More

    ಆಧುನಿಕ ಹವ್ಯಾಸಿ ರಂಗಭೂಮಿಗೆ ಭವಿಷ್ಯವಿಲ್ಲ

    ಹುಬ್ಬಳ್ಳಿ: ಸಿನಿಮಾ ಹಾಗೂ ನವ ಮಾಧ್ಯಮಗಳಿಂದ ಆಧುನಿಕ ಹವ್ಯಾಸಿ ರಂಗಭೂಮಿ ಕಲೆಗೆ ಭವಿಷ್ಯವಿಲ್ಲವೆಂಬ ಪರಿಸ್ಥಿತಿ ನಿರ್ವಣವಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಚಂದ್ರೇಶೇಖರ ಕಂಬಾರ ವಿಷಾದ ವ್ಯಕ್ತಪಡಿಸಿದರು.

    ಲೋಹಿಯಾ ನಗರದಲ್ಲಿ ಗುರು ಇನ್​ಸ್ಟಿಟ್ಯೂಟ್ ನಿರ್ವಿುಸಿದ ಆದಿರಂಗ ಥೇಟರ್ಸ್ ಅನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮದ ಹಿನ್ನೆಲೆಯಿರುವ ಯಕ್ಷಗಾನ ಕಲೆ ತನ್ನದೇ ಆದ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತದೆ. ಆದರೆ, ಧರ್ಮ ಬಿಟ್ಟಿರುವ ಆಧುನಿಕ ರಂಗಭೂಮಿ ಬಗ್ಗೆ ಹಾಗೆ ಹೇಳಲು ಸಾಧ್ಯವಿಲ್ಲ. ರಂಗಭೂಮಿಯಿಂದ ಕಿರುತೆರೆಗೆ ಜಂಪ್ ಮಾಡುವ ಕಲಾವಿದರು ವಾಪಸ್ ರಂಗಭೂಮಿಗೆ ಬರುವುದಿಲ್ಲ. ಕಲಾವಿದರಿಗೆ ನಂಬಿಕೆ ಇಲ್ಲದ ಮೇಲೆ ರಂಗಭೂಮಿಗೆ ಭವಿಷ್ಯವಿದೆ ಎಂದು ಹೇಗೆ ಹೇಳಲು ಸಾಧ್ಯ ಎಂದು ವಿಶ್ಲೇಷಿಸಿದರು.

    ನಾವು ಪಶ್ಚಿಮ ಬುದ್ಧಿಯವರಾದ್ದರಿಂದ ನಮ್ಮ ಆಲೋಚನಾ ಕ್ರಮಗಳು ಬದಲಾಗಿವೆ. ನೆನಪುಗಳು ಎಷ್ಟು ಆಳವಾಗಿ ಇರುತ್ತವೆಯೋ ಅಷ್ಟು ನಮ್ಮ ಸಂಸ್ಕೃತಿ ಗಟ್ಟಿಮುಟ್ಟಾಗಿ ಇರುತ್ತದೆ. ನಮ್ಮ ಬಳಿ 10 ಸಾವಿರ ವರ್ಷಗಳ ನೆನಪುಗಳಿವೆ. ಆದರೆ, ಕನಸುಗಳು ಇಲ್ಲ. ಭಾರತೀಯ ಸಂಸ್ಕೃತಿಗೆ ಆಧಾರವಾಗಿ ಕನಸುಗಳು ಇರಬೇಕು. ಮಕ್ಕಳು ದಿನದ ನಾಲ್ಕೈದು ತಾಸು ಮೊಬೈಲ್​ನಲ್ಲಿ ತಲ್ಲೀನರಾದರೆ ಕನಸುಗಳು ಹುಟ್ಟಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಮೊದಲು ನಮ್ಮ ಸಂಸ್ಕೃತಿಯನ್ನು ಗ್ರಹಿಸುವ ಇಂದ್ರಿಯ ಕಿವಿ ಆಗಿತ್ತು. ನವ ಮಾಧ್ಯಮಗಳ ಕಾಲದಲ್ಲಿ ಆ ಸ್ಥಾನವನ್ನು ಕಣ್ಣು ಆಕ್ರಮಿಸಿದೆ. ಕಣ್ಣಿಗೆ ಕಂಡಿದ್ದೆಲ್ಲ ಸತ್ಯವಲ್ಲ ಎಂಬುದನ್ನು ನವ ಮಾಧ್ಯಮಗಳು ನಿರೂಪಿಸಿವೆ. ಒಂದು ಸುಳ್ಳನ್ನು ನಿಜವೆಂದು ತೋರಿಸುವ ಕಾಲದಲ್ಲಿ ನಾವಿದ್ದೇವೆ ಎಂದರು.

    ಆದಿರಂಗ ಥೇಟರ್ಸ್​ನ ವೆಬ್​ಸೈಟ್​ಗೆ ಚಾಲನೆ ನೀಡಿದ ಶಾಸಕ ಅರವಿಂದ ಬೆಲ್ಲದ, ನಾಟಕ ಆಡಿಸುವುದು ಸುಲಭವಲ್ಲ. ತುಂಬಾ ತ್ರಾಸದಾಯಕ. ಈ ನಡುವೆ ಆದಿರಂಗ ಥೇಟರ್ಸ್ ಕಟ್ಟಿರುವುದು ಶ್ಲಾಘನೀಯ ಎಂದರು. ಗುರು ಇನ್​ಸ್ಟಿಟ್ಯೂಟ್​ನ ಯಶವಂತ ಸರದೇಶಪಾಂಡೆ ಮಾತನಾಡಿ, ಆದಿರಂಗ ಥೇಟರ್ಸ್ ಎಂಬ ಕಲಾ ಸಂಕುಲದಲ್ಲಿ ಬೇಂದ್ರೆ, ವಿಜಯ, ಅನಂತ, ಸಾಧನಾ, ಶ್ರೀಕಲ್ಪ, ಶಾಂತಿ ಮತ್ತು ರುಚಿ ಎಂಬ 7 ರಂಗಗಳಿವೆ. ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಜೀವನದುದ್ದಕ್ಕೂ ಅಳವಡಿಸಿಕೊಂಡಿರುವ ಸಮಯಪ್ರಜ್ಞೆ, ಶ್ರದ್ಧೆ, ಪರಿಶ್ರಮ, ಸಾಹಸ ಹಾಗೂ ಶಾಂತಿ ನಮ್ಮಲ್ಲೂ ಬೆಳೆದು ಬರಲಿ ಎಂದು ಒಂದು ರಂಗಕ್ಕೆ ವಿಜಯರಂಗ ಎಂದು ಹೆಸರಿಸಿದ್ದೇವೆ ಎಂದು ವಿವರಿಸಿದರು.

    ಉದ್ಯಮಿ ಎಚ್.ಎನ್. ನಂದಕುಮಾರ, ಡಾ. ಶಂಕರ ಬಿಜಾಪುರ, ಪ್ರಾಚಾರ್ಯ ಮೋಹನ ಸಿದ್ಧಾಂತಿ, ಜಯಂತ ಅರಬಟ್ಟ, ರಾಮಣ್ಣ ಬಡಿಗೇರ, ಮಾಲತಿ ಸರದೇಶಪಾಂಡೆ ಇದ್ದರು. ಕಲಾವಿದ ಪ್ರವೀಣ ಗೋಡಖಿಂಡಿ ಕೊಳಲು ವಾದನ ಪ್ರಸ್ತುತಪಡಿಸಿ ರಂಜಿಸಿದರು. ಹಿರಿಯ ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts