More

    ಆದಾಯ, ಸರಕು ನಿರ್ವಹಣೆಯಲ್ಲಿ ನೈಋತ್ಯ ರೈಲ್ವೆ ದಾಖಲೆ

    ಹುಬ್ಬಳ್ಳಿ : ನೈಋತ್ಯ ರೈಲ್ವೆ ವಲಯವು 2003ರಲ್ಲಿ ಸ್ಥಾಪನೆಗೊಂಡಾಗಿನಿಂದ ಇದುವರೆಗಿನ ಅತ್ಯುತ್ತಮ ಗಳಿಕೆ ಮತ್ತು ಸರಕು ಸಾಗಣೆಯ ಕಾರ್ಯಕ್ಷಮತೆಯನ್ನು ಮೀರಿ ಹೊಸ ದಾಖಲೆ ನಿರ್ವಿುಸಿದೆ.

    ನೈಋತ್ಯ ರೈಲ್ವೆಯು 2022ರ ಮಾರ್ಚ್​ನಿಂದ 2023ರ ಏಪ್ರಿಲ್​ವರೆಗಿನ ಅವಧಿಯಲ್ಲಿ ಅತ್ಯಧಿಕ 8,071 ಕೋಟಿ ರೂ. ಆದಾಯ ಗಳಿಸಿದೆ.

    ನೈಋತ್ಯ ರೈಲ್ವೆ ವಲಯ ಸ್ಥಾಪನೆಗೊಂಡ ನಂತರ ಇದೇ ಮೊದಲ ಬಾರಿಗೆ ಆದಾಯವು 8 ಸಾವಿರ ಕೋಟಿ ರೂ. ದಾಟಿದೆ. 2022-23 ರಲ್ಲಿನ ಒಟ್ಟು ಆದಾಯವು 2021-22 ರಲ್ಲಿ ದಾಖಲಾದ ಶೇ.30 ಕ್ಕಿಂತ ಹೆಚ್ಚಾಗಿದೆ.

    ನೈಋತ್ಯ ರೈಲ್ವೆ ವಲಯವು 2007-08ರಲ್ಲಿ ದಾಖಲಿಸಿದ್ದ 46.24 ಮಿಲಿಯನ್ ಟನ್​ಗಳ ಹಿಂದಿನ ದಾಖಲೆ ಮೀರಿ, 2022-23ರಲ್ಲಿ 47.7 ಮಿಲಿಯನ್ ಟನ್​ಗಳ ಸರಕು ಸಾಗಿಸಿದೆ. ವಲಯದ ಮೂರು ವಿಭಾಗಗಳ ವ್ಯಾಪ್ತಿಯಲ್ಲಿ ಗ್ರಾಹಕರ ಕೇಂದ್ರಿತ ವ್ಯಾಪಾರ ಅಭಿವೃದ್ಧಿ ಘಟಕಗಳ ಸ್ಥಾಪನೆ ಹಾಗೂ ರೈಲ್ವೆ ಯೋಜನೆ ಮತ್ತು ಉತ್ಪನ್ನಗಳನ್ನು ಮಾರ್ಕೆಟಿಂಗ್ ಮಾಡುವ ಸಂಘಟಿತ ಪ್ರಯತ್ನದ ಫಲಗಳಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ವಲಯದ ಅಧಿಕಾರಿಗಳು ತಿಳಿಸಿದ್ದಾರೆ.

    ಪ್ರಯಾಣಿಕರ ಬೇಡಿಕೆಯ ಮೇರೆಗೆ ಹಬ್ಬ, ರಜಾ ದಿನ ಮತ್ತು ಇತರ ವಿಶೇಷ ಸಂದರ್ಭಗಳಲ್ಲಿ ವಿಶೇಷ ರೈಲುಗಳನ್ನು ಓಡಿಸಲಾಗಿದೆ. 253 ಹೆಚ್ಚುವರಿ ಬೋಗಿಗಳನ್ನು ಶಾಶ್ವತ ಮತ್ತು 224 ಬೋಗಿಗಳನ್ನು ತಾತ್ಕಾಲಿಕ ಆಧಾರದ ಮೇಲೆ ಜೋಡಿಸಲಾಗಿದೆ. ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರ ಅನುಕೂಲಕ್ಕಾಗಿ ವರ್ಷದಲ್ಲಿ 2,335 ಹೆಚ್ಚುವರಿ ಬೋಗಿಗಳನ್ನು ಒದಗಿಸಿದೆ. ನಾಲ್ಕು ಹೊಸ ರೈಲು, ಎರಡು ರೈಲುಗಳ ವಿಸ್ತರಣೆ ಹಾಗೂ ಎರಡು ರೈಲುಗಳ ಸೇವೆಯನ್ನು ಆವರ್ತನೆ (ಫ್ರಿಕ್ವೆನ್ಸಿ) ಗೆ ಹೆಚ್ಚಿಸಲಾಗಿದೆ. 116 ರೈಲುಗಳ ವೇಗವನ್ನು ಹೆಚ್ಚಿಸುವ ಮೂಲಕ 2,816 ನಿಮಿಷಗಳ ಪ್ರಯಾಣದ ಸಮಯ ಉಳಿಸಿದಂತಾಗಿದೆ. 6 ಜೋಡಿ ರೈಲುಗಳನ್ನು ಸೂಪರ್​ಫಾಸ್ಟ್ ಎಕ್ಸ್​ಪ್ರೆಸ್ ರೈಲುಗಳಾಗಿ ಮೇಲ್ದರ್ಜೆಗೇರಿಸಲಾಗಿದೆ. ಪ್ರಯಾಣಿಕರ ಸುರಕ್ಷತೆ ಹಾಗೂ ಸೌಕರ್ಯ ಒದಗಿಸುವುದಕ್ಕಾಗಿ 10 ರೈಲುಗಳನ್ನು ಸಾಂಪ್ರದಾಯಿಕ ಐಸಿಎಫ್ ಬೋಗಿಗಳಿಂದ ಎಲ್​ಎಚ್​ಬಿ ಬೋಗಿಗಳಾಗಿ ಮಾರ್ಪಾಡು ಮಾಡಲಾಗಿದೆ. ಪ್ರಯಾಣಿಕರ ವಿನಂತಿ ಮೇರೆಗೆ ಒಟ್ಟು 13 ಎಫ್​ಟಿಆರ್ ಸೇವೆಗಳು, ವಿಶೇಷ ರೈಲುಗಳಿಗೆ 49 ಎಫ್​ಟಿಆರ್ ಬೋಗಿಗಳನ್ನು ಜೋಡಿಸುವ ಮೂಲಕ ಓಡಿಸಲಾಗಿದೆ.

    2022-23ರ ಆರ್ಥಿಕ ವರ್ಷದಲ್ಲಿ ಒಟ್ಟು 150.34 ಮಿಲಿಯನ್ ಪ್ರಯಾಣಿಕರನ್ನು ಸಾಗಿಸಲಾಗಿದ್ದು, ಇದು ವಲಯ ಪ್ರಾರಂಭ ಆದಾಗಿನಿಂದ ಇಲ್ಲಿವರೆಗಿನ ಅತ್ಯಧಿಕ ದಾಖಲೆಯಾಗಿದೆ. ಒಟ್ಟು 3,506 ಪಾರ್ಸೆಲ್ ವ್ಯಾನ್​ಗಳನ್ನು ಗುತ್ತಿಗೆ ನೀಡಲಾಗಿದ್ದು, ಇವುಗಳು 82,200 ಟನ್ ಅಗತ್ಯ ವಸ್ತುಗಳ ಸರಕುಗಳನ್ನು ಸಾಗಿಸುವ ಮೂಲಕ 57 ಕೋಟಿ ರೂ. ಆದಾಯ ಗಳಿಸಿವೆ. 170 ಪಾರ್ಸೆಲ್ ಕಾಗೋ ಎಕ್ಸ್​ಪ್ರೆಸ್ ರೈಲುಗಳನ್ನು ಗುತ್ತಿಗೆ ನೀಡಿ, ಅವುಗಳಿಂದ 60,493 ಟನ್ ಸರಕು ಸಾಗಿಸುವ ಮೂಲಕ 28 ಕೋಟಿ ರೂ. ಆದಾಯ ಗಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ವಲಯದ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts