More

    ಆನೆ ದಾಳಿಯಿಂದ ಬೆಳೆ ಹಾನಿ

    ಮುಂಡಗೋಡ: ತಾಲೂಕಿನ ಪಾಳಾ ಮತ್ತು ಶಿಂಗನಳ್ಳಿ ಗ್ರಾಮಗಳ ಅರಣ್ಯದಂಚಿನಲ್ಲಿರುವ ತೋಟ ಮತ್ತು ಗದ್ದೆಗಳಿಗೆ ಕಳೆದ 2-3 ದಿನಗಳಿಂದ ರಾತ್ರಿ ವೇಳೆ ಕಾಡಾನೆಗಳ ಹಿಂಡು ದಾಳಿ ನಡೆಸಿ ಹಾನಿ ಉಂಟು ಮಾಡಿವೆ.

    ಶಿಂಗನಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಬಾಳೆ, ಅಡಕೆ ಮತ್ತು ಹುಲ್ಲಿನ ಬಣವೆ ನಾಶ ಮಾಡಿವೆ. ಶನಿವಾರ ರಾತ್ರಿ ಪಾಳಾ ಗ್ರಾಮದ ರಾಜು ಕೆರಿಹೊಲದವರ ಎಂಬ ರೈತನ ಎರಡು ಎಕರೆ ತೋಟಕ್ಕೆ ಕಾಡಾನೆಗಳು ನುಗ್ಗಿ ಬಾಳೆ ಮತ್ತು ಅಡಕೆ ತಿಂದು, ತುಳಿದು ಹಾನಿ ಮಾಡಿವೆ. ನಾರಾಯಣ ಓಣಿಕೇರಿ ಮತ್ತು ಸೋಮಣ್ಣ ಎಂಬುವರ ಗೋವಿನ ಜೋಳದ ಬೆಳೆ ನಾಶ ಮಾಡಿವೆ. ಕೆಲ ತಿಂಗಳ ಹಿಂದೆ ಇದೇ ಅರಣ್ಯದಂಚಿನಲ್ಲಿ ಆನೆಗಳು ಕಾಣಿಸಿಕೊಂಡು ರೈತರಲ್ಲಿ ಆತಂಕ ಮೂಡಿಸಿದ್ದವು.

    ಅಟ್ಟಣಗಿ ಭಾಗದಲ್ಲಿ ಮೂರು ದೊಡ್ಡ ಆನೆ ಮತ್ತು ಎರಡು ಮರಿಯಾನೆ ಹಾಗೂ ಕೂರ್ಲಿ ಭಾಗದಲ್ಲಿ ನಾಲ್ಕು ಆನೆಗಳ ಹಿಂಡು ಇದೆ ಎಂಬ ಮಾಹಿತಿ ಅರಣ್ಯ ಇಲಾಖೆಯವರಿಂದ ಬಂದಿತ್ತು. ಸದ್ಯ ಇದೇ ಭಾಗದ ಹುಡೇಲಕೊಪ್ಪ ಸಮೀಪದ ಅರಣ್ಯ ಪ್ರದೇಶದಲ್ಲಿ ಎರಡು ದೊಡ್ಡ ಆನೆ ಮತ್ತು ಎರಡು ಮರಿಯಾನೆ ಬೀಡು ಬಿಟ್ಟದ್ದು, ಆನೆಗಳನ್ನು ಓಡಿಸಲು ಅರಣ್ಯ ಇಲಾಖೆಯವರು ಸಿಡಿಮದ್ದುಗಳನ್ನು ಸಿಡಿಸುತ್ತಿದ್ದಾರೆ.

    ಅಲ್ಲದೆ, ಗುಂಜಾವತಿ ಗ್ರಾಪಂನ ಬಾಳೆಹಳ್ಳಿ ಅರಣ್ಯ ಪ್ರದೇಶದಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು ಅದರಲ್ಲಿ ಅವಧಿಗೂ ಮುನ್ನ ಹೆಣ್ಣಾನೆಯ ಪ್ರಸವವಾಗಿ ಅದರ ಮರಿ ಮೃತಪಟ್ಟಿತ್ತು. ಈಗ ಅದು ತನ್ನ ಮರಿ ಆನೆಗಾಗಿ ಹುಡುಕಾಡುತ್ತಿರುವುದು ಕಂಡು ಬಂದಿದೆ. ಇದರಿಂದ ಆ ಭಾಗದ ರೈತರಲ್ಲಿಯೂ ಆತಂಕ ಮೂಡಿದೆ.

    ಕಾಡಾನೆಗಳನ್ನು ಅರಣ್ಯದತ್ತ ಓಡಿಸಲು ನಮ್ಮ ಸಿಬ್ಬಂದಿ ಮತ್ತು ಸಾರ್ವಜನಿಕರು 2-3 ದಿನಗಳಿಂದ ಕಾರ್ಯಾಚರಣೆ ನಡೆಸಿದ್ದಾರೆ. ಕೆಲ ರೈತರ ಬೆಳೆ ಹಾನಿಯಾಗಿದೆ. ಜ. 30ರ ನಂತರ ಅವು ತಮ್ಮ ಮೂಲ ಸ್ಥಾನಕ್ಕೆ ತೆರಳುವ ಸಾಧ್ಯತೆ ಇದೆ.
    ಅಜಯ ನಾಯ್ಕ ಆರ್​ಎಫ್​ಒ ಕಾತೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts