಔಷಧ ಲಭಿಸುತ್ತದೆ ಎಂದು ಧಾರವಾಡ ಕೃಷಿ ವಿವಿ ವಿಶ್ರಾಂತ ಉಪ ಕುಲಪತಿ ಡಾ. ಜೆ.ಎಚ್. ಕುಲಕರ್ಣಿ ಅಭಿಪ್ರಾಯಪಟ್ಟರು.

    ದೇಶಪಾಂಡೆ ನಗರದ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹೃದ್ರೋಗ ತಜ್ಞ ಡಾ. ವಿ.ಜಿ. ನಾಡಗೌಡ ಸಂಪಾದಿತ ‘ಮೊನೊಗ್ರಾಫ್ ಆನ್ ಎಮರ್ಜೆನ್ಸಿ ಮೆಡಿಸಿನ್’ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

    ಸಣ್ಣದಾಗಿ ಕಾಯಿಲೆ ಬಂದಾಗಲೇ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುವುದು ಉತ್ತಮ. ಈ ಪುಸ್ತಕದಲ್ಲಿ ವೈದ್ಯಶಾಸ್ತ್ರದ ಹಲವು ಅಂಶಗಳು ಇದ್ದು, ವೈದ್ಯಕೀಯ ವಿಜ್ಞಾನದ ವಿದ್ಯಾರ್ಥಿಗಳಿಗೆ ಅತ್ಯುಪಯುಕ್ತವಾಗಿದೆ ಎಂದರು.

    ಅತಿಥಿಯಾಗಿ ಪಾಲ್ಗೊಂಡಿದ್ದ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ. ಪಾಟೀಲ ಮಾತನಾಡಿ, ಸಾವು-ಬದುಕಿನ ಮಧ್ಯೆ ಹೋರಾಡುವ ರೋಗಿಯನ್ನು ಉಳಿಸಲು ವೈದ್ಯರು ತಮ್ಮ ವೈಯಕ್ತಿಕ ಜೀವನವನ್ನು ತ್ಯಾಗ ಮಾಡಬೇಕು. ರೋಗಿಗಳಿಗೆ ಮತ್ತಷ್ಟು ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು ಎಂದರು. ಅಲ್ಲದೆ, ಡಾ. ಜಿ.ಬಿ. ಸತ್ತೂರ ಅವರು ಕೋರಿದ್ದಕ್ಕೆ ಸ್ಪಂದಿಸಿ, ಈ ಪುಸ್ತಕವನ್ನು ವೈದ್ಯಕೀಯ ವಿಜ್ಞಾನ ಸಂಸ್ಥೆಗಳಿಗೆ ಉಚಿತವಾಗಿ

    ವಿತರಿಸಲು ಮುಂಗಡಪತ್ರದಲ್ಲಿ ಅನುದಾನ ಮೀಸಲಿರಿಸುವಂತೆ ಮುಖ್ಯಮಂತ್ರಿಯವರನ್ನು ವಿನಂತಿಸಲಾಗುವುದು ಎಂದರು. ಧಾರವಾಡ ಎಸ್​ಡಿಎಂ ಕಾಲೇಜ್ ವೈದ್ಯಕೀಯ ನಿರ್ದೇಶಕ ಡಾ. ನಿರಂಜನಕುಮಾರ ಮಾತನಾಡಿ, ಆಸ್ಪತ್ರೆಗಳಲ್ಲಿ ಎಮರ್ಜೆನ್ಸಿ ಮತ್ತು ಕ್ರಿಟಿಕಲ್ ಕೇರ್ ವಿಭಾಗಗಳಿರುತ್ತವೆ. ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಗುವ ವ್ಯವಸ್ಥೆ ಆಗಬೇಕು. ಮುಂದೊಂದು ದಿನ ಆರೋಗ್ಯ ಬಹು ದುಬಾರಿ ಆಗುವುದಕ್ಕಿಂತ ಮುಂಚೆ ಎಚ್ಚೆತ್ತುಕೊಳ್ಳಬೇಕಿದೆ ಎಂದರಲ್ಲದೆ, ಈ ಪುಸ್ತಕ ವೈದ್ಯಕೀಯ ಕ್ಷೇತ್ರದಲ್ಲಿರುವ ಎಲ್ಲರಿಗೂ ಉಪಯುಕ್ತ ಎಂದರು. ಕೃತಿ ಸಂಪಾದಕ ಡಾ. ವಿ.ಜಿ. ನಾಡಗೌಡ, ಕೃತಿಯನ್ನು ರೂಪಿಸಲು ಎಲ್ಲರ ಸಹಕಾರ ಸಿಕ್ಕಿದೆ. ಹಾಗಾಗಿಯೇ ಅತ್ಯುತ್ತಮ ಕೃತಿ ಮೂರೇ ತಿಂಗಳಲ್ಲಿ ಹೊರಬರುವಂತಾಯಿತು ಎಂದು ಹರ್ಷ ವ್ಯಕ್ತಪಡಿಸಿದರು. ಮಧುಮೇಹ ತಜ್ಞ ಡಾ. ಜಿ.ಬಿ. ಸತ್ತೂರ, ಡಾ. ರಮೇಶ ಬಾಬು, ಎಪಿಐ ಹು-ಧಾ ಅಧ್ಯಕ್ಷ ಡಾ. ರಾಘವೇಂದ್ರ ಬೆಳಗಾಂವಕರ್, ಐಎಂಎ ಹುಬ್ಬಳ್ಳಿ ಅಧ್ಯಕ್ಷ ಡಾ. ಕ್ರಾಂತಿಕಿರಣ ಮಾತನಾಡಿದರು.

    ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜ ಯೋಗೀಂದ್ರ ಸ್ವಾಮೀಜಿ ಹಾಗೂ ಹೊಸಮಠದ ಶ್ರೀ ಚಂದ್ರಶೇಖರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪದ್ಮಶ್ರೀ ಡಾ. ಎಂ.ಎಂ. ಜೋಶಿ, ಡಾ. ಎಸ್.ಜಿ. ನಾಡಗೌಡ, ಡಾ. ಪಿ.ಕೆ. ಗಂಡಮಾಲಿ, ಪಿ.ಆರ್. ಅಪರಂಜಿ ಇತರರು ಇದ್ದರು.

    ಭಾರತದ ವೈದ್ಯರೇ ಶ್ರೇಷ್ಠ
    ಪ್ರಪಂಚದಲ್ಲೇ ಅತ್ಯುತ್ತಮ ಮತ್ತು ಶ್ರೇಷ್ಠ ವೈದ್ಯರೆಂದರೆ ಭಾರತದ ವೈದ್ಯರು ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಗುಣಗಾನ ಮಾಡಿದರು. ನಮ್ಮ ದೇಶದ ವೈದ್ಯರು ಪ್ರತಿಯೊಂದನ್ನೂ ಸವಾಲಾಗಿ ಸ್ವೀಕರಿಸುತ್ತಾರೆ. ಹುಬ್ಬಳ್ಳಿ ಮೆಡಿಕಲ್ ಹಬ್ ಆಗಿ ಬೆಳೆಯುತ್ತಿದೆ. ಇಲ್ಲಿ ಕಲಿತ ಹಲವು ವೈದ್ಯರು ವಿದೇಶದಲ್ಲೂ ಕೆಲಸ ಮಾಡುತ್ತಿದ್ದಾರೆ. ಬಹಳಷ್ಟು ಜನರಿಗೆ ಹುಬ್ಬಳ್ಳಿಗೆ ಬಂದು ಚಿಕಿತ್ಸೆ ಪಡೆಯಿರಿ, ಇಲ್ಲಿ ಬಹಳಷ್ಟು ತಜ್ಞ ವೈದ್ಯರಿದ್ದಾರೆ ಎಂದು ಸಲಹೆ ನೀಡಿದ್ದೇನೆ. ಚಿಕಿತ್ಸೆ ಪಡೆದವರು ಗುಣಮುಖರೂ ಆಗಿದ್ದಾರೆ ಎಂದು ಹೇಳಿದರು. ವೈದ್ಯಕೀಯ ಕ್ಷೇತ್ರವಷ್ಟೇ ಅಲ್ಲ, ಯಾವುದೇ ಕ್ಷೇತ್ರವಿರಲಿ ತುರ್ತು ಘಟನೆ, ವಿಷಯಗಳಿಗೆ ಮಹತ್ವ ನೀಡಿ ಪರಿಹರಿಸಬೇಕು. ಇದರಿಂದ ನಮ್ಮ ದೇಶದ ಅಭಿವೃದ್ಧಿ ಸಾಧ್ಯ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts