More

    ಅತಿಯಾದ ಅಭಿವೃದ್ಧಿಯೇ ಪರಿಸರ ನಾಶಕ್ಕೆ ನಾಂದಿ: ಸುರೇಶ್ ಹೆಬ್ಲಿಕರ್ ಅಭಿಮತ

    ಮೈಸೂರು: ಅತಿಯಾದ ಅಭಿವೃದ್ಧಿಯೇ ಈಗ ಪರಿಸರ ನಾಶಕ್ಕೆ ನಾಂದಿ ಆಗುತ್ತಿದ್ದು, ಮಿತಿ ಮೀರಿದ ಕಾಂಕ್ರಿಟೀಕರಣ ಆಗುತ್ತಿದೆ ಎಂದು ಪರಿಸರವಾದಿ, ನಟ ಸುರೇಶ್ ಹೆಬ್ಲಿಕರ್ ಬೇಸರ ವ್ಯಕ್ತಪಡಿಸಿದರು.
    ಕೇಂದ್ರೀಯ ಆಹಾರ ತಂತ್ರಜ್ಞಾನ ಹಾಗೂ ಸಂಶೋಧನಾ ಕೇಂದ್ರದಿಂದ ಸೋಮವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಜಾಗತೀಕರಣದ ಮೊದಲು ಭಾರತದ ಪರಿಸ್ಥಿತಿ ವಿಭಿನ್ನವಾಗಿತ್ತು. ಆದರೆ ಈಗ ದೇಶ ಬದಲಾಗಿದ್ದು, ಎಲ್ಲರೂ ಸ್ಮಾರ್ಟ್‌ಸಿಟಿ, ಮೆಟ್ರೋ ಬೇಕು ಎನ್ನುತ್ತಿದ್ದಾರೆ. ಇದರಿಂದಲೂ ಕಾಂಕ್ರಿಟೀಕರಣ ಹೆಚ್ಚಾಗಿದೆ. ಅತಿಯಾದ ಅಭಿವೃದ್ಧಿಯೂ ಪರಿಸರಕ್ಕೆ ಮಾರಕವಾಗುತ್ತಿದೆ ಎಂದರು.
    60ರಿಂದ 70 ವರ್ಷಗಳ ಹಿಂದೆ ಕೈಗಾರಿಕೆಗಳು ಇಲ್ಲದಿದ್ದ ಕಾಲದಲ್ಲಿ ಪರಿಸರ ಎಲ್ಲರನ್ನೂ ಸಂತೋಷವಾಗಿ ಇಟ್ಟಿತ್ತು. ಸ್ವಾತಂತ್ರೃ ಬಂದ ಬಳಿಕ ಕೈಗಾರಿಕೆಗಳು ಬೆಳೆಯಲಾರಂಭಿಸಿದವು. ಬಳಿಕ ಜಾಗತೀಕರಣ ತಲೆಎತ್ತಿದ ಬಳಿಕ ಪರಿಸರ ಇನ್ನಷ್ಟು ಕಲುಷಿತಗೊಂಡಿತು. ಪ್ಲಾಸ್ಟಿಕ್ ವಿಷಯ ದೊಡ್ಡ ಸಮಸ್ಯೆಯೇ ಅಲ್ಲ ಎನ್ನುವ ಮನೋಭಾವ ಬಂದು ಬಿಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದರು.
    ಓದು, ಟ್ಯೂಷನ್ ಇದೆ ಎನ್ನುವ ಒತ್ತಡದ ಕಾರಣಕ್ಕೆ ಮಕ್ಕಳು 14ರಿಂದ 15 ವರ್ಷ ಆಗುತ್ತಿದ್ದಂತೆಯೇ ಬೈಕ್, ಸ್ಕೂಟರ್ ಬೇಕು ಎನ್ನುತ್ತಾರೆ. ಬಹುತೇಕರು ಸ್ವಂತ ವಾಹನ ಬಳಕೆ ಮಾಡುತ್ತಿದ್ದಾರೆ. ಇದರಿಂದಲೂ ಪರಿಸರ ಬದಲಾವಣೆಗೆ ಕಾರಣವಾಗಿವೆ. ಹಿಂದೆ ಕಾಲೇಜು, ವಿಶ್ವವಿದ್ಯಾಲಯ ಕ್ಯಾಂಪಸ್‌ಗಳಿಗೆ ನಡೆದೇ ಹೋಗುತ್ತಿದ್ದರು. ಆರೋಗ್ಯ, ಪರಿಸರ ಎಲ್ಲವೂ ಚೆನ್ನಾಗಿತ್ತು. ಆದರೆ ಈಗ ಬೆಂಗಳೂರು ಕಬ್ಬನ್ ಪಾರ್ಕ್‌ನಲ್ಲಿಯೇ ಪರಿಸರವನ್ನು ಬಲಿಕೊಟ್ಟು ಕಟ್ಟಡಗಳು ತಲೆ ಎತ್ತಿವೆ ಎಂದರು.
    ಮೊದಲು ಪರಿಸರ ಎಂದರೆ ವನ್ಯಜೀವಿ, ಕಾಡು ರಕ್ಷಣೆ ಎನ್ನಲಾಗುತ್ತಿತ್ತು. ಹೀಗಾಗಿ ಪರಿಸರದ ಬಗ್ಗೆ ಯಾರೂ ಹೆಚ್ಚಿನ ಆಲೋಚನೆ ಮಾಡುತ್ತಿರಲಿಲ್ಲ. ಈಗ ನಾಲ್ಕೈದು ವರ್ಷಗಳಿಂದ ಕಾಳಜಿ ಹೆಚ್ಚಾದರೂ ಕೇವಲ ಗಿಡ ನೆಟ್ಟರೆ ಪರಿಸರವಾದಿ ಎನಿಸಿಕೊಳ್ಳುವ ಮಟ್ಟಕ್ಕೆ ಬಂದಿದೆ. ಪರಿಸರ ಎಂದರೆ ಮಣ್ಣು, ನೀರು, ಗಾಳಿ, ಪ್ರಾಣಿ, ಪಕ್ಷಿ, ಗುಬ್ಬಚ್ಚಿ, ಪಾತರಗಿತ್ತಿ ಸಂರಕ್ಷಣೆಯೂ ಪರಿಸರ ಸಂರಕ್ಷಣೆಯಾಗಿದೆ ಎಂದು ವ್ಯಾಖ್ಯಾನಿಸಿದರು.
    ಕಾರ್ಖಾನೆ ತ್ಯಾಜ್ಯವನ್ನು ಕೆರೆಗಳಿಗೆ ಬಿಡಬಾರದು ಎನ್ನುವ ಉದ್ಯಮಿಗಳು ಇದ್ದಾರೆ. ಆದರೆ ಹಣ ಹೆಚ್ಚಾಗುತ್ತದೆ ಎಂದು ಕಾರ್ಖಾನೆಯವರು ತ್ಯಾಜ್ಯ ಸಂರಕ್ಷಣೆಗೆ ಕ್ರಮ ವಹಿಸುತ್ತಿಲ್ಲ. ಜನಸಂಖ್ಯೆ ಹೆಚ್ಚಳ, ಅತಿ ಶೀಘ್ರವಾಗಿ ಹಣ ಮಾಡಬೇಕೆಂಬುದು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ ಎಂದರು.
    ಸಿಎಫ್‌ಟಿಆರ್‌ಐ ನಿರ್ದೇಶಕಿ ಶ್ರೀದೇವಿ ಅನ್ನಪೂರ್ಣ ಸಿಂಗ್ ಮಾತನಾಡಿ, ವಾತಾವರಣದಲ್ಲಿ ಕೇವಲ ಶೇ. 1.5 ಡಿಗ್ರಿ ಸೆಂಟಿಗ್ರೇಡ್‌ನಷ್ಟು ಉಷ್ಣಾಂಶ ಏರಿಕೆಯಾದರೂ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಗಂಭೀರ ಪರಿಸ್ಥಿತಿಗೆ ಬಂದಿದ್ದು, ತಾಪಮಾನ ತಗ್ಗಿಸುವ ಸಂಬಂಧ ಚಿಂತನೆ ನಡೆಸಬೇಕಿದೆ. ಇಂತಹ ಪರಿಸ್ಥಿತಿಗೆ ನಾವೇ ಕಾರಣರಾಗುತ್ತಿವೆ ಎಂದು ಹೇಳಿದರು.
    ನಮ್ಮ ಜೀವನ ಶೈಲಿಯಲ್ಲಿ ಮಾಡಿಕೊಂಡಿರುವ ಬದಲಾವಣೆ, ಅತಿಯಾದ ಪ್ಲಾಸ್ಟಿಕ್ ಬಳಕೆ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ಪ್ರತಿ ವರ್ಷ ಸುಮಾರು 400 ದಶಲಕ್ಷ ಪ್ಲಾಸ್ಟಿಕ್ ಉತ್ಪಾದಿಸುತ್ತಿದ್ದು, ಇವುಗಳಲ್ಲಿ ಸುಮಾರು ಅರ್ಧದಷ್ಟು ಒಮ್ಮೆ ಮಾತ್ರ ಬಳಕೆ ಮಾಡಬಹುದಾದ ಪ್ಲಾಸ್ಟಿಕ್ ಆಗಿದೆ. ಕೇವಲ ಶೇ. 10 ರಷ್ಟು ಮಾತ್ರ ಮರುಬಳಕೆಯದ್ದಾಗಿದೆ ಎಂದರು.
    ಪ್ಲಾಸ್ಟಿಕ್ ಹಾವಳಿಯಿಂದಾಗಿ ಒಬ್ಬ ವ್ಯಕ್ತಿ ಜೀವಿತಾವಧಿಯಲ್ಲಿ ಸುಮಾರು 20 ಕೆ.ಜಿ.ಎಷ್ಟು ಪ್ಲಾಸ್ಟಿಕ್ ತಿನ್ನುತ್ತಾನೆ ಎನ್ನುವುದು ದೊಡ್ಡ ಆತಂಕಕಾರಿ ಬೆಳವಣಿಗೆ. ನಮ್ಮ ಆಹಾರ ಅಷ್ಟೇ ಅಲ್ಲದೆ ಜಲಚರ, ಸಮುದ್ರಗಳನ್ನು ಸೇರುತ್ತಿದೆ. ಆಹಾರ ಪ್ಯಾಕೇಜಿಂಗ್ ಉದ್ಯಮವೂ ಪ್ಲಾಸ್ಟಿಕ್ ಬಳಕೆಗೆ ಬಹುದೊಡ್ಡ ಕಾರಣವಾಗಿದೆ. ಇದರಿಂದಾಗಿ ಹಾರ್ಮೋನುಗಳಲ್ಲಿ ವ್ಯತ್ಯಾಸ, ಕ್ಯಾನ್ಸರ್ ಮೊದಲಾದ ಇನ್ನಿತರ ಆರೋಗ್ಯ ಸಮಸ್ಯೆಗಳುಂಟಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದರು.
    ಸಂಸ್ಥೆಯ ಅಧಿಕಾರಿಗಳಾದ ಡಾ.ಕೆ.ಅನಿಲ್‌ಕುಮಾರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts