ಹೋಟೆಲ್ನಲ್ಲಿ ಸಿಎಂ ಆಡಳಿತಕ್ಕೆ ಕಿಡಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ನಡೆಸಿರುವ ಆಡಳಿತದ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶ್ವೇತಪತ್ರ ಹೊರಡಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ರವಿಕುಮಾರ ಆಗ್ರಹಿಸಿದ್ದಾರೆ.

ಈವರೆಗಿನ ಯಾವೊಬ್ಬ ಸಿಎಂ ವಿಧಾನಸೌಧ ಬಿಟ್ಟು ಹೋಟೆಲ್ಗಳಲ್ಲಿ ಆಡಳಿತ ನಡೆಸಿಲ್ಲ. ಆದರೆ ಕುಮಾರಸ್ವಾಮಿ ಹೊಸ ಪರಂಪರೆ ಹುಟ್ಟು ಹಾಕಿದ್ದಾರೆ. ಸರ್ಕಾರದ ದಾಖಲೆಗಳು ಹೋಟೆಲ್ಗೆ ಹೋಗುತ್ತಿವೆ. ದೊಡ್ಡ ಬಿಜಿನೆಸ್ ನಡೆದಿದ್ದು, ನಾಡಿನ ಜನರಿಗೆ ಸತ್ಯ ಗೊತ್ತಾಗಲು ಶ್ವೇತಪತ್ರ ಹೊರಡಿಸುವಂತೆ ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಕುಮಾರಸ್ವಾಮಿ 48 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುವುದಾಗಿ ಹೇಳಿದ್ದಾರೆ. ಇದಕ್ಕಾಗಿ ಬಜೆಟ್ನಲ್ಲಿ ಕೇವಲ 12 ಸಾವಿರ ಕೋಟಿ ರೂ. ತೆಗೆದಿರಿಸಿದ್ದರೂ ಬಿಡುಗಡೆಯಾಗಿಲ್ಲ. ಸರ್ಕಾರದ ಬಳಿ ಹಣವಿಲ್ಲ. ಸುಖಾಸುಮ್ಮನೆ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡುವುದಾಗಿ ಹೇಳುತ್ತಿದೆ ಎಂದು ಕಿಡಿಕಾರಿದರು.

ರೈತ ವಿರೋಧಿ ನೀತಿ: ಸಾಲ ಮನ್ನಾಕ್ಕಾಗಿ ರೈತರ ಬಳಿಯಿಂದ ದಾಖಲೆಗಳನ್ನು ಕಲೆ ಹಾಕಲಾಗುತ್ತಿದ್ದು, 7.5 ಲಕ್ಷ ರೈತರ ಹೆಸರುಗಳನ್ನು ಸಣ್ಣ ಪುಟ್ಟ ದಾಖಲೆಗಳಿಲ್ಲ ಎಂಬ ನೆಪವೊಡ್ಡಿ ಸೌಲಭ್ಯದಿಂದ ಕೈಬಿಡಲಾಗಿದೆ. ಇದು ರೈತ ವಿರೋಧಿ ನೀತಿ ಅನುಸರಿಸುತ್ತಿರುವುದು ಸ್ಪಷ್ಟಪಡಿಸಿದೆ. ಬೆಳಗಾವಿಯಲ್ಲಿ ಇಡೀ ರಾಜ್ಯಕ್ಕಾಗಿ ತಾಂತ್ರಿಕ ವಿಶ್ವವಿದ್ಯಾಲಯ ಇರುವಾಗ ಬಿಜೆಟ್ನಲ್ಲಿ ಮತ್ತೊಂದು ವಿವಿ ಮಾಡುವುದಾಗಿ ಹೇಳಿದ್ದು ಸರಿಯಲ್ಲ. ದೇವೇಗೌಡರ ಸಂಬಂಧಿಕರನ್ನು ಕುಲಪತಿ ಹುದ್ದೆಗೆ ನೇಮಿಸಬೇಕು ಅಂದುಕೊಂಡಂತಿದೆ. ತಕ್ಷಣವೇ ಈ ಪ್ರಸ್ತಾವನೆ ಕೈಬಿಡಬೇಕು ಎಂದು ಆಗ್ರಹಿಸಿದರು.

ಅರಳುವ ಕಮಲ

ಕಲಬುರಗಿ ಲೋಕಸಭಾ ಮೀಸಲು ಕ್ಷೇತ್ರದಲ್ಲಿ ಕಮಲ ಅರಳುವುದು ಗ್ಯಾರಂಟಿ. ಅಭ್ಯಥರ್ಿ ಯಾರು ಎಂಬುದನ್ನು ಕಾದು ನೋಡಿ. ಅಭ್ಯರ್ಥಿ ಒಳಗಿನವರಾ, ಹೊರಗಿನವರಾ ಎಂದು ಹೇಳಲಾಗದು. ಹೈಕಮಾಂಡ್ ಅಭ್ಯರ್ಥಿ ನಿರ್ಧರಿಸಲಿದ್ದು, ತಾವು ಹೆಚ್ಚೇನೂ ಹೇಳುವುದಿಲ್ಲ ಎಂದರು.

ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್, ಶಾಸಕ ಸುಭಾಷ ಗುತ್ತೇದಾರ್, ಬಿಜೆಪಿ ರಾಜ್ಯ ಸಹ ವಕ್ತಾರ ಶಶೀಲ್ ನಮೋಶಿ, ಪ್ರಮುಖರಾದ ದಯಾಘನ್ ಧಾರವಾಡಕರ್, ರಾಜು ವಾಡೇಕರ್, ವಿಜಯಕುಮಾರ ಹಲಕಟ್ಟಿ, ಸುಭಾಷ ರಾಠೋಡ, ಅರವಿಂದ ನವಲಿ, ಪ್ರವೀಣ ಡಿ.ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ ಇತರರಿದ್ದರು.

ಬಿಜೆಪಿಯ ಯಾವ ಶಾಸಕರೂ ಜೆಡಿಎಸ್, ಕಾಂಗ್ರೆಸ್ ಆಮಿಷಕ್ಕೆ ಬಲಿಯಾಗಲ್ಲ. ಆಳಂದ ಶಾಸಕ ಸುಭಾಷ ಗುತ್ತೇದಾರ್ಗೆ ಕುಮಾರಸ್ವಾಮಿ ಕರೆ ಮಾಡಿ ಮಂತ್ರಿ ಮಾಡುತ್ತೇವೆ, ಜೆಡಿಎಸ್ಗೆ ಬನ್ನಿ ಎಂದು ಹೇಳಿದ್ದರು. ಆದರೆ ಅವರು ನಿರಾಕರಿಸಿದರು. 40 ವರ್ಷದ ರಾಜಕೀಯದಲ್ಲಿ ಯಡಿಯೂರಪ್ಪ ಕೀಳು ರಾಜಕೀಯ ಮಾಡಿಲ್ಲ.
| ಬಸವರಾಜ ಮತ್ತಿಮೂಡ, ಶಾಸಕ, ಕಲಬುರಗಿ ಗ್ರಾಮೀಣ ಕ್ಷೇತ್ರ

Leave a Reply

Your email address will not be published. Required fields are marked *