ಹೋರಾಟಕ್ಕೆ ತಕ್ಕ ಫಲಿತಾಂಶ

ಕೋಲಾರ: ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಬಲಪಡಿಸಲು ಕಳೆದ ಎಪ್ಪತ್ತೆಂಟು ವರ್ಷಗಳಿಂದ ಬಿಜೆಪಿ ಕಾರ್ಯಕರ್ತರು ನಡೆಸಿರುವ ಹೋರಾಟಕ್ಕೆ ಮೇ 23ರಂದು ಜಯ ಸಿಗಲಿದೆ ಎಂದು ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ತಿಳಿಸಿದರು.

ನಗರದ ಶ್ರೀ ನಾರಾಯಣಿ ಸಭಾಭವನದಲ್ಲಿ ಸೋಮವಾರ ಮತ ಎಣಿಕೆ ಏಜೆಂಟರ ಕಾರ್ಯಾಗಾರದಲ್ಲಿ ಮಾತನಾಡಿ, ಮತದಾನೋತ್ತರ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 22ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿವೆ ಮಾಧ್ಯಮಗಳು ಸುಳಿವು ನೀಡಿದ್ದು, ಕೋಲಾರದಲ್ಲೂ ಬಿಜೆಪಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವುದು ಖಚಿತ ಎಂದರು.

ಈ ಬಾರಿ ಕ್ಷೇತ್ರದಲ್ಲಿ ಬದಲಾವಣೆಗಾಗಿ ನನ್ನ ಪರ ಕಾಂಗ್ರೆಸ್, ಜೆಡಿಎಸ್ ಸೇರಿ ವಿವಿಧ ಪಕ್ಷಗಳ ಮುಖಂಡರು ಕೆಲಸ ಮಾಡಿದ್ದಾರೆ. 28 ವರ್ಷ ಆಡಳಿತ ನಡೆಸಿದ ಕೆ.ಎಚ್. ಮುನಿಯಪ್ಪ ಅವರನ್ನು ಮನೆಗೆ ಕಳುಹಿಸಲು ಮತದಾರರು ಬಿಜೆಪಿ ಪರ ಮತ ಹಾಕಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಇದಕ್ಕೆ ಕೋಲಾರ ಕ್ಷೇತ್ರದಿಂದಲೂ ಸಂಸದರನ್ನು ಆಯ್ಕೆ ಮಾಡಿ ಕಳುಹಿಸುವ ಕನಸು ನನಸಾಗುವ ಕಾಲ ಬಂದಿದೆ. ಸಣ್ಣಪುಟ್ಟ ಅಸಮಾಧಾನ, ಕಷ್ಟ ಸಹಿಸಿಕೊಂಡು ಕೆಲಸ ಮಾಡಿದ್ದೀರಿ. ಮೇ 23ರಂದು ವಿಜಯೋತ್ಸಚ ಆಚರಿಸಲು ಎಲ್ಲರೂ ಕಾತುರರಾಗಿರಿ ಎಂದರು.

ಕ್ಷೇತ್ರದ 8 ವಿಧಾನಸಭೆ ಕ್ಷೇತ್ರಗಳಲ್ಲಿ ಮತ ಎಣಿಕೆ ಏಜೆಂಟರಾಗಿ ನೇಮಕಗೊಂಡಿರುವವರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸ್ವಲ್ಪ ಯಾಮಾರಿದರೂ ಎದುರಾಳಿ ಅಭ್ಯರ್ಥಿ ಕಡೆಯವರಿಂದ ಮೋಸ ಹೋಗುವ ಆತಂಕ ಇದೆ ಎಂದು ಎಚ್ಚರಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಪಿ. ವೆಂಕಟಮುನಿಯಪ್ಪ ಮಾತನಾಡಿ, ಮತ ಎಣಿಕೆ ಏಜೆಂಟರಾಗಿ ನೇಮಕಗೊಂಡಿರುವ ಎಲ್ಲರೂ ಸಮಯ ಪಾಲನೆ ಮಾಡಬೇಕು. ಬೆಳಗ್ಗೆ 6.30ರೊಳಗೆ ಎಣಿಕಾ ಕೇಂದ್ರಕ್ಕೆ ಪ್ರವೇಶ ಮಾಡಿ ಮತ ಎಣಿಕೆ ಮುಗಿಯುವವರೆಗೂ ಸಂಯಮದಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.

ಲೋಕಸಭಾ ಕ್ಷೇತ್ರದ ಪ್ರಭಾರಿ ಪಾವಗಡ ಕೃಷ್ಣಾರೆಡ್ಡಿ, ಕೆ.ಕೃಷ್ಣಾರೆಡ್ಡಿ, ಮಾಜಿ ಶಾಸಕರಾದ ವೈ. ಸಂಪಂಗಿ, ಎ.ನಾಗರಾಜು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಡಿ. ರಾಮಚಂದ್ರ, ವಾಸುದೇವ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ್, ನಗರ ಘಟಕ ಅಧ್ಯಕ್ಷ ಮಾಗೇರಿ ನಾರಾಯಣಸ್ವಾಮಿ, ಮುಖಂಡ ಎಸ್.ಎಲ್.ಎನ್.ಮಂಜುನಾಥ್ ಇತರರು ಉಪಸ್ಥಿತರಿದ್ದರು.

ತೀರ್ಮಾನ ವರಿಷ್ಠರಿಗೆ ಬಿಟ್ಟಿದ್ದು: ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯಶೆಟ್ಟಿ ಬಿಜೆಪಿಯಲ್ಲಿ ಸಾಕಷ್ಟು ಅಧಿಕಾರ ಅನುಭವಿಸಿ ಪಕ್ಷದಿಂದ ದೂರ ಉಳಿದಿದ್ದ ಸಂದರ್ಭದಲ್ಲಿ ಏನೇನು ಮಾಡಿದ್ದಾರೆಂಬುದು ಜನರಿಗೆ ಗೊತ್ತಿರುವುದರಿಂದ ಜಿಲ್ಲಾಧ್ಯಕ್ಷರ ವಿರುದ್ಧ ನೀಡಿರುವ ಹೇಳಿಕೆಗೆ ಪ್ರಕ್ರಿಯಿಸುವುದಿಲ್ಲ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಯಲ್ಲಿ ಅವರು ಸಕ್ರಿಯರಾಗಿ ತೊಡಗಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದರು. ಮಾಜಿ ಶಾಸಕ ಮಂಜುನಾಥಗೌಡ ಲೋಕಸಭೆ ಚುನಾವಣೆಯಲ್ಲಿ ಸಹಕಾರ ನೀಡಿದ್ದಾರೆ. ಅವರನ್ನು ಬಿಜೆಪಿ ಸೇರ್ಪಡೆ ಮಾಡಿಕೊಳ್ಳುವ ವಿಚಾರ ವರಿಷ್ಠರ ತೀರ್ವನಕ್ಕೆ ಬಿಟ್ಟಿದ್ದು ಎಂದು ಮುನಿಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Leave a Reply

Your email address will not be published. Required fields are marked *