More

    ಆರೋಗ್ಯವಂತ ಯುವಜನರಿಂದ ಸದೃಢ ಸಮಾಜ; ವಿಜಯವಾಣಿ ಸೆಲೆಬ್ರಿಟಿ ಕಾರ್ನರ್​ನಲ್ಲಿ ಡಾ.ಬಲ್ಲಾಳ​

    ಆರೋಗ್ಯವಂತ ಯುವಜನರಿಂದ ಸದೃಢ ಸಮಾಜ; ವಿಜಯವಾಣಿ ಸೆಲೆಬ್ರಿಟಿ ಕಾರ್ನರ್​ನಲ್ಲಿ ಡಾ.ಬಲ್ಲಾಳ​ಮೊಬೈಲ್ ಫೋನ್ ಸಾಮಾಜಿಕ ಜಾಲತಾಣಗಳ ಬಳಕೆ ತಗ್ಗಲಿ

    ಕೋವಿಡ್​ನಿಂದಾಗಿ ಯುವಜನತೆಯಲ್ಲಿ ಆಹಾರಕ್ರಮ ವ್ಯತ್ಯಾಸವಾಗಿದೆ. ದೈಹಿಕ ಚಟುವಟಿಕೆಗಳು ಕಡಿಮೆಯಾಗಿದ್ದು, ಬೊಜ್ಜು ಮತ್ತು ಡಯಾಬಿಟೀಸ್ ಹೆಚ್ಚಾಗುತ್ತಿದೆ. ಚಿಕ್ಕವಯಸ್ಸಿನಲ್ಲೇ ಕಾಯಿಲೆ ತಂದುಕೊಳ್ಳದಿರುವ ಕುರಿತು ಗಮನಹರಿಸಬೇಕಿದೆ. ಉತ್ತಮ ಜೀವನಶೈಲಿ ರೂಪಿಸಿಕೊಳ್ಳಬೇಕಿದೆ.

    ಇಡೀ ಜಗತ್ತನ್ನು ಎರಡು ವರ್ಷದಿಂದ ಬಾಧಿಸುತ್ತಿರುವ ಕೋವಿಡ್ ಮಾಡಿರುವ ಹಾನಿ ಅಷ್ಟಿಷ್ಟಲ್ಲ. ಈಗ ಕೇವಲ ಕೋವಿಡ್ ಬಗ್ಗೆ ಅಲ್ಲ, ಇತರೆ ಸಮಸ್ಯೆಗಳ ಬಗ್ಗೆಯೂ ಗಮನಹರಿಸುವ ಅಗತ್ಯ ಎದುರಾಗಿದೆ. ಅದರಲ್ಲಿ ಪ್ರಮುಖವಾಗಿ ಯುವಜನತೆಯ ಕುರಿತು ಚಿಂತನೆ ನಡೆಸಬೇಕಿದೆ. ಯುವಕರು ದೇಶದ ಭವಿಷ್ಯ. ನಾವು ವರ್ತಮಾನವನ್ನು ಚೆನ್ನಾಗಿಟ್ಟುಕೊಂಡರೆ, ಭವಿಷ್ಯ ಸಹ ಉಜ್ವಲವಾಗಿರುತ್ತದೆ. ಆದರೆ, ಅದು ಅಷ್ಟು ಸುಲಭದ ವಿಷಯವಲ್ಲ ಎಂಬುದಂತೂ ಕಟುಸತ್ಯ…

    ಏಕೆಂದರೆ, ಇಂದು ಒಂದು ಕಡೆ ಕೋವಿಡ್ ಹಾಗೂ ಅದರಿಂದ ಎದುರಾಗಿರುವ ಆರ್ಥಿಕ ಸಮಸ್ಯೆ. ಇನ್ನೊಂದೆಡೆ, ರಷ್ಯಾ ಮತ್ತು ಯೂಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಿಂದ, ಅಲ್ಲಿ ಕಲಿಯಲು ಹೋಗಿದ್ದ ವಿದ್ಯಾರ್ಥಿಗಳಿಗೆ ಶಿಕ್ಷಣದ ಬಿಕ್ಕಟ್ಟು ಸೇರಿ ಹಲವು ಸವಾಲುಗಳು ಹಾಗೂ ಸಮಸ್ಯೆಗಳು ಎದುರಾಗಿವೆ. ಇದಕ್ಕೆ ಧೃತಿಗೆಡದೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯುವಜನರು ಮುಂದಾಗಬೇಕು. ಅದಕ್ಕಾಗಿ ಮೊದಲು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಆರೋಗ್ಯವಂತ ಯುವಜನರಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ.

    ಕೋವಿಡ್ ಕರಿನೆರಳಿನಿಂದ ಈಗಷ್ಟೇ ಹೊರಬರುತ್ತಿದ್ದೇವೆ. ಇದರ ಬೆನ್ನಲ್ಲೇ ಚೀನಾದಲ್ಲಿ ಕೋವಿಡ್ 4ನೇ ಅಲೆ ತೀವ್ರಗೊಂಡು ಕೆಲ ನಗರಗಳಲ್ಲಿ ಲಾಕ್​ಡೌನ್ ವಿಧಿಸಿರುವುದು ಮತ್ತೆ ಆತಂಕ ಸೃಷ್ಟಿಸಿದೆ. ಹಾಗೆಂದು ಯಾರೂ ಹೆದರುವ ಅಗತ್ಯವಿಲ್ಲ. ಇನ್ನೂ ಕೆಲ ಸಮಯ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಕೈಗಳ ಸ್ವಚ್ಛತೆಗೆ ಸ್ಯಾನಿಟೈಸ್ ಬಳಕೆ ಸೇರಿ ಎಲ್ಲರೂ ಕೋವಿಡ್ ನಿಯಮಗಳನ್ನು ತಪ್ಪದೇ ಪಾಲಿಸಬೇಕು.

    ಯುವಜನತೆ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತಿ ವಹಿಸಬೇಕಿದೆ. ಪ್ರಮುಖವಾಗಿ ಇಂದಿನ ಜೀವನಶೈಲಿ ಬದಲಾಗಿದೆ. ಹೊಸ ಜೀವನಶೈಲಿಗೆ ಮಾರುಹೋಗುತ್ತಿರುವ ಯುವಜನತೆ, ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸುತ್ತಿಲ್ಲ. ಕೋವಿಡ್​ನಿಂದಾಗಿ ಯುವಜನತೆಯಲ್ಲಿ ಆಹಾರಕ್ರಮ ವ್ಯತ್ಯಾಸವಾಗಿದ್ದು, ದೈಹಿಕ ಚಟುವಟಿಕೆಗಳು ಕಡಿಮೆಯಾಗಿದ್ದು, ಬೊಜ್ಜು ಮತ್ತು ಡಯಾಬಿಟೀಸ್ ಹೆಚ್ಚಾಗುತ್ತಿದೆ. ಚಿಕ್ಕವಯಸ್ಸಿನಲ್ಲೇ ಕಾಯಿಲೆ ತಂದುಕೊಳ್ಳದಿರುವ ಕುರಿತು ಗಮನಹರಿಸಬೇಕಿದೆ. ಆರೋಗ್ಯ ಕಾಳಜಿಯಿಂದ ಖಂಡಿತವಾಗಿಯೂ ವಿವಿಧ ಕಾಯಿಲೆಗಳಿಂದ ದೂರವಿರಬಹುದು. ಈ ನಿಟ್ಟಿನಲ್ಲಿ ನನ್ನದೊಂದಿಷ್ಟು ಸಲಹೆಗಳಿವೆ.

    • ಡಯಾಬಿಟಿಸ್ ಮತ್ತು ಬೊಜ್ಜಿಗೆ ಮುಖ್ಯ ಕಾರಣ ಕಾಬೋಹೈಡ್ರೇಟ್ಸ್ ರೂಪದಲ್ಲಿರುವ ಸಕ್ಕರೆ ಮತ್ತು ಕ್ಯಾಲರಿಗಳು. ಇವೆರಡೂ ವ್ಯಕ್ತಿಯ ಆರೋಗ್ಯಕ್ಕಷ್ಟೇ ಅಲ್ಲ, ಇಡೀ ಸಮಾಜಕ್ಕೆ ವಿಷ ಎಂದರೆ ತಪ್ಪಿಲ್ಲ. ಇದರಿಂದಾಗಿಯೇ ಹಲವು ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತಿದ್ದು, ಮೊದಲು ಇದನ್ನು ನಿರ್ವಹಿಸಬೇಕು.
    • ಧೂಮಪಾನ ಮತ್ತು ತಂಬಾಕು ಸೇವನೆ ಸಹ ವಿಷಕಾರಿಯಾಗಿದ್ದು, ಅದರಿಂದ ಯುವಜನ ಎಷ್ಟು ದೂರವಿರುತ್ತಾರೋ ಅಷ್ಟು ಅವರ ಆರೋಗ್ಯಕ್ಕಷ್ಟೇ ಅಲ್ಲ, ಸಮಾಜಕ್ಕೂ ಕ್ಷೇಮ.
    • ರುಚಿಗೆ ತಕ್ಕಷ್ಟು ಉಪ್ಪು ಎನ್ನುವ ಮಾತನ್ನು ಕೇಳುತ್ತಲೇ ಬಂದಿದ್ದೇವೆ. ರುಚಿಗೆ ತಕ್ಕಷ್ಟು ಮಾತ್ರವಲ್ಲ, ಅಗತ್ಯಕ್ಕೆ ತಕ್ಕಷ್ಟು ಮಾತ್ರ ಇರಬೇಕು ಎನ್ನುವುದು ಸಹ ಬಹಳ ಮುಖ್ಯ. ಅಗತ್ಯಕ್ಕಿಂತ ಹೆಚ್ಚು ಉಪು್ಪ ಸೇವಿಸಿದರೆ, ಹೈಪರ್​ಟೆನ್ಶನ್ ಸೇರಿದಂತೆ ಹಲವು ಕಾಯಿಲೆಗಳು ಎದುರಾಗುತ್ತವೆ.
    • ಪ್ರತಿನಿತ್ಯ ಕುಳಿತೇ ಕೆಲಸ ಮಾಡುವುದು ಸಹ ಆರೋಗ್ಯಕ್ಕೆ ಶಾಪವಾಗಿ ಪರಿಣಮಿಸುತ್ತಿದೆ. ಕೆಲಸದಲ್ಲಿ ಮಾತ್ರವಲ್ಲ, ನಂತರವೂ ಒಂದೇ ಕಡೆ ಕುಳಿತು ಹರಟೆ ಹೊಡೆಯುವುದು, ಮಲಗಿಕೊಂಡು ಟಿವಿ ನೋಡುವುದು ಇತ್ಯಾದಿ ಮಾಡುವುದರಿಂದ ಬೊಜ್ಜು ಹೆಚ್ಚಾಗುತ್ತದೆ. ಆಲಸಿಗಳಾಗಿರುವ ಬದಲು ಒಂದಿಷ್ಟು ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಸದಾ ಸಕ್ರಿಯವಾಗಿರುವುದರಿಂದ ದೇಹ ಮತ್ತು ಮನಸ್ಸು ಎರಡೂ ಆರೋಗ್ಯಕವಾಗಿರುತ್ತದೆ.
    • ಇವತ್ತಿನ ಉದ್ಯೋಗ ಶೈಲಿ ಮತ್ತು ಪಾರ್ಟಿಲೈಫ್​ಗಳಿಂದ ಮೊದಲು ಸಮಸ್ಯೆ ಎದುರಾಗುತ್ತಿರುವುದು ನಿದ್ದೆಗೆ. ಮನುಷ್ಯನಿಗೆ ನಿದ್ದೆ ಬಹಳ ಮುಖ್ಯ. ಅದರಲ್ಲೂ ಎಂಟು ತಾಸು ಒಳ್ಳೆಯ ನಿದ್ದೆಯಾದರೆ, ದಿನವೂ ಚೆನ್ನಾಗಿರುತ್ತದೆ ಮತ್ತು ಆರೋಗ್ಯವೂ ಚೆನ್ನಾಗಿರುತ್ತದೆ. ಆದರೆ, ಇಂದಿನ ಕೆಲಸದ ಸ್ವರೂಪ ಮತ್ತು ಒತ್ತಡದ ಜೀವನದಿಂದ ಒಳ್ಳೆಯ ನಿದ್ದೆ ಸಾಧ್ಯವಾಗುತ್ತಿಲ್ಲ. ಬರೀ ನಿದ್ದೆ ಮಾಡಿದರಷ್ಟೇ ಸಾಲದು. ಸಮಯಕ್ಕೆ ಸರಿಯಾಗಿ ನಿದ್ರೆ ಮಾಡಬೇಕು. ಇಲ್ಲವಾದರೆ ಅದರಿಂದಲೂ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವಾಗುವ ಸಾಧ್ಯತೆ ಇದೆ.
    • ಒತ್ತಡ, ಖಿನ್ನತೆ ಮತ್ತು ಮಾನಸಿಕ ಕಾಯಿಲೆಗಳು ಯುವಪೀಳಿಗೆಯಲ್ಲಿ ಹೆಚ್ಚುತ್ತಿದ್ದು, ಈ ಬಗ್ಗೆ ಚಿಕಿತ್ಸೆ ಪಡೆಯುವುದಕ್ಕೆ ಹಲವರು ಹಿಂಜರಿಯುತ್ತಿದ್ದಾರೆ. ಎಷ್ಟೋ ಜನ ತಮಗೆ ಗಂಭೀರವಾದ ಮಾನಸಿಕ ಕಾಯಿಲೆಗಳಿದ್ದರೂ ಅದಕ್ಕೆ ಚಿಕಿತ್ಸೆ ಪಡೆಯುವುದಾಗಲೀ ಅಥವಾ ಸಮಸ್ಯೆಗಳನ್ನು ಇನ್ನೊಬ್ಬರ ಬಳಿ ಹೇಳಿಕೊಂಡು ಅದಕ್ಕೆ ಪರಿಹಾರ ಪಡೆಯುವ ಬಗ್ಗೆಯಾಗಲೀ ಮಾಡುತ್ತಿಲ್ಲ. ಮಾನಸಿಕ ಸಮಸ್ಯೆಗಳು ಪ್ರಾಥಮಿಕ ಹಂತದಲ್ಲಿರುವಾಗಲೇ ಚಿವುಟಿ ಹಾಕಬೇಕು. ಅದನ್ನು ಹೇಳಿಕೊಂಡರೆ ಎಲ್ಲಿ ಮುಜುಗರವಾಗುತ್ತದೋ ಎಂಬ ಸುಮ್ಮನಿದ್ದುಬಿಟ್ಟರೆ, ಅದು ಮುಂದೆ ಕೈಮೀರಬಹುದು.
    • ಮದ್ಯಪಾನದಿಂದ ಯುವಜನತೆ ದೂರವಿರಬೇಕು. ಇದರಿಂದ ಹಲವು ದುಷ್ಪರಿಣಾಮಗಳಾಗುವುದರ ಜತೆಗೆ ಅದೊಂದು ಚಟವಾಗಿ ಕಾಡುತ್ತದೆ. ಮದ್ಯಪಾನ ಒಮ್ಮೆ ಚಟವಾದರೆ, ಅದರಿಂದ ಹೊರಬರುವುದು ಸುಲಭವಲ್ಲ. ಅದು ಬರೀ ಒಬ್ಬರ ಮೇಲಲ್ಲ, ಸುತ್ತಮುತ್ತಲಿನವರ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ, ಯಾವತ್ತೂ ಮದ್ಯಪಾನಕ್ಕೆ ನೋ ಎನ್ನಿ.
    • ಪಠ್ಯಕ್ರಮದಲ್ಲಿ ಲೈಂಗಿಕ ಶಿಕ್ಷಣ ಇರಬೇಕು. ಶಾಲೆ-ಕಾಲೇಜು ಮಟ್ಟದಲ್ಲೇ ಲೈಂಗಿಕ ಶಿಕ್ಷಣವನ್ನು ಹೇಳಿಕೊಡಬೇಕು. ಯುವಜನತೆಯಲ್ಲಿ ಲೈಂಗಿಕ ಆರೋಗ್ಯದ ಕುರಿತು ಹಾಗೂ ಯಾವುದು ಸರಿ, ಯಾವುದು ತಪು್ಪ ಎಂದು ತಿಳಿಸಬೇಕು.
    • ಸಾಮಾಜಿಕ ಕೌಶಲಗಳು ಮತ್ತು ಪರಸ್ಪರ ಕ್ರಿಯೆಯು ವ್ಯಕ್ತಿಯ ವಿಕಸನದಲ್ಲಿ ಮತ್ತು ಆರೋಗ್ಯಕರ ಸಮಾಜ ನಿರ್ವಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಆದರೆ, ಇಂದಿನ ದಿನಮಾನದಲ್ಲಿ ಸಾಮಾಜಿಕ ಜಾಲತಾಣಗಳು, ಮೊಬೈಲ್ ಫೋನ್, ವಿಡಿಯೋ ಗೇಮ್ಳನ್ನು ಹೆಚ್ಚುಹೆಚ್ಚು ಬಳಸುತ್ತಿರುವುದರಿಂದ ವಿಕಸನ ಕಡಿಮೆಯಾಗುತ್ತಿದೆ. ಮೊಬೈಲ್ ಫೋನ್​ಗಳನ್ನು ಪಕ್ಕಕ್ಕಿಟ್ಟು ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡಬೇಕಿದೆ.
    • ಇನ್ನೊಂದು ಪ್ರಮುಖ ಸಮಸ್ಯೆ ಡ್ರಗ್ಸ್. ಯುವಜನರಲ್ಲಿ ಡ್ರಗ್ಸ್ ಬಳಕೆ ಹೆಚ್ಚಾಗುತ್ತಿದ್ದು, ಇದರಿಂದ ಅವರ ದೈಹಿಕವಾಗಿ -ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಅವರಲ್ಲಿ ಜಾಗೃತಿ ಮೂಡಿಸಿ, ಪುನರ್ವಸತಿ ಕಲ್ಪಿಸುವುದರ ಜತೆಗೆ, ಡ್ರಗ್ಸ್ ಹಾವಳಿಯನ್ನು ಬುಡಸಮೇತ ಕಿತ್ತುಹಾಕುವಲ್ಲಿ ಎಲ್ಲರೂ ಶ್ರಮಿಸಬೇಕಿದೆ.

    ಈ ರೀತಿಯ ಕೆಲ ಕ್ರಮಗಳನ್ನು ತೆಗೆದುಕೊಂಡರೆ ದೇಶದ ಭವಿಷ್ಯವಾಗಿರುವ ಯುವಜನತೆಯನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವುದರ ಜತೆಗೆ, ಆರೋಗ್ಯಕರ ಸಮಾಜ ನಿರ್ವಣದ ಕಡೆಗೂ ಮುನ್ನಡೆಯಬಹುದು. ಯುವಕರಷ್ಟೇ ಅಲ್ಲ, ಹಿರಿಯರು ಸಹ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟರೆ ದೇಶದ ಭವಿಷ್ಯವೂ ಉಜ್ವಲವಾಗುವುದರಲ್ಲಿ ಸಂದೇಹವಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts