More

    ಅಂಧತ್ವ ನಿವಾರಣೆಗೆ ಸಮಾಜ ಕೈ ಜೋಡಿಸಲಿ, ವಿಶ್ವ ದೃಷ್ಟಿ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸಲಹೆ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ನೇತ್ರದಾನ ಮಹಾದಾನ. ಅಂಧರಿಗೆ ದೃಷ್ಟಿ ನೀಡುವ ಮಹಾನ್ ಕಾರ್ಯಕ್ಕೆ ಸಮಾಜ ಕೈ ಜೊಡಿಸಬೇಕು. ಈ ದಿಸೆಯಲ್ಲಿ ಎಂ.ಎಂ. ಜೋಶಿ ಆಸ್ಪತ್ರೆಯ ಸೇವಾ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

    ಇಲ್ಲಿಯ ಎಸ್​ಜಿಎಂ ನೇತ್ರ ಭಂಡಾರ ಹಾಗೂ ಸಂಶೋಧನಾ ಸಂಸ್ಥೆ ಮತ್ತು ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಆಶ್ರಯದಲ್ಲಿ ವಿಶ್ವ ದೃಷ್ಟಿ ದಿನಾಚರಣೆ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಲವಾರು ನೇತ್ರ ಚಿಕಿತ್ಸೆ, ತಪಾಸಣೆ ಶಿಬಿರಗಳನ್ನು ಆಯೋಜಿಸುವ ಮೂಲಕ ಆಸ್ಪತ್ರೆಯು ಉತ್ತಮ ಕೆಲಸ ಮಾಡುತ್ತಿದೆ. ಇದೇ ರೀತಿ ಮಕ್ಕಳಲ್ಲಿನ ಅಂಧತ್ವ ನಿವಾರಣೆಗೆ ಜಿಲ್ಲಾಡಳಿತದ ಸಂಯೋಜನೆಯೊಂದಿಗೆ ಕಾರ್ಯಕ್ರಮ ರೂಪಿಸಿ ಅಂಧತ್ವ ಹೋಗಲಾಡಿಸಲು ಸಹಕರಿಸಬೇಕೆಂದು ಸಲಹೆ ನೀಡಿದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ಎಂ.ಎಂ. ಜೋಶಿ ಸಂಸ್ಥೆಯ ನಿರ್ದೇಶಕ ಡಾ. ಶ್ರೀನಿವಾಸ ಜೋಶಿ, ನಿಮ್ಮ ಕಣ್ಣುಗಳನ್ನು ಪ್ರೀತಿಸಿ ಎಂಬ ಧ್ಯೇಯ ವಾಕ್ಯದಲ್ಲಿಯೇ ದೃಷ್ಟಿಯ ಮಹತ್ವ ವಿವರಿಸಲಾಗಿದೆ. ಇದೇ ರೀತಿ ಬೇರೆಯವರ ಕಣ್ಣುಗಳ ಬಗ್ಗೆ ಜಾಗೃತಿ ವಹಿಸಬೇಕು ಎಂದರು.

    ವಿಶ್ವ ದೃಷ್ಟಿ ದಿನಾಚರಣೆ ಅಡಿ ಮುಂಡಗೋಡ ತಾಲೂಕಿನ ಕಲಗನಗೊಪ್ಪದಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಿ ಅನಗತ್ಯ ಅಂಧತ್ವ ಮುಕ್ತ ಗ್ರಾಮವನ್ನಾಗಿಸಲಾಗಿದೆ ಎಂದು ಘೋಷಿಸಿದ ಡಾ. ಜೋಶಿ ಅವರು, ಮುಂಬರುವ ದಿನಗಳಲ್ಲಿ ಲಕ್ಷೆ್ಮೕಶ್ವರ, ಅಳ್ನಾವರ, ಶಿಗ್ಗಾಂವಿಗಳಲ್ಲಿ ನೂತನ ದೃಷ್ಟಿ ಕೇಂದ್ರಗಳನ್ನು ಪ್ರಾರಂಭಿಸುವುದಾಗಿ ಹೇಳಿದರು.

    ಡಾ. ಕೃಷ್ಣಪ್ರಸಾದ ಮಾತನಾಡಿ, ನೇತ್ರಯಜ್ಞ ಕಾರ್ಯದಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

    ಡಾ. ಪಲ್ಲವಿ, ಆಸ್ಪತ್ರೆ ಸಿಬ್ಬಂದಿ, ಬಾಗಲಕೋಟೆ, ಮುಂಡಗೋಡ, ಹಾನಗಲ್ಲ ಇತರೆಡೆಯಿಂದ ಬಂದಿದ್ದ ನೇತ್ರ ಚಿಕಿತ್ಸೆಯ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ಆಕಾಶ ನರವಟ್ಟೆ ಸ್ವಾಗತಿಸಿದರು. ಡಾ. ಮನೋಹರ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts