More

    ಆಲದ ಮರ ಬಲಿ ಆತಂಕ

    ಕುಮಟಾ: ತಾಲೂಕಿನ ಮೂರೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ರಸ್ತೆಯಂಚಿನ ಪ್ರಮುಖ ಆಲದ ಮರಗಳು ಬಲಿಯಾಗುವ ಆತಂಕ ಎದುರಾಗಿದ್ದು, ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

    ಅಂದಾಜು 7.81 ಕೋಟಿ ವೆಚ್ಚದಲ್ಲಿ ಮೂರೂರು ಕ್ರಾಸ್​ನಿಂದ ಜೋಗಿಮನೆಕೇರಿ ಬಳಿಯ ದಡ್ನಭಟ್ ಸೇತುವೆವರೆಗೆ 7.10 ಕಿಮೀ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ. ಈಗಾಗಲೇ ಕಾಮಗಾರಿ ಮೂರೂರು ಕ್ರಾಸ್ ಹಾಗೂ ಸಿದ್ದನಬಾವಿ ಗುಡ್ಡದ ಮೇಲಿಂದ ಆರಂಭವಾಗಿದೆ. ಯೋಜನೆಯಂತೆ ರಸ್ತೆಯನ್ನು ಮೂರೂರು ಕ್ರಾಸ್​ನಿಂದ ಹವ್ಯಕ ಸಭಾಭವನದವರೆಗೆ 8 ಮೀ. ಹಾಗೂ ಮುಂದೆ 5.5 ಮೀ. ಅಗಲಕ್ಕೆ ಹೆಚ್ಚಿಸಬೇಕಿದೆ.

    ಅಭಿವೃದ್ಧಿಗೊಳ್ಳಲಿರುವ ರಸ್ತೆಯ ಅಂಚಿಗೆ ಹಲವೆಡೆ ಬೃಹತ್ ಮರಗಳಿವೆ. ಅದರಲ್ಲೂ ಮೂರೂರು ಗುಡ್ಡದ ಮೇಲೆ ಹಳೆಯದಾದ ಬೃಹತ್ ಆಲದಮರ ಹೊಂದಿರುವ ಆಲದಕಟ್ಟೆ ಇದೆ. ಪಾದಚಾರಿಗಳಿಗೆ, ಬೆಟ್ಟದ ಸೊಪ್ಪು ಸೌದೆ ಸಂಗ್ರಹಿಸುವವರಿಗೆ, ಹಲವಾರು ಬಗೆಯ ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ. ಈಗ ನಡೆದಿರುವ ಕಾಮಗಾರಿಯಲ್ಲಿ ಆಲದಮರ ಕಟಾವು ಬಹುತೇಕ ಖಚಿತ ಎನ್ನಲಾಗಿದ್ದು ಪರಿಸರ ಪ್ರಿಯರ ಆಕ್ಷೇಪಕ್ಕೆ ಕಾರಣವಾಗಿದೆ.

    ಈ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿದ ಪರಿಸರ ಚಿಂತಕ ತ್ರಿವಿಕ್ರಮ ಪೈ ಅವರು, ಹಳೆಯ ಮರಗಳು ಪರಿಸರದ ಜೀವ ವೈವಿಧ್ಯ ಹಾಗೂ ವಾತಾವರಣದ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ರಸ್ತೆ ಅಭಿವೃದ್ಧಿ ಸಂದರ್ಭದಲ್ಲಿ ಸಾಧ್ಯವಾದಷ್ಟೂ ಹಸಿರು ಮರಗಳನ್ನು ಉಳಿಸಿಕೊಳ್ಳುವ ಬಗ್ಗೆ ಪರ್ಯಾಯ ಮಾರ್ಗಗಳ ಬಳಕೆಯಾಗಲೇಬೇಕು. ಮೂರೂರು ಗುಡ್ಡದ ಮೇಲಿನ ಆಲದಕಟ್ಟೆ ಮರ ಅಥವಾ ಇನ್ನಾವುದೇ ಮರವನ್ನು ಕಟಾವು ಮಾಡದೆಯೇ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸುವ ಬಗ್ಗೆ ಸಂಬಂಧಪಟ್ಟವರು ಮುತುವರ್ಜಿ ವಹಿಸಲೇಬೇಕು’ ಎಂದರು.

    ಮೂರೂರು ರಸ್ತೆ ವಿಸ್ತರಣೆಗಾಗಿ ಆಲದಕಟ್ಟೆ ಮರ ಕಡಿಯುವುದಾದರೆ, ಆಲದ ಕಟ್ಟೆ ಉಳಿಸಿ ಆಂದೋಲನ ಮಾಡಬೇಕಾಗುತ್ತದೆ. ಈಗಾಗಲೇ ರಸ್ತೆ ವಿಸ್ತರಣೆ ಹಿನ್ನೆಲೆಯಲ್ಲಿ ಒಂದು ಬದಿ ಅಗೆಯಲಾಗಿದೆ. ಆದರೆ, ಅಗೆದ ರಸ್ತೆ ಬದಿಗೆ ಯಾವುದೇ ಸುರಕ್ಷತೆ ಕ್ರಮ ಕೈಗೊಂಡಿಲ್ಲ. ಸಂಬಂಧಪಟ್ಟವರು ಗಮನಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಮೂರೂರು ಗುಡ್ಡದ ಮೇಲಿನ ಆಲದ ಕಟ್ಟೆ ತೆರವಿನ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ. ಹಾಗೇನಾದರೂ ಇದ್ದಲ್ಲಿ ಶಾಸಕರಿಗೆ ಹಾಗೂ ಅರಣ್ಯ ಇಲಾಖೆಗೆ ಸಂರ್ಪಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ.

    | ರಾಜು ಶಾನಭಾಗ, ಪಿಡಬ್ಲ್ಯುಡಿ ಸಹಾಯಕ ಇಂಜಿನಿಯರ್

    ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

    ಕುಮಟಾ: ತಾಲೂಕಿನ ಮೂರೂರು- ಕಲ್ಲಬ್ಬೆ- ಬೊಗ್ರಿಬೈಲ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಭಾನುವಾರ ಮೂರೂರು ಕ್ರಾಸ್ ಬಳಿ ಭೂಮಿಪೂಜೆಯೊಂದಿಗೆ ಚಾಲನೆ ನೀಡಿದರು.

    ಬಳಿಕ ಮಾತನಾಡಿದ ಅವರು, ರಾಜ್ಯ ಹೆದ್ದಾರಿ ಯೋಜನೆ ಹಂತ 4ರ ಅಡಿ ಒಟ್ಟು 7.81 ಕೋಟಿ ರೂ. ಅಂದಾಜು ಮೊತ್ತದಲ್ಲಿ 7.10 ಕಿಮೀ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಕುಮಟಾ ಮೂರೂರುಕ್ರಾಸ್​ನಿಂದ ಆರಂಭಗೊಂಡು ಚಿಕ್ಕಸೇತುವೆ ಹಾಗೂ ವಿಸ್ತರಣೆ ಕಾರ್ಯ ನಡೆಯಲಿದೆ. ಟಿ.ಬಿ. ಇಬ್ರಾಹಿಂ ಕನ್ಸ್​ಟ್ರಕ್ಷನ್ ಕಂಪನಿ ಗುತ್ತಿಗೆ ಪಡೆದು ಈಗಾಗಲೇ ಕಾಮಗಾರಿ ಆರಂಭಿಸಿದ್ದು ಮಾರ್ಚ್ ಒಳಗಡೆ ರಸ್ತೆ ಕೆಲಸ ಮುಗಿಯಲಿದೆ ಎಂದರು.

    ಲೋಕೋಪಯೋಗಿ ಇಂಜಿನಿಯರ್ ರಾಜು ಶಾನಭಾಗ, ಜಿಪಂ ಸದಸ್ಯ ಗಜಾನನ ಪೈ, ತಾಪಂ ಸದಸ್ಯಜಗನ್ನಾಥ ನಾಯ್ಕ, ಪುರಸಭೆ ಸದಸ್ಯ ಸಂತೋಷ ನಾಯ್ಕ, ಡಾ. ಜಿ.ಜಿ. ಹೆಗಡೆ, ಜಿ.ಐ. ಹೆಗಡೆ, ವೆಂಕಟೇಶ ನಾಯಕ, ಜಿ.ಜಿ.ಗುನಗಾ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts