More

    ಅತಿ ಆಸೆಯಿಂದ ಭೂಮಿ ಹಾಳು

    ಎಚ್.ಡಿ.ಕೋಟೆ: ಮನುಷ್ಯನ ಅತಿ ಆಸೆ, ಕ್ರೌರ್ಯದಿಂದ ಭೂಮಿ ಹಾಳಾಗುತ್ತಿದೆ ಎಂದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ಬಿ. ಜಯರಾಮ ನೆಲ್ಲಿತಾಯ ಹೇಳಿದರು.
    ತಾಲೂಕಿನ ರಾಮೇನಹಳ್ಳಿ ಗ್ರಾಮದಲ್ಲಿ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ 471ನೇ ಕೆರೆಯ ಹೂಳೆತ್ತುವ ಕಾಮಗಾರಿಗೆ ಭೂಮಿಪೂಜೆ ಮಾಡಿ ಮಾತನಾಡಿದರು.
    ಭೂಮಿ ತಾಯಿ ಇಲ್ಲದಿದ್ದರೆ ಜಗತ್ತಿಲ್ಲ. ಭೂಮಿ ತಂಪಾಗಿದ್ದರೆ, ಜೀವಸಂಕುಲವೇ ತಂಪಾಗಿರುತ್ತದೆ. ನಮ್ಮ ಪೂರ್ವಜರು ಪ್ರತಿ ಗ್ರಾಮದಲ್ಲಿ ದೇವಸ್ಥಾನ, ಕೆರೆ, ಶಾಲೆ ನಿರ್ಮಾಣ ಮಾಡುತ್ತಿದ್ದರು. ಆದರೆ ಇಂದು ಅದನ್ನು ನಾವು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
    ಕೆರೆ ಹೂಳೆತ್ತುವ ಪುಣ್ಯ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು, ರಾಮೇನಹಳ್ಳಿ ಕೆರೆ ಸುಮಾರು 6.20 ಎಕರೆ ಇದ್ದು, ಗ್ರಾಮದಲ್ಲಿ 400 ಕುಟುಂಬಗಳಿಗೆ ಕೆರೆ ನೆರವಾಗಲಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 11.14 ಲಕ್ಷ ರೂ. ಸಹಾಯಧನ ನೀಡಲಾಗಿದೆ. ಗ್ರಾಮಸ್ಥರು ಪಾಲು 9.59 ಲಕ್ಷ ರೂ. ಸೇರಿ ಒಟ್ಟು 20.73 ಲಕ್ಷ ರೂ.ಗಳ ಯೋಜನೆ ಇದಾಗಿದೆ ಎಂದು ಹೇಳಿದರು.
    ಗ್ರಾಮಸ್ಥರು ಸುಮಾರು 800 1ಟ್ರಾೃಕ್ಟರ್ ಮಣ್ಣು ತೆಗೆದುಕೊಂಡು ಹೋಗಲು ಆಸಕ್ತಿ ತೋರಿದ್ದಾರೆ. ಕೆರೆಯಿಂದ ನೂರಾರು ಎಕರೆ ಜಮೀನಿಗೆ ಉಪಯೋಗವಾಗಲಿದೆ. ಸುಮಾರು 1300 ಜಾನುವಾರುಗಳಿಗೆ ಕುಡಿಯುವ ನೀರನ್ನು ಒದಗಿಸುತ್ತದೆ. ಕೆರೆ ಅಭಿವೃದ್ಧಿಯಿಂದ ಅಂತರ್ಜಲ ಮಟ್ಟ ಹೆಚ್ಚಲಿದೆ. ಕೊಳವೆಬಾವಿಗಳು ಮರುಪೂರಣಗೊಂಡರೆ ಕೃಷಿ ಭೂಮಿಗೆ ನೀರು ಒದಗಿಸಲು ಸಹಾಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
    ಜಿಲ್ಲಾ ನಿರ್ದೇಶಕ ಲಕ್ಷ್ಮಣ್, ತಾಲೂಕು ಯೋಜನಾಧಿಕಾರಿ ಶಶಿಧರ್, ಸಮಿತಿ ಅಧ್ಯಕ್ಷ ಚಂದ್ರನಾಯಕ, ಗ್ರಾಮ ಪಂಚಾಯಿತಿ ಸದಸ್ಯರಾದ ಉಮೇಶ್, ಸುರೇಶ್, ಕೃಷಿ ಮೇಲ್ವಿಚಾರಕ ಜಯರಾಮ, ಮೇಲ್ವಿಚಾರಕ ಕೃಷ್ಣಮೂರ್ತಿ, ಮುಖಂಡರಾದ ಪ್ರಕಾಶ್, ಬಸವರಾಜು, ತಿಮ್ಮಶೆಟ್ಟಿ, ಸೇವಾ ಪ್ರತಿನಿಧಿ ಸಚಿನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts