More

    ಆಯುಷ್ಮಾನ್ ಭಾರತಕ್ಕೆ ಅನಾರೋಗ್ಯ

    ಶಂಕರ ಶರ್ಮಾ ಕುಮಟಾ

    ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿನ ಆಯುಷ್ಮಾನ್ ಭಾರತ ಆರೋಗ್ಯ ಸೇವಾ ಕೇಂದ್ರವು ತಾಂತ್ರಿಕ ಸಮಸ್ಯೆಯಿಂದ ಬಳಲುತ್ತಿದ್ದು, 20 ದಿನಗಳಿಂದ ನೋಂದಣಿ ಕಾರ್ಯ ಸ್ಥಗಿತಗೊಂಡಿದೆ.

    ಹಲವು ತಿಂಗಳ ಹಿಂದಿನಿಂದಲೇ ಇಲ್ಲಿನ ಆಯುಷ್ಮಾನ್ ಸೇವಾ ಕೇಂದ್ರದಲ್ಲಿ ತಾಂತ್ರಿಕ ಹಾಗೂ ಸರ್ವರ್ ಸಮಸ್ಯೆಯಿಂದ ಕಾರ್ಡ್ ನೋಂದಣಿ ಹಾಗೂ ವಿತರಣೆಯಲ್ಲಿ ಕಿರಿಕಿರಿ ಎದುರಾಗಿದೆ. ಹೊಸ ವರ್ಷಾರಂಭದಿಂದ ಸಂಪೂರ್ಣವಾಗಿ ಆಯುಷ್ಮಾನ್ ಕಾರ್ಡ್ ವಿತರಣೆ ಸ್ಥಗಿತಗೊಂಡಿದೆ. ಹೀಗಾಗಿ 400ಕ್ಕೂ ಹೆಚ್ಚು ಕಾರ್ಡ್​ಗಳು ವಿತರಣೆಯಾಗದೆ ಉಳಿದಿವೆ.

    ಸಾರ್ವಜನಿಕ ಆಸ್ಪತ್ರೆ ಮಾತ್ರವಲ್ಲದೆ, ಇತರ ಖಾಸಗಿ ಸೇವಾ ಕೇಂದ್ರಗಳಲ್ಲೂ ದೂರಸಂಪರ್ಕ ಹಾಗೂ ಸರ್ವರ್ ಸಮಸ್ಯೆಯಿಂದ ಜನರು ಸಂಕಷ್ಟ ಎದುರಿಸುವಂತಾಗಿದೆ. ಬೆಳಗ್ಗೆ 9ರಿಂದ 10 ಗಂಟೆ ನಡುವೆ ಸ್ವಲ್ಪ ಮಟ್ಟಿಗೆ ಸರ್ವರ್ ಸರಿ ಇರುತ್ತದಾದರೂ ಎಲ್ಲೆಡೆ ಸೇವಾ ಕೇಂದ್ರಗಳಲ್ಲಿ ಏಕಕಾಲಕ್ಕೆ ಒತ್ತಡ ಸೃಷ್ಟಿಯಾಗಿ ಕೆಲವೇ ನಿಮಿಷಗಳಲ್ಲಿ ಸಂಪರ್ಕ ಕಡಿತಗೊಳ್ಳುತ್ತದೆ ಎನ್ನುತ್ತಾರೆ ಸೇವಾ ಕೇಂದ್ರದ ಸಿಬ್ಬಂದಿ. ಸೇವಾ ಕೇಂದ್ರಕ್ಕೆ ತೆರಳುತ್ತಿದ್ದಂತೆ ‘ತಾಂತ್ರಿಕ ದೋಷಗಳಿಂದ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ವಿತರಿಸಲು ಸಾಧ್ಯವಾಗುತ್ತಿಲ್ಲ. ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿ’ ಎಂಬ ಬರಹ ಕಣ್ಣಿಗೆ ರಾಚುತ್ತದೆ.

    ಸಾರ್ವಜನಿಕರು ಇತ್ತೀಚಿನ ವರ್ಷಗಳಲ್ಲಿ ಪ್ರತಿಯೊಂದು ದಾಖಲಾತಿ, ಸೌಲಭ್ಯಗಳ ನೋಂದಣಿ ಹಾಗೂ ವಿತರಣೆ ಡಿಜಿಟಲ್ ವ್ಯವಸ್ಥೆಯಡಿಯೇ ನಡೆಯುತ್ತದೆ. ಆಧಾರ್ ಕಾರ್ಡ್ ಸೇರಿ ಪ್ರತಿಯೊಂದು ಸೇವಾ ವ್ಯವಸ್ಥೆ ದೋಷಪೂರಿತವಾಗಿದ್ದು, ಸೇವಾ ಕೇಂದ್ರಗಳ ಸಂಖ್ಯೆಯೂ ತೀರಾ ಕಡಿಮೆ. ಹೀಗಾಗಿ, ಸಾರ್ವಜನಿಕರು ಸರ್ಕಾರಿ ಸೇವೆ ಪಡೆಯಲು ಪರದಾಡುವಂತಾಗಿದೆ. ಉತ್ತರ ಕನ್ನಡ ಜಿಲ್ಲಾದ್ಯಂತ ಇದೇ ದುರವಸ್ಥೆ ಇದ್ದು, ಸರ್ಕಾರದ ಸೌಲಭ್ಯಗಳನ್ನು ಪಡೆಯವುದು ಕಡು ಬಡವರ ಪಾಲಿಗೆ ಗಗನ ಕುಸುಮದಂತಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಸಮಸ್ಯೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

    ಸಮಸ್ಯೆ ಕುರಿತು ನನ್ನ ಗಮನಕ್ಕೆ ಬಂದಿದ್ದು, ತಾಂತ್ರಿಕ ಸಮಸ್ಯೆ ಬಗೆಹರಿಸಲು ಮೇಲಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ತಿಳಿಸಿದ್ದೇನೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಿರಂತರ ಕಾರ್ಯಪ್ರವೃತ್ತರಾಗಿದ್ದೇವೆ.
    | ಅಶೋಕಕುಮಾರ ಡಿಎಚ್​ಒ, ಕಾರವಾರ

    ಕಡು ಬಡವರಿಗೆ ಸಹಾಯವಾಗಲೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಆಯುಷ್ಮಾನ್ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೆ ಬಂದಿರುವುದು ಸ್ವಾಗತಾರ್ಹ. ಆದರೆ, ಈ ಯೋಜನೆ ಕೂಡ ಸರ್ಕಾರದ ಇತರ ಯೋಜನೆಗಳಂತೆ ಒಂದಿಲ್ಲೊಂದು ಸಮಸ್ಯೆಯಿಂದ ಗ್ರಹಣ ಪೀಡಿತವಾಗಿರುವುದು ನಿಜಕ್ಕೂ ಬೇಸರದ ಸಂಗತಿ. ಸರ್ವರ್ ಸಮಸ್ಯೆಯಿಂದ ಜ. 1ರಿಂದ ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಆಯುಷ್ಮಾನ್ ಕಾರ್ಡ್ ಸೇವೆ ಸ್ಥಗಿತಗೊಂಡಿದೆ. ಶೀಘ್ರ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು.

    | ವಿಶ್ವನಾಥ ನಾಯ್ಕ
    ಸಾಮಾಜಿಕ ಕಾರ್ಯಕರ್ತ, ಕುಮಟಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts