More

    ಅಧಿಸೂಚನೆ ಹೊರಡಿಸಿ, ಕಾಮಗಾರಿ ಆರಂಭಿಸಿ

    ಗದಗ: ಮಹದಾಯಿ ನ್ಯಾಯಾಧಿಕರಣದ ಆದೇಶದ ಪ್ರಕಾರ ಮಹದಾಯಿ, ಕಳಸಾ-ಬಂಡೂರಿ ಯೋಜನೆಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿ ಕಾಮಗಾರಿ ಆರಂಭಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಆಗ್ರಹಿಸಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿ ಕುರಿತಂತೆ ವಿವಿಧ ರೈತ ಪರ ಸಂಘಟನೆಗಳ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

    ಈ ಕುರಿತು ಜ. 5ರಂದು ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್​ನಲ್ಲಿ ಮಹತ್ವದ ಸಭೆ ಆಯೋಜಿಸಲಾಗಿದ್ದು, ಸಭೆಗೆ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಎಲ್ಲ ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರು, ವಿಧಾನಸಭೆ ಸದಸ್ಯರು ಸಭೆ ಹಾಜರಾಗುವಂತೆ ಮನವಿ ಮಾಡಲಾಗಿದೆ ಎಂದರು.

    ಸರ್ವ ಪಕ್ಷಗಳ ನಾಯಕರು ಹಾಗೂ ಜನಪ್ರತಿನಿಧಿಗಳು ಒಂದಾಗಿ ಹೋರಾಟ ಮಾಡುತ್ತೇವೆ. ಹೋರಾಟದ ಮುಂದಾಳತ್ವ ವಹಿಸಿಕೊಳ್ಳುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.

    ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ, ಶರಣಪ್ಪ ಮತ್ತಿಕಟ್ಟಿ, ರೈತ ಮುಖಂಡರಾದ ಸಿದ್ದು ತೇಜಿ, ಅಮೃತ ಇಜಾರಿ, ಶರಣಬಸಪ್ಪ ಹೂಗಾರ, ಎಂ.ಎಸ್.ಹಡಪದ, ಬಸವರಾಜ ಸಾಬಳೆ, ಶಾಂತವೀರಯ್ಯ ನರಗುಂದ, ಶ್ರೀಶೈಲ ಮೇಟಿ ಇತರರಿದ್ದರು.

    ರಕ್ತ ಕೊಡಲು ಸಿದ್ಧ

    ಯೋಜನೆ ಜಾರಿಗೆ ರಕ್ತ ಕೊಡಲು ಸಿದ್ಧ ಎಂದು ಸಭೆಯಲ್ಲಿ ಕೆಲ ರೈತರು ಆಕ್ರೋಶಭರಿತರಾಗಿ ಹೇಳಿದರು. ಕಳೆದ ವಿಧಾನಸಭೆ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಮಹದಾಯಿ ಯೋಜನೆ ಜಾರಿಗೊಳಿಸುವ ಭರವಸೆ ನೀಡಿದ್ದರು. ನರಗುಂದ ಪಟ್ಟಣದಲ್ಲಿ ಅಮಿತ್ ಶಾ ಕೂಡ ಇದೇ ಭರವಸೆ ನೀಡಿದ್ದರು. ರಾಜ್ಯ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಯೋಜನೆ ಜಾರಿಯಾಗುತ್ತಿಲ್ಲ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಈ ಕುರಿತು ಗಂಭೀರ ಚಿಂತನೆ ಮಾಡಬೇಕು ಎಂದು ಆಗ್ರಹಿಸಿದರು.

    ಮುಖಂಡರಲ್ಲೇ ವಾಗ್ವಾದ!

    ಮಹದಾಯಿ, ಕಳಸಾ-ಬಂಡೂರಿ ವಿಷಯದಲ್ಲಿ ರಾಜಕೀಯ ಮಾಡಲಾಗುತ್ತಿದೆ. ಹೋರಾಟ ಪಕ್ಷಾತೀತ ಎನ್ನುವುದಾದರೆ ಜೆಡಿಎಸ್ ಮುಖಂಡರು ಮಾತ್ರ ಸಭೆಯಲ್ಲಿ ಪಾಲ್ಗೊಂಡಿರುವುದು ಏಕೆ ಎಂದು ಕೆಲ ರೈತ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡರ ನಡುವೆ ಮಾತಿನ ಚಕಮಕಿ, ವಾಗ್ವಾದ ನಡೆಯಿತಲ್ಲದೇ, ಪಕ್ಷಾತೀತ ಮುಖಂಡರ ಸಭೆ ಎಂದರೆ ಎಲ್ಲ ಪಕ್ಷದವರು ಇರಬೇಕಿತ್ತು ಎಂದು ಕೆಲವರು ಪ್ರಶ್ನಿಸಿದರು. ರೈತರಿಗೆ ಅನ್ಯಾಯವಾದಾಗ ಇವರೆಲ್ಲ ಎಲ್ಲಿ ಇದ್ದರು. ಆಗ ಇಲ್ಲದ ಕನಿಕರ ಈಗೇಕೆ ಬಂದಿತು ಎಂದು ತಮ್ಮ ಅಸಮಾಧಾನ ಹೊರಹಾಕಿದ ಪ್ರಸಂಗವೂ ನಡೆಯಿತು. ನಂತರ ಅವರನ್ನು ಸಮಾಧಾನಪಡಿಸಲಾಯಿತು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts