More

    ಅಹೋ ರಾತ್ರಿ ಧರಣಿಗೆ ನಿರ್ಧಾರ

    ಕಾರವಾರ: ವಾಣಿಜ್ಯ ಬಂದರು ವಿಸ್ತರಣೆ ವಿರೋಧಿಸಿ ಮೀನುಗಾರರು ಜಿಲ್ಲಾಧಿಕಾರಿ ಕಚೇರಿ ಎದುರು ಅಹೋ ರಾತ್ರಿ ಧರಣಿಗೆ ಮುಂದಾಗಿದ್ದಾರೆ.
    ಸಾಗರ ಮಾಲಾ ಯೋಜನೆಯಡಿ ಅಲೆ ತಡೆಗೋಡೆ, ಜಟ್ಟಿ ವಿಸ್ತರಣೆ ಕಾಮಗಾರಿ ತಡೆಯಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸಿದ ಧರಣಿ ಶನಿವಾರ ಆರನೇ ದಿನ ಪೂರೈಸಿತು. ಪ್ರತಿಭಟನಾ ನಿರತರು ಶನಿವಾರ ಪ್ರತಿಭಟನಾ ಸ್ಥಳದಲ್ಲೇ ಅಡುಗೆ ತಯಾರಿಸಿ ಊಟ ಮಾಡಿದರು. ಅಹೋ ರಾತ್ರಿ ಧರಣಿ ಮುಂದುವರಿಸುತ್ತೇವೆ. ಬಂದರು ವಿಸ್ತರಣೆ ಕಾಮಗಾರಿ ಕೈಬಿಡುವವರೆಗೆ ಧರಣಿ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖಂಡ ವಿನಾಯಕ ಹರಿಕಂತ್ರ ತಿಳಿಸಿದ್ದಾರೆ.
    ಸಂಘಟನೆಗಳ ಬೆಂಬಲ: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜು ಮಾಸ್ತಿ ಹಳ್ಳ ಹಾಗೂ ಇತರ ಸದಸ್ಯರು ಮೀನುಗಾರರ ಪ್ರತಿಭಟನೆಗೆ ಬೆಂಬಲ ನೀಡಿದರು. ರಾಜ್ಯ ರೈತ ಸಂಘದ ಪ್ರಸನ್ನ ಕುಮಾರ ಆಗಮಿಸಿ ಬೆಂಬಲ ನೀಡಿದರು. ವಿಸ್ತರಣೆ ಕಾಮಗಾರಿ ಕೈಬಿಡದಿದ್ದಲ್ಲಿ ಜ. 26ರಂದು ವಿಧಾನಸೌಧದ ಎದುರು ಧರಣಿ ನಡೆಸುವುದಾಗಿ ಎಚ್ಚರಿಸಿ ಭೂ ದಾಖಲೆ ಗಳ ಇಲಾಖೆ ಸಹಾಯಕ ನಿರ್ದೇಶಕ ರಜು ಪೂಜಾರಿ ಅವರಿಗೆ ಮಾಹಿತಿ ಪತ್ರ ಸಲ್ಲಿಸಿದರು.
    ಕಲ್ಲು ಹರಾಜು: ಚತುಷ್ಪಥ ಕಾಮಗಾರಿಗಾಗಿ ಐಆರ್​ಬಿ ಕಂಪನಿ ತೆಗೆದ ಕಲ್ಲುಗಳನ್ನು ಆ ಕಂಪನಿ ಬಳಕೆ ಮಾಡಿಲ್ಲ. ಅದನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹರಾಜು ಹಾಕಿದೆ. ಕಲ್ಲು ಪೂರೈಕೆಯಲ್ಲಿ ಅವ್ಯವಹಾರವಾಗಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಆದರೆ, ಅಂಥ ಯಾವುದೇ ವ್ಯವಹಾರ ನಡೆದಿಲ್ಲ. ಹರಾಜಿನಲ್ಲಿ ಕಲ್ಲು ಪಡೆದ ಗುತ್ತಿಗೆದಾರರಿಗೆ ಅದನ್ನು ತಕ್ಷಣ ಸ್ಥಳಾಂತರ ಮಾಡುವಂತೆ ನಾವು ಷರತ್ತು ಹಾಕಿದ್ದೇವೆ. ಅದರಂತೆ ಕಲ್ಲನ್ನು ಕಡಲ ತೀರದಲ್ಲಿ ಹಾಗೂ ಬಂದರು ಪ್ರದೇಶದಲ್ಲಿ ಸಂಗ್ರಹಿಸಲಾಗುತ್ತಿದೆ. ಅದನ್ನು ತಡೆಯುವುದು ಸರಿಯಲ್ಲ ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ತಿಳಿಸಿದ್ದಾರೆ.
    ಶೀಘ್ರ ಮಾತುಕತೆ
    ಮೀನುಗಾರ ಮುಖಂಡರ ಜತೆ ಸಚಿವರು ಸಭೆ ನಡೆಸಲಿದ್ದಾರೆ. ಅಲ್ಲಿಯವರೆಗೆ ಸಮುದ್ರಕ್ಕೆ ಕಲ್ಲು ಹಾಕುವುದನ್ನು ನಿಲ್ಲಿಸಲಾಗುವುದು. ವಾಣಿಜ್ಯ ಬಂದರು ವಿಸ್ತರಣೆಯಿಂದ ಮೀನುಗಾರಿಕೆಗೆ ಯಾವುದೇ ಹಾನಿಯಿಲ್ಲ. ಆದರೂ, ಈ ಕುರಿತು ಮೀನುಗಾರ ಮುಖಂಡರ ಜತೆ ವಿಧಾನಸೌಧದಲ್ಲಿ ಚರ್ಚೆ ನಡೆಸಲಾಗುವುದು ಎಂದು ಬಂದರು ಹಾಗೂ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಮಾತುಕತೆಗಾಗಿ ಯಾವ ಮುಖಂಡರು ತೆರಳಬೇಕು ಎಂಬುದನ್ನು ರ್ಚಚಿಸಿ ಪಟ್ಟಿ ನೀಡುವಂತೆ ಸೂಚಿಸಿದ್ದೇನೆ ಎಂದು ಡಿಸಿ ಡಾ. ಹರೀಶ ಕುಮಾರ ಕೆ. ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts