More

    ಆಸ್ತಿ, ಹಣ ನಂದಿಗುಡಿ ಮಠಕ್ಕೆ ವರ್ಗಾಯಿಸಿ

    ಸಾಗರ: ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ನಂದಿಗುಡಿ ಮಠದ ಆಸ್ತಿಯನ್ನು ಶ್ರೀಮಠದ ಹೆಸರಿಗೆ ವರ್ಗಾಯಿಸುವಂತೆ ಒತ್ತಾಯಿಸಿ ಸೋಮವಾರ ನಂದಿಗುಡಿ ಬೃಹನ್ಮಠದ ಭಕ್ತರು ಮತ್ತು ನೊಳಂಬ ವೀರಶೈವ ಸಮಾಜ ಮುಖಂಡರು ಸಾಗರ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ನಂದಿಗುಡಿ ಬೃಹನ್ಮಠಕ್ಕೆ 1992ರಲ್ಲಿ ಶ್ರೀ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ ಹೆಸರಿನಲ್ಲಿಬೇಲೂರು ತಾಲೂಕಿನ ಸಿದ್ದರಾಮಯ್ಯ ಅವರನ್ನು ಪೀಠಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಆದರೆ 2006ರಲ್ಲಿ ಸ್ವಾಮೀಜಿ ಮಠವನ್ನು ತೊರೆದಿದ್ದಾರೆ. ಈಗ ಅವರು ವಿವಾಹವಾಗಿ, 2 ಮಕ್ಕಳ ತಂದೆಯಾಗಿ ಸಾಗರದ ಅಣಲೆಕೊಪ್ಪ ಬಡಾವಣೆಯದಲ್ಲಿ ವಾಸವಾಗಿದ್ದಾರೆ. 2006ರಲ್ಲಿ ಹರಿಹರದ ಜೆಎಂಎಫ್​ಸಿ ನ್ಯಾಯಾಲಯದ ಎದುರು ಹಾಜರಾಗಿ ತಾವು ಪೀಠಾಧ್ಯಕ್ಷ ಸ್ಥಾನ ತ್ಯಾಗ ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆ.

    ಈ ಮಧ್ಯೆ ಹರಿಹರ ತಾಲೂಕಿನ ಜಿಗಳಿ ಗ್ರಾಮದ ಇಂದೂಧರ ಎಂಬುವವರಿಂದ ಶ್ರೀ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ ಅವರೇ ಪೀಠಾಪತಿಯಾಗಿದ್ದಾರೆ ಎಂದು ಹಾಲಿ ಶ್ರೀಮಠದ ಸ್ವಾಮೀಜಿ ವಿರುದ್ದ ಸುಳ್ಳು ಮೊಕದ್ದಮೆ ಹಾಕಿಸಿ ತಾವೇ ಮುಂದುವರೆದಿದ್ದೇವೆ ಎಂದು ಭಕ್ತರಲ್ಲಿ, ಸಮಾಜದಲ್ಲಿ ಗೊಂದಲ ಉಂಟು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇವರು ಪೀಠತ್ಯಾಗ ಮಾಡಿ 14 ವರ್ಷಗಳಾದರೂ ಮಠದ 62 ಎಕರೆ ಜಮೀನನ್ನು ಮಠಕ್ಕೆ ವರ್ಗಾಯಿಸದೆ ತಮ್ಮ ಹೆಸರಿನಲ್ಲಿ ಇರಿಸಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

    ಶ್ರೀಮಠಕ್ಕೆ ಜಮೀನು ಹಿಂದಿರುಗಿಸದ ಹಿನ್ನೆಲೆಯಲ್ಲಿ ಈ ವರ್ಷದ ಜನವರಿ 5ರಂದು ನಂದಿಗುಂಡಿ ಮಠದ ಭಕ್ತರು ಮತ್ತು ಸಮಾಜ ಬಾಂಧವರು ಮಹಾಸಭೆ ನಡೆಸಿ ಪೀಠಾರೋಹಣ ಸಂದರ್ಭದಲ್ಲಿ ನೀಡಿದ ಶ್ರೀ ನಂದೀಶ್ವರ ಸ್ವಾಮೀಜಿ ನಾಮಾಂಕಿತವನ್ನು 2006ನೇ ಇಸವಿಯಿಂದ ಜಾರಿಗೆ ಬರುವಂತೆ ಹಿಂದಕ್ಕೆ ಪಡೆಯಲಾಗಿದೆ. ಇನ್ನು ಮುಂದೆ ನಂದೀಶ್ವರ ಸ್ವಾಮೀಜಿ ಎಂಬ ಹೆಸರಿನಲ್ಲಿ ಅವರು ಯಾವುದೆ ವ್ಯವಹಾರ ನಡೆಸುವಂತಿಲ್ಲ ಎಂದು ಹೇಳಿದರು.

    ನಂದಿಗುಡಿ ಪೀಠ ತ್ಯಾಗ ಮಾಡುವ ಸಂದರ್ಭದಲ್ಲಿ ಒಟ್ಟು 27,48,901 ರೂ.ಗಳನ್ನು ಅವರು ತೆಗೆದುಕೊಂಡು ಹೋಗಿರುತ್ತಾರೆ. ಜತೆಗೆ ಮಠದ 62ಎಕರೆ ಜಮೀನು ವಾಪಸ್ ನೀಡಬೇಕಾಗಿರುತ್ತದೆ. ಶ್ರೀಮಠಕ್ಕೆ ಲಕ್ಷಾಂತರ ಭಕ್ತರು ನಡೆದುಕೊಳ್ಳುತ್ತಿದ್ದು ಸದರಿ ಮಠಕ್ಕೆ ಕಳಂಕವನ್ನು ತಂದಿರುವ ಇಂದೂಧರ್ ಮತ್ತು ಯುವರಾಜ್ ಎಂಬ ವ್ಯಕ್ತಿಗಳ ವಿರುದ್ಧ ಕಾನೂನುಕ್ರಮ ಜರುಗಿಸಿ ಮಠದ ಭಕ್ತರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಪ್ರತಿಭಟನಾನಿರತರು ಇತರ ಕೆಲವು ಗಂಭೀರ ಆರೋಪ ಮಾಡಿ ತಹಸೀಲ್ದಾರ್ ಚಂದ್ರಶೇಖರ ನಾಯ್ಕ ಅವರಿಗೆ ಮನವಿ ನೀಡಿದರು.

    ಮಾಜಿ ಶಾಸಕ ಡಾ. ಡಿ.ಬಿ.ಗಂಗಪ್ಪ, ಪ್ರಮುಖರಾದ ಶಿವಾನಂದ್ ಹೊನ್ನಾಳ್ಳಿ, ಶಾಂತರಾಜ್ ಪಾಟೀಲ್, ಲೋಹಿತ್, ಬಸವನಗೌಡ, ಚನ್ನಪ್ಪ ಹೊಸಂಗಿ, ಎಂ.ಎ.ನಾಗರಾಜಪ್ಪ, ಮಹೇಶ್, ಚನ್ನೇಶ್, ಮಧು ಪಾಟೀಲ್, ಪರಮೇಶ್ವರ್, ಜಿ.ಬಸವರಾಜ್, ಭಂಡೇರ್ ತಮ್ಮಣ್ಣ, ಚಂದ್ರಶೇಖರ್, ರಾಮು, ಮಹೇಂದ್ರಪ್ಪ ಇತರರು ನೇತೃತ್ವ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts