ಹೋ… ಹೋ ಸ್ವಲ್ಪ ನಿಲ್ಲಸ್ರಿಪಾ, ದಾಟತೀವಿ…

ಬಸವರಾಜ ಇದ್ಲಿ ಹುಬ್ಬಳ್ಳಿ

ತರಗಾ ಬರಗಾ ಗಾಡಿ ಓಡಾಡತಾವು, ನಾವ್ ಹೆಂಗ್ ರಸ್ತೆ ದಾಟುದು, ಓ ಯಣ್ಣಾ, ಯಪ್ಪಾ ಒಂದಿಷ್ಟು ನಿಲ್ಲಸಪಾ, ದಾಟತೀವಿ… ಹೀಗೆಂದು ವೃದ್ಧರು, ಮಹಿಳೆಯರು, ಮಕ್ಕಳು ವಾಹನ ಸವಾರರಿಗೆ ಕೈ ಮಾಡಿ, ಬೇಡಿಕೊಳ್ಳುವ ಪರಿ ನೋಡಬೇಕೆಂದರೆ ಇಲ್ಲಿಯ ಹಳೇ ಬಸ್ ನಿಲ್ದಾಣ ಎದುರು ಕೆಲ ನಿಮಿಷ ನಿಂತರೆ ಸಾಕು ಅವೈಜ್ಞಾನಿಕ ಯೋಜನೆಗಳ ವಾಸ್ತವ ತಿಳಿಯುತ್ತದೆ.

ಇದು ಹಳೇ ಬಸ್ ನಿಲ್ದಾಣ ಬಳಿ ವಿವೇಚನೆ ಇಲ್ಲದೇ ಅಧಿಕಾರಿಗಳು ತಂದಿಟ್ಟ ಅವ್ಯವಸ್ಥೆ. ವಾಯವ್ಯ ಸಾರಿಗೆ ಸಂಸ್ಥೆ, ಬಿಆರ್​ಟಿಎಸ್ ಕಂಪನಿ, ರಸ್ತೆ ಅಭಿವೃದ್ಧಿ ನಿಗಮ, ಮಹಾನಗರ ಪಾಲಿಕೆ ಹೀಗೆ ಸಾಲು ಸಾಲು ಸರ್ಕಾರಿ ಇಲಾಖೆಯ ಅಧಿಕಾರಿಗಳು ಜನರ ಕಾಳಜಿ ಮರೆತು ರೂಪಿಸಿರುವ ಯೋಜನೆಗಳು ಪಾದಚಾರಿಗಳನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ.

ಹಳೇ ಬಸ್ ನಿಲ್ದಾಣ ಎದುರು ನಿತ್ಯ ಸಾವಿರಾರು ಜನ ಆ ಕಡೆಯಿಂದ ಈ ಕಡೆ ದಾಟುತ್ತಾರೆ. ಆದರೆ, ರಸ್ತೆ ದಾಟಲು ಯಾವುದೇ ವ್ಯವಸ್ಥೆ ಇಲ್ಲಿಲ್ಲ. ಹಾಗಾಗಿ ಬಿಟ್ಟೂ ಬಿಡದೇ ಬರುವ ವಾಹನಗಳ ಮಧ್ಯೆ ತೂರಿಕೊಂಡು ಪಾದಚಾರಿಗಳು ತಾವೇ ವಾಹನಗಳಿಗೆ ನಿಲ್ಲಿಸಿ… ಎಂದು ಕೈ ಮಾಡುತ್ತ ದಾಟಿಕೊಳ್ಳಬೇಕು.

ಹೆಚ್ಚು ಕಡಿಮೆಯಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಆದರೆ, ರಸ್ತೆ ದಾಟಲೇಬೇಕಲ್ಲವೇ? ಹಾಗಾಗಿ ಪ್ರತಿಯೊಬ್ಬರೂ ರಸ್ತೆ ದಾಟುವ ಧಾವಂತದಲ್ಲಿ ಯಾವುದೇ ವಾಹನಗಳನ್ನು ಲೆಕ್ಕಿಸದೇ ಇಕ್ಕಟ್ಟು ರಸ್ತೆಗಳನ್ನು ಅಪಾಯದಡಿಯಲ್ಲಿ ದಾಟುತ್ತಿದ್ದಾರೆ.

ವಾಹನಗಳ ವೇಗದ ಬಗ್ಗೆ ಗೊತ್ತಿರುವ ಕೆಲವರು ಎರಡೂ ಕಡೆಯಿಂದ ಬರುವ ವಾಹನ ಚಾಲಕರಿಗೆ ಮೊದಲು ಕೈಗಳ ಮೂಲಕ ಸಂಜ್ಞೆ ಮಾಡುತ್ತ ದಾಟುತ್ತಾರೆ. ಅವರನ್ನೇ ಕೆಲವರು ಅನುಸರಿಸಿದರೆ, ಇನ್ನೂ ಕೆಲವರು ಯಾವುದೂ ಗೊತ್ತಾಗದೇ ರಸ್ತೆ ದಾಟದೇ ಅಲ್ಲಿಯೇ ಕುಳಿತ ಪ್ರಸಂಗಗಳೂ ನಡೆಯುತ್ತಿವೆ.

ಇಲ್ಲಿ ಮೊದಲಿದ್ದ ಪಾದಚಾರಿ ಮೇಲ್ಸೇತುವೆ ಕೆಡವಿ ಹಾಕಲಾಯಿತು. ಅಷ್ಟಕ್ಕೂ ಅದನ್ನು ಜನ ಬಳಸುತ್ತಿರಲಿಲ್ಲ. ಭಿಕ್ಷುಕರು, ನಿರ್ಗತಿಕರ ತಾಣವಾಗಿದ್ದ ಮೇಲ್ಸೇತುವೆ ಕೆಡವಿದ್ದೇ ಒಳ್ಳೆಯದು ಎಂದು ಜನ ಆಗ ಆಡಿಕೊಂಡರು.

ಆದರೆ, ಈಗ ಮೇಲ್ಸೇತುವೆಯೂ ಇಲ್ಲ, ಅಂಡರ್ ಪಾಸ್ ನಿರ್ವಣವೂ ಆಗುತ್ತಿಲ್ಲ. ಇದ್ದ ಎಲ್ಲ ವ್ಯವಸ್ಥೆಯನ್ನು ಹಾಳು ಮಾಡಿದ ಬಿಆರ್​ಟಿಎಸ್ ಅಧಿಕಾರಿಗಳಿಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ.

ಜನರಿಗೆ ಒಳ್ಳೆಯದು ಮಾಡುವುದೆಂದರೆ ಅಧಿಕಾರಿಗಳು ಬರೀ ವೆಚ್ಚದಾಯಕ ಯೋಜನೆಗಳ ಬಗ್ಗೆಯೇ ಯೋಚಿಸುತ್ತಾರೆ. ಮತ್ತೆ ಇಲ್ಲಿ ಕೊಟ್ಯಾಂತರ ರೂ. ವೆಚ್ಚದ ಫುಟ್ ಓವರ್ ಬ್ರಿಜ್ (ಎಫ್​ಓಬಿ) ನಿರ್ವಿುಸಿದರೂ ಅಚ್ಚರಿ ಪಡಬೇಕಿಲ್ಲ. ಆದರೆ, ಸುಲಭವಾಗಿ ಎಲ್ಲರೂ ದಾಟಬಲ್ಲ, ಕಡಿಮೆ ಖರ್ಚಿನಲ್ಲಿ ಮಾಡಬಹುದಾದ ಅಂಡರ್ ಪಾಸ್ ಬಗ್ಗೆ ಅವರು ಚಿಂತಿಸಲಿಕ್ಕಿಲ್ಲ. ಅಂಡರ್​ಪಾಸ್ ಮಾಡಿದರೆ ಎಲ್ಲರೂ ನೆಮ್ಮದಿಯಿಂದ ಓಡಾಡಬಹುದು.

ಹಳೇ ಬಸ್ ನಿಲ್ದಾಣ ಪ್ರವೇಶ ದ್ವಾರದ ಬಳಿ ಒಂದು ಹೊರ ಹೋಗುವ ಮಾರ್ಗದ ಬಳಿ ಇನ್ನೊಂದು ಜೊತೆಗೆ ಚನ್ನಮ್ಮ ವೃತ್ತದಲ್ಲೂ ಒಂದೆರಡು ಕಡೆ ಅಂಡರ್ ಪಾಸ್ ಮಾಡಿದರೆ ಇದೀಗ ಎದ್ದು ಬಿದ್ದು ರಸ್ತೆ ದಾಟುವ ಪಾದಚಾರಿಗಳು ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ.

ರಸ್ತೆ ದಾಟಾಕ್ ಏನಾದ್ರೂ ವ್ಯವಸ್ಥೆ ಮಾಡಬೇಕ್ರಿ, ಇಲ್ಲಾಂದ್ರ ಗಾಡಿಗೋಳ್ ನಡುವೆ ಸಿಕ್ಕೊಂಡು ಒದ್ದಾಡಬೇಕಾಕ್ಕೇತಿ, ಹಳ್ಳಿಯಿಂದ ಬರೂ ಮಂದಿ ಬಸ್ ಸ್ಟಾ್ಯಂಡ್​ಗೆ ಹೋಗೂದೇ ಕಠಿಣ ಆಗೇತಿ. — ಮಲ್ಲೇಶಪ್ಪ ಬ್ಯಾಹಟ್ಟಿ, ಹೆಬಸೂರ ಗ್ರಾಮಸ್ಥ

Leave a Reply

Your email address will not be published. Required fields are marked *