ಬೆಂಗಳೂರು: ಇನ್‌ಸ್ಟಾಗ್ರಾಮ್‌ನಲ್ಲಿ ಬಂದ ಲಿಂಕ್‌ನಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಟಿಕೆಟ್ ಖರೀದಿಗೆ ಮುಂದಾದ ಯುವಕ, 5.20 ಲಕ್ಷ ರೂ. ಕಳೆದುಕೊಂಡಿದ್ದಾನೆ.

ಸರ್ಜಾಪುರ ಮುಖ್ಯರಸ್ತೆಯ ಸಾಯಿ ಸಂತೋಷ್ ಮೋಸಕ್ಕೆ ಒಳಗಾದವ. ಈತ ವೈಟ್‌ಫೀಲ್ಡ್ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದು, ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಏ. 24ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಐಪಿಎಲ್ ಕ್ರಿಕೆಟ್ ನೋಡುತ್ತಿದ್ದಾಗ ಆನ್‌ಲೈನ್‌ನಲ್ಲಿ ಟಿಕೆಟ್ ಸಿಗಲಿದೆ ಎಂದು ಜಾಹೀರಾತು ಬಂದಿತ್ತು. ಇದನ್ನು ನೋಡಿ, ಅದರ ಲಿಂಕ್ ಮೇಲೆ ಕ್ಲಿಕ್ ಮಾಡಿ 4 ಟಿಕೆಟ್ ಖರೀದಿ ಮಾಡಿಸಿದ್ದ. ನಂತರ ಏ. 27ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ ಸಾರ್ಥಕ್ ಸಿಂಗ್ ಎಂದು ಪರಿಚಯಿಸಿಕೊಂಡು ಟಿಕೆಟ್‌ನ ಹಣ ಪಾವತಿ ಮಾಡುವಂತೆ ಹೇಳಿದ್ದ. ಮತ್ತೆ ನೀರಜ್ ಮತ್ತು ಸುನೀಲ್ ಎಂಬುವರು ಸಹ ಕರೆ ಮಾಡಿ, ‘ನಿಮಗೆ ಆನ್‌ಲೈನ್‌ನಲ್ಲಿ ಟಿಕೆಟ್ ಕಳುಹಿಸುತ್ತೇವೆ.
ಅದಕ್ಕೆ ಹಣ ಪಾವತಿ ಮಾಡಬೇಕು’ ಎಂದು ಹೇಳಿ ಹಂತಹಂತವಾಗಿ 5.20 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡಿದ್ದರು. ಆದರೆ, ಟಿಕೆಟ್ ಮಾತ್ರ ಕಳುಹಿಸಿಲ್ಲ. ವಾಪಸ್ ಕರೆ ಮಾಡಿ ಕೇಳಿದಾಗ ಸಬೂಬು ಹೇಳಿಕೊಂಡು ಕಾಲ ಮುಂದೂಡಿ ಕೊನೆಗೆ ಸಂಪರ್ಕ ಕಡಿತ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.