More

    ಅಕ್ಷರ ಜಾತ್ರೆ ವೇದಿಕೆ ನಿರ್ಮಾಣಕ್ಕೆ ಭೂಮಿಪೂಜೆ

    ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ಜ್ಞಾನಗಂಗೆ ಆವರಣದಲ್ಲಿ ಫೆ.5ರಿಂದ ನಡೆಯಲಿರುವ ಮೂರು ದಿನದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆ, ಸಮಾನಂತರ ವೇದಿಕೆ ಹಾಗೂ ಮಳಿಗೆಗಳ ನಿರ್ಮಾಣ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರಾದ ಡಿಸಿಎಂ ಗೋವಿಂದ ಕಾರಜೋಳ ಮತ್ತು ಕಸಾಪ ಅಧ್ಯಕ್ಷ ಮನು ಬಳಿಗಾರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.
    ಸಮ್ಮೇಳನದ ವೇದಿಕೆ ಸಮಿತಿ ಅಧ್ಯಕ್ಷರಾದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರು ಶಾಸಕರ, ಅಧಿಕಾರಿಗಳ ಸಮ್ಮುಖದಲ್ಲಿ ಪೂಜಾ ವಿಧಿ-ವಿಧಾನ ನಡೆಸಿದರು. ನಂತರ ಎಲ್ಲರೊಂದಿಗೆ ಸೇರಿ ಗುದ್ದಲಿ ಪೂಜೆ ನೆರವೇರಿಸಿದರು. ಭೂಮಿ ಪೂಜೆಯು ಅಭಿಜಿತ್ ಲಗ್ನ ಮುಹೂರ್ತದಲ್ಲಿ ಬೆಳಿಗ್ಗೆ 11.50ರಿಂದ ಮಧ್ಯಾಹ್ನ 12.10 ಗಂಟೆ ವರೆಗೆ ನಡೆಯಿತು. ಎಲ್ಲರು ಕೈಗೆ ಕಂಕಣ ಕಟ್ಟಿಕೊಂಡು ಪೂಜೆ ನರೆವೇರಿಸಿದರು
    ಶಾಸಕರಾದ ಬಿ.ಜಿ.ಪಾಟೀಲ್, ಬಸವರಾಜ ಮತ್ತಿಮೂಡ, ಎಂ.ವೈ. ಪಾಟೀಲ್, ಡಾ.ಅವಿನಾಶ ಜಾಧವ್, ಕನೀಜ್ ಫಾತಿಮಾ ಇಸ್ಲಾಂ, ತಿಪ್ಪಣ್ಣಪ್ಪ ಕಮನಕೂರ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಜಿಪಂ ಉಪಾಧ್ಯಕ್ಷೆ ಶೋಭಾ ಸಿರಸಗಿ, ಜಿಲ್ಲಾಧಿಕಾರಿ ಶರತ್ ಬಿ., ಜಿಪಂ ಸಿಇಒ ಡಾ.ರಾಜಾ ಪಿ., ನಗರ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ, ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ, ಎಂಸಿಎ ಸಲಹೆಗಾರ ಜಗದೀಶ ಮೇಟಿ ಇತರರು ಈ ಘಳಿಗೆಗೆ ಸಾಕ್ಷಿಯಾದರು. ಸಮಾರಂಭದ ಸ್ಥಳದಲ್ಲಿ ಹಾಕಲಾಗಿದ್ದ ರಂಗೋಲಿ ಎಲ್ಲರ ಗಮನ ಸೆಳೆಯಿತು.
    ಗುಲ್ಬರ್ಗ ವಿವಿ ಪರೀಕ್ಷಾ ಭವನ ಎಡಭಾಗದ 35 ಎಕರೆ ಪ್ರದೇಶದಲ್ಲಿ ಸಮ್ಮೇಳನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಭೂಮಿ ಪೂಜೆಯೊಂದಿಗೆ ವೇದಿಕೆ ನಿರ್ಮಿಸುವ ಕೆಲಸ ಅಧಿಕೃತವಾಗಿ ಶುರುವಾಯಿತು. ಕಾರ್ಮಿಕರು ಪೋಲ್ ಹಾಕುವ ಇತರ ಕೆಲಸ ಆರಂಭಿಸಿದರು. ಮಹಾತ್ಮ ಗಾಂಧಿ ಸಭಾಂಗಣ ಮತ್ತು ಅಂಬೇಡ್ಕರ್ ಭವನದಲ್ಲಿ ಸಮನಾಂತರ ಗೋಷ್ಠಿಗಳು ನಡೆಯಲಿವೆ.
    ಮುಖ್ಯ ವೇದಿಕೆಯು ದಕ್ಷಿಣಾಭಿಮುಖ ಆಗಿರಲಿದೆ. ಅದರ ಎಡಭಾಗದಲ್ಲಿ ಪುಸ್ತಕ ಮಳಿಗೆಗಳು, ಬಲ ಭಾಗದಲ್ಲಿ ವಾಣಿಜ್ಯ ಮಳಿಗೆಗಳು ಇರಲಿವೆ. ಮುಖ್ಯ ವೇದಿಕೆಗೆ ಹೊಂದಿಕೊಂಡೇ ಗಣ್ಯರ ವಿಶ್ರಾಂತಿ ಕೊಠಡಿ ಇರಲಿದೆ. ಸುಮಾರು 25 ಸಾವಿರ ಸಾಹಿತ್ಯಾಸಕ್ತರು ಕುಳಿತುಕೊಳ್ಳುವಂತೆ ಆಸನ ವ್ಯವಸ್ಥೆ ಮಾಡಲಾಗುವುದು ಎಂದು ವೇದಿಕೆ ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಶಶಿಕಾಂತ ಕಮಲಾಪುರ ತಿಳಿಸಿದರು.
    ಕುಸನೂರ ರಸ್ತೆಗೆ ಹೊಂದಿಕೊಂಡಿರುವ ವಿವಿ ಸುತ್ತುಗೋಡೆಯನ್ನು ಮೂರು ಕಡೆ ಒಡೆದು ಪ್ರವೇಶಿಸಲು ಅವಕಾಶ ಕಲ್ಪಿಸಲಾಗುತ್ತದೆ. ಮುಖ್ಯ ವೇದಿಕೆ ಎದುರಿನಲ್ಲೇ 40 ಅಡಿ ಉದ್ದದ ಕಾಂಪೌಂಡ್ ಒಡೆದು ಮುಖ್ಯ ದ್ವಾರ ನಿರ್ಮಿಸಲಾಗುತ್ತದೆ. ಅಲ್ಲಿಯೇ ಪೊಲೀಸ್ ಚೌಕಿ, ತಾತ್ಕಾಲಿಕ ಆಸ್ಪತ್ರೆ, ಸೆಕ್ಯೂರಿಟಿ ಸಿಬ್ಬಂದಿ ಮೊದಲಾದ ವ್ಯವಸ್ಥೆ ಮಾಡಲಾಗುತ್ತಿದೆ. ಪಕ್ಕದಲ್ಲಿಯೇ ನೋಂದಣಿ ಕೌಂಟರ್​ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಶಶಿಕಾಂತ ವಿಜಯವಾಣಿಗೆ ತಿಳಿಸಿದರು. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts