Thursday, 15th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ಹೊಸ ವರ್ಷದ ಸಂಭ್ರಮದಲ್ಲಿ ಆತನನ್ನು ಮರೆಯದಿರೋಣ..

Saturday, 06.01.2018, 3:05 AM       No Comments

ಇವತ್ತು ಏನಾಗಿದೆಯೆಂದರೆ, ಯಾವ ಸಾರ್ವಜನಿಕ ಕಾರ್ಯಕ್ರಮಕ್ಕೂ ಪೊಲೀಸರ ಭದ್ರತೆ ಬೇಕೇ ಬೇಕು ಎಂಬಂತಾಗಿದೆ. ಭಯೋತ್ಪಾದಕರ ಬೆದರಿಕೆಯಂತೂ ಸರಿಯೇ. ಆದರೆ ಹೊಸ ವರ್ಷದಂತಹ ಆಚರಣೆಗೂ ಸಾವಿರಾರು ಪೊಲೀಸರು ಬೆನ್ನಿಗೇ ಇರಬೇಕೆನ್ನುವ ಪರಿಸ್ಥಿತಿ ಸಾಮಾಜಿಕ ಭಯದ ಸೂಚನೆಯಲ್ಲವೆ?

ಲ್ಲಿ ರಸ್ತೆಗಳು ರಂಗೇರಿದ್ದವು. ರಾತ್ರಿಯೇ ಹಗಲಾಗಿತ್ತು. ಯಾವ ಕಟ್ಟಡ ನೋಡಿದರೂ ವಿದ್ಯುತ್ ದೀಪಾಲಂಕಾರದ ಮೆರುಗು. ಅಂದಾಜು ಒಂದು ಲಕ್ಷ ಜನ ಸೇರಿದ್ದರು. ಮಕ್ಕಳು, ಮಹಿಳೆಯರು, ಯುವಜನರು, ಹಿರಿಯರು ಹೀಗೆ ಎಲ್ಲ ವಯೋಮಾನವರು ಖುಷಿಯನ್ನೇ ಆವಾಹಿಸಿಕೊಂಡಂತೆ ಕಾಣುತ್ತಿದ್ದರು. ಎಲ್ಲಿ ನೋಡಿದರೂ ಜನ. ಇಷ್ಟೇ ಅಲ್ಲ, ಜನರ ಚಲನವಲನ ಗಮನಿಸಲು 300 ಸಿಸಿಟಿವಿ ಕ್ಯಾಮರಾಗಳು ಕಣ್ಣಿಟ್ಟುಕೊಂಡು ಕಾಯುತ್ತಿದ್ದವು! ಇಷ್ಟೆಲ್ಲ ಇದ್ದ ಮೇಲೆ ಪೊಲೀಸರು ಇಲ್ಲದಿದ್ದರೆ ಆದೀತೆ? ಅವರ ಸಂಖ್ಯೆ ಎಷ್ಟಿರಬಹುದು? ಸುಮಾರು 5 ಸಾವಿರ!

ಇದು ಡಿಸೆಂಬರ್ 31ರ ರಾತ್ರಿ ಬೆಂಗಳೂರಿನ ಹೃದಯಭಾಗಗಳಾದ ಎಂಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಗಳಲ್ಲಿ ಕಂಡುಬಂದ ಚಿತ್ರಣ. ಹೊಸ ವರ್ಷದ ಸ್ವಾಗತಕ್ಕೆಂದು ಇಷ್ಟೆಲ್ಲ ಬಗೆಯ ಸಡಗರ ನೆಲೆಸಿತ್ತಲ್ಲಿ. ಆ ದಿನ ಬಾರ್ ಮತ್ತು ರೆಸ್ಟೊರೆಂಟ್​ಗಳಲ್ಲಿ ಆದ ವ್ಯಾಪಾರ ಎಷ್ಟೆಂದು ಇನ್ನೂ ಲೆಕ್ಕ ಆಗಿದೆಯೋ ಇಲ್ಲವೋ! ಬೆಂಗಳೂರು ಪೊಲೀಸರಂತೂ ಅನೇಕ ದಿನಗಳ ಹಿಂದೆಯೇ ಈ ಬಗ್ಗೆ ತಲೆಕೆಡಿಸಿಕೊಂಡಿದ್ದರು. ಹೊಸ ವರ್ಷದ ಆಚರಣೆ ಸುಸೂತ್ರವಾಗಿ ಸಾಗಿದರೆ ಸಾಕಪ್ಪಾ ಎಂದು ಎಷ್ಟು ದೇವರಲ್ಲಿ ಹರಕೆ ಹೊತ್ತಿದ್ದರೋ! ಇದಕ್ಕೂ ಕಾರಣವಿದೆ. ಕಳೆದ ವರ್ಷ ಹೊಸ ವರ್ಷಾಚರಣೆ ವೇಳೆ ಹೆಣ್ಣುಮಕ್ಕಳ ಜತೆ ಅಸಭ್ಯವಾಗಿ ವರ್ತಿಸಿದ ಹಲವು ಘಟನೆಗಳು ನಡೆದು, ಪೊಲೀಸ್ ಇಲಾಖೆ ಭಾರಿ ಟೀಕೆಗಳನ್ನು ಎದುರಿಸುವಂತಾಗಿತ್ತು. ಈ ವರ್ಷ ಹೀಗಾಗದಂತೆ ನೋಡಿಕೊಳ್ಳುವ ಸಲುವಾಗಿ ಪೊಲೀಸರು ಒಂದು ತೂಕ ಜಾಸ್ತಿಯೇ ಸಜ್ಜಾಗಿದ್ದರು. ಖುದ್ದು ಗೃಹ ಸಚಿವರು ಎಂಜಿ ರಸ್ತೆಗೆ ತೆರಳಿ ಭದ್ರತಾ ಕ್ರಮಗಳ ಪರಿಶೀಲನೆ ನಡೆಸಿದರು. ಬೆಂಗಳೂರು ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಅಲ್ಲಿಯೇ ಮೊಕ್ಕಾಂ ಹೂಡಿ ಭದ್ರತಾ ಕ್ರಮಗಳ ಮೇಲ್ವಿಚಾರಣೆ ನಡೆಸಿದರು. ಡಿ.31ಕ್ಕೆ ಒಂದು ದಿನ ಮೊದಲು ಪೊಲೀಸ್ ತಂಡಗಳು ನಗರದ ಹಲವೆಡೆ ಪಥಸಂಚಲನ ನಡೆಸಿ, ‘ನಾವು ಸಂಪೂರ್ಣ ಸಜ್ಜಾಗಿದ್ದೇವೆ. ಯಾವ ಕಾರಣಕ್ಕೂ ಹೆದರುವ ಅಗತ್ಯವಿಲ್ಲ’ ಎಂದು ಜನರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡಿದರು. ಹೊಸ ವರ್ಷ ಬರಮಾಡಿಕೊಳ್ಳುವ ಸಂಭ್ರಮದ ನಡುವೆ ಮಹಿಳೆಯರಿಗೆ ತೊಂದರೆಯಾಗಬಾರದೆಂದು, ಕಿಡಿಗೇಡಿಗಳ ಪತ್ತೆಗಾಗಿಯೇ ವಿಶೇಷ ತಂಡಗಳನ್ನು ರಚಿಸಿಕೊಂಡಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂದರೂ ಇಷ್ಟೆಲ್ಲ ಭದ್ರತೆ ಬೇಕಾಗುತ್ತದೆಯೋ ಇಲ್ಲವೊ! ಹಾಗಂತ ಪೊಲೀಸರೂ ಚಾನ್ಸ್ ತೆಗೆದುಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಕಳೆದ ವರ್ಷದ ಕಹಿ ಅನುಭವ ಕಾಡುವುದರ ಜತೆಗೆ, ಈ ಸಲ ಹೊಸ ವರ್ಷಾಚರಣೆ ಪ್ರಕರಣ ಹೈಕೋರ್ಟ್ ಮೆಟ್ಟಿಲನ್ನೂ ಏರಿತ್ತು. ಈ ನಡುವೆ, ಮಾದಕ ನಟಿ ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಪೊಲೀಸರು ಅವಕಾಶ ಕೊಡಲಿಲ್ಲ. ಅಂತೂ ಕೊನೆಗೆ ವಿಶೇಷ ತೊಂದರೆ ಏನೂ ಇಲ್ಲದೆ ಡಿಸೆಂಬರ್ 31 ಮಗುಚಿದಾಗ ಹೆಚ್ಚು ನಿರಾಳರಾದವರು ಪೊಲೀಸರೇ. ಅಷ್ಟೇ ಅಲ್ಲ, ಈ ಸಂದರ್ಭದಲ್ಲಿ ಕೆಲ ವಿನೂತನ ಹೆಜ್ಜೆಗಳನ್ನೂ ಇರಿಸಿದರು. ಕಳವಾದ ಚಿನ್ನದ ಸರಗಳನ್ನು ರಾತ್ರೋರಾತ್ರಿ ವಾರಸುದಾರರಿಗೆ ತಲುಪಿಸಿದರು; ಹೊಸ ವರ್ಷದ ಪಾರ್ಟಿಯಲ್ಲಿ ತೇಲಾಡಿ ಮನೆಸೇರಲಾಗದ ಕೆಲವರನ್ನು ತಮ್ಮ ವಾಹನಗಳಲ್ಲಿಯೇ ಮನೆಗೆ ತಲುಪಿಸಿದರು. ಇಷ್ಟೆಲ್ಲ ಕಾಳಜಿ, ಭದ್ರತೆ ಹೊರತಾಗಿಯೂ ಕುಡಿದ ಅಮಲಿನಲ್ಲಿನ ಗಲಾಟೆಗಳಲ್ಲಿ ನಾಲ್ವರು ಪ್ರಾಣತೆತ್ತರು.

ಹಾಗೇ ಸುಮ್ಮನೆ ಆಲೋಚಿಸೋಣ. ಅಷ್ಟಕ್ಕೂ ನಡೆದಿದ್ದು ಏನು? ಹೊಸ ವರ್ಷಾಚರಣೆಯನ್ನು ಸ್ವಾಗತಿಸಲು ಸೇರಿದ್ದ ಜನಸಮೂಹ. ಒಂಟಿಯಾಗಿ, ಜಂಟಿಯಾಗಿ, ಕುಟುಂಬಸಮೇತರಾಗಿ ಅಲ್ಲಿ ಬಂದವರಿದ್ದರು. ಹಾಗಾದರೆ ಈ ಪಾಟಿ ಬಂದೋಬಸ್ತು ಯಾಕೆ? ಅವರೇನು ವಿದೇಶಗಳಿಂದ ಬಂದವರಾ? ಆ ಸಮಯದಲ್ಲಿ ಕೆಲ ವಿದೇಶಿಗರು ಅಲ್ಲಿ ಇದ್ದಿರಬಹುದಷ್ಟೆ. ಹಾಗಿದ್ದರೂ, ಕೆಲವು ತಾಸಿನಲ್ಲಿ ಮುಗಿದುಹೋಗಬಹುದಾದ ಒಂದು ಸಂಭ್ರಮಾಚರಣೆಗೆ ಇಷ್ಟೆಲ್ಲ ಭದ್ರತಾ ಕ್ರಮಗಳು ಬೇಕೆ? ನಮ್ಮವರ ಮೇಲೇ ಅನುಮಾನ, ಯಾರಾದರೂ ಏನಾದರೂ ಮಾಡಿಯಾರೆಂಬ ಸಂದೇಹ. ನಮ್ಮ ಹೆಣ್ಮಕ್ಕಳು ಎಲ್ಲಿ, ಯಾವ ಸಂದರ್ಭದಲ್ಲಿ ಬೇಕಾದರೂ ಅಪಾಯಕ್ಕೊಳಗಾಗಬಹುದೆಂಬ ಭಯ. ಇಲ್ಲಿ ಬೆಂಗಳೂರು ಒಂದು ಪ್ರಾತಿನಿಧಿಕ ಉದಾಹರಣೆ. ಇತರ ನಗರಗಳಲ್ಲಿ ಈ ಪ್ರಮಾಣದಲ್ಲಿ ವ್ಯತ್ಯಾಸ ಇರಬಹುದಷ್ಟೆ. ‘ಯಾವಾಗ ನಡುರಾತ್ರಿಯಲ್ಲೂ ಮಹಿಳೆಯರು ಏಕಾಂಗಿಯಾಗಿ ಸಂಚರಿಸುವ ದಿನ ಬರುತ್ತದೋ ಅಂದೇ ನಿಜವಾದ ಸ್ವಾತಂತ್ರ್ಯ’ ಎಂಬ ಮಾತಿಗೆ ಏನರ್ಥ ಹಾಗಾದರೆ?

ಅಸಲಿಗೆ ಕೆಲವರು ಜನವರಿ 1 ಹೊಸ ವರ್ಷದ ಆರಂಭ ಎಂಬುದನ್ನೇ ಒಪ್ಪುವುದಿಲ್ಲ. ನಮ್ಮ ಭಾರತೀಯ ಪರಂಪರೆ ಪ್ರಕಾರ, ಯುಗಾದಿ ನಮಗೆ ನಿಜವಾದ ಹೊಸ ವರ್ಷದ ನಾಂದಿ ಎಂಬುದು ಇವರ ವಾದ. ಇದರಲ್ಲಿ ನಿಜವಿದ್ದರೂ, ಡಿಸೆಂಬರ್ 31ರ ರಾತ್ರಿಯನ್ನು ಹೊಸ ವರ್ಷದ ಆಗಮನದ ರಾತ್ರಿಯಾಗಿ ಸಂಭ್ರಮಿಸುವ ರೂಢಿ ನಡೆದುಕೊಂಡು ಬಂದಿದೆ. ಹೀಗಾಗಿ, ನಾವು ಆ ಬಗ್ಗೆ ಹೆಚ್ಚು ರ್ಚಚಿಸದೆ, ಸಂಭ್ರಮ ಸಡಗರದಲ್ಲೂ ಏಕೆ ಈ ಸಂದೇಹ, ಭದ್ರತೆಯ ಭಯ ಕಾಡುತ್ತದೆ? ನಮ್ಮವರ ಮೇಲೇ ಏಕೆ ಸಿಸಿಟಿವಿಯಂತಹ ನಿಗಾ ವ್ಯವಸ್ಥೆ ಇಡಬೇಕಾಗುತ್ತದೆ ಎಂಬುದರತ್ತ ಗಮನ ಹರಿಸುವುದು ಸೂಕ್ತ ಎನಿಸುತ್ತದೆ.

ಈಚಿನ ವರ್ಷಗಳಲ್ಲಿ ಅದುಇದು ಎಂದಿಲ್ಲ, ಯಾವ ಸಾರ್ವಜನಿಕ ಕಾರ್ಯಕ್ರಮವಾದರೂ ಭದ್ರತೆಯೇ ದೊಡ್ಡ ವಿಷಯವಾಗುತ್ತದೆ. ಕ್ರಿಕೆಟ್ ಮ್ಯಾಚ್ ಇರಲಿ, ಹಬ್ಬಹರಿದಿನವಿರಲಿ, ಮೆರವಣಿಗೆಯಿರಲಿ… ಎಲ್ಲೆಲ್ಲೂ ಪೊಲೀಸರ ಹಾಜರಿ ಕಡ್ಡಾಯ. ಇದಕ್ಕೆ ಪ್ರಮುಖ ಕಾರಣ ಭಯೋತ್ಪಾದಕರ ಭಯದ ಜತೆಗೆ, ಕಾನೂನು ಸುವ್ಯವಸ್ಥೆಗೆ ತೊಂದರೆಯಾಗಬಹುದು ಎಂಬ ಶಂಕೆ.

ಅಯ್ಯೋ, ಇದೊಳ್ಳೆ ಕಥೆಯಾಯ್ತಲ್ಲ, ನಮ್ಮ ಜನರು ಹೊಸ ವರ್ಷದಂತಹ ಆಚರಣೆಗಳನ್ನು ಎಂಜಾಯ್ ಮಾಡಬಾರದಾ? ಎಂದು ಕೆಲವರು ಕೇಳಿಯಾರು. ಎಂಜಾಯ್ ಮಾಡಲಿ ತಪ್ಪೇನಿಲ್ಲ. ಆದರೆ ಎಲ್ಲವೂ ಮಿತಿಯಲ್ಲಿದ್ದರೆ ಚೆನ್ನ ಅಷ್ಟೆ.

ಹಾಗಂತ ಹೊಸ ವರ್ಷದಂಥ ಆಚರಣೆಗಳು ಮಾತ್ರ ಲೈಂಗಿಕ ಕಿರುಕುಳ, ಕಳ್ಳತನ, ಕಿಡಿಗೇಡಿ ಇತ್ಯಾದಿ ಕೃತ್ಯಗಳಿಗೆ ಆಸ್ಪದ ಕಲ್ಪಿಸುತ್ತವೆ ಎಂದೇನಿಲ್ಲ. ಅಪರಾಧಗಳಿಗೆ ಕಾಲ, ದೇಶಗಳ ಹಂಗಿಲ್ಲವಲ್ಲ. ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗ (ಎನ್​ಸಿಆರ್​ಬಿ) ಬಿಡುಗಡೆ ಮಾಡಿದ ಅಂಕಿಅಂಶಗಳು ಈ ಮಾತಿಗೆ ಪುಷ್ಟಿ ಒದಗಿಸುತ್ತವೆ. 2015ಕ್ಕೆ ಹೋಲಿಸಿದರೆ 2016ರಲ್ಲಿ ಮಹಿಳೆಯರ ಮೇಲಿನ ಅಪರಾಧಗಳು ಶೇ.2.6ರಷ್ಟು ಜಾಸ್ತಿಯಾಗಿದೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವಿದೆ. ಮಹಿಳಾ ದೌರ್ಜನ್ಯದ ಒಟ್ಟು ಪ್ರಕರಣಗಳಲ್ಲಿ ಶೇ.32ರಷ್ಟು ಪತಿ ಹಾಗೂ ಆತನ ಮನೆಯವರಿಂದಲೇ ನಡೆಯುತ್ತವೆ ಎಂಬುದು ಆಘಾತಕಾರಿ ಅಂಶವಲ್ಲವೆ? ಇನ್ನು 2017ರಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಶೇ. 12ರಷ್ಟು ಏರಿಕೆಯಾಗಿದೆ. ಬಿಗಿಗೊಂಡ ಕಾನೂನುಗಳು, ಹೆಚ್ಚಿದ ಭದ್ರತಾ ಕ್ರಮಗಳು, ಜನರಲ್ಲಿ ಹೆಚ್ಚಿದ ಜಾಗೃತಿ, ಸ್ತ್ರೀ ಶಿಕ್ಷಣ ಪ್ರಮಾಣದಲ್ಲಿ ಹೆಚ್ಚಳ- ಇವನ್ನೆಲ್ಲ ಗಮನಿಸಿದರೆ ಅಪರಾಧ ಪ್ರಮಾಣ ಕಡಿಮೆಯಾಗಬೇಕಿತ್ತಲ್ಲವೆ? ಏಕೆ ಆಗುತ್ತಿಲ್ಲ ಹಾಗಾದರೆ?

ನಮ್ಮ ಸಂಸ್ಕೃತಿ, ಪರಂಪರೆಗಳನ್ನು ಮರೆತು, ಪಾಶ್ಚಿಮಾತ್ಯ ರೂಢಿ, ಥಳಕುಬಳಕುಗಳಿಗೆ ಮಾರುಹೋದದ್ದರ ಪರಿಣಾಮವೇ ಇದು? ಅಥವಾ ನಮ್ಮ ಶಿಕ್ಷಣ ವ್ಯವಸ್ಥೆ ಕೇವಲ ಬುದ್ಧಿಯನ್ನು ಬೆಳೆಸುತ್ತ ಹೃದಯವನ್ನು ಮರೆತೇಬಿಟ್ಟಿದೆಯಾ? ಅಥವಾ ಸಾಮಾಜಿಕ ವಾತಾವರಣವೇ ಹಾಗಾಗಿದೆಯಾ? ಅಥವಾ ಮಕ್ಕಳನ್ನು ಬೆಳೆಸುವಲ್ಲಿ ಪಾಲಕರು ಎಡವುತ್ತಿದ್ದಾರಾ? ಬಹುಶಃ ಇವೆಲ್ಲ ಸಂಗತಿಗಳೂ ಪರಸ್ಪರ ಹೆಣೆದುಕೊಂಡ ಸಿಕ್ಕು ಇದು. ಹೀಗಾಗಿ ಬಹುಮುಖಿ ಪ್ರಯತ್ನ ನಡೆಯದಿದ್ದರೆ ಈ ಕಗ್ಗಂಟನ್ನು ಬಿಡಿಸುವುದು ಕಷ್ಟ ಕಷ್ಟ. ಅಲ್ಲಿವರೆಗೂ ಭದ್ರತೆಯ ನೆರಳಿನಲ್ಲೇ ಖುಷಿಯನ್ನು ಆಸ್ವಾದಿಸಬ‘ಬೇಕಾದ ಪರಿಸ್ಥಿತಿ ಇರುತ್ತದೆ. ಆದರೆ ಅದು ನಿಜಕ್ಕೂ ಸಂಭ್ರಮವಾ?


ಇಲ್ಲಿ ಹೊಸ ವರ್ಷದ ಸ್ವಾಗತದ ನೆಪದಲ್ಲಿ ಇಷ್ಟೆಲ್ಲ ನಡೆಯಿತಲ್ಲ, ಅದಾದ ಮೂರು ದಿನಗಳ ನಂತರ….

ಜಮ್ಮು-ಕಾಶ್ಮೀರದ ಸಾಂಬಾ ಪ್ರದೇಶದಲ್ಲಿ ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್​ಎಫ್) ಯೋಧರು ಎಂದಿನಂತೆ ಕಾವಲಿನಲ್ಲಿ ನಿರತರಾಗಿದ್ದರು. ಹಾಗೆ, ಗಡಿ ಕಾಯುತ್ತಿದ್ದ ಬಿಎಸ್​ಎಫ್​ನ ಆರ್.ಪಿ.ಹಾಜ್ರಾ ಎಂಬ ಯೋಧ ಮಂಗಳವಾರ ತಡರಾತ್ರಿ ಪಾಕ್ ಸೈನಿಕರು ನಡೆಸಿದ ಗುಂಡಿನ ದಾಳಿಗೆ ಸಿಲುಕಿ ಹುತಾತ್ಮನಾದ. ವಿಧಿಯಾಟ ನೋಡಿ, ಅಂದು ಅತನ ಜನ್ಮದಿನವೂ ಆಗಿತ್ತು. ಇತ್ತ ಮನೆಯವರು ದೇವರ ದೀಪ ಹಚ್ಚಿ ಆತನ ಒಳಿತನ್ನು ಹಾರೈಸುತ್ತಿರುವಾಗ, ಅಲ್ಲಿ ಗಡಿಯಲ್ಲಿ ಆತ ಪ್ರಾಣತೆತ್ತಿದ್ದ.

ಈ ಘಟನೆಯಿಂದ ಕೆರಳಿದ ಭಾರತೀಯ ಯೋಧರು ತಡಮಾಡದೆ ಪಾಕ್ ಸೈನಿಕರ ಮೇಲೇರಿ ಹೋಗಿ, ಗಡಿಯಲ್ಲಿನ ಅವರ ಎರಡು ಸೇನಾಚೌಕಿಗಳನ್ನು ಧ್ವಂಸಗೊಳಿಸಿದರು. ಅಷ್ಟೇ ಅಲ್ಲ, ನಮ್ಮವರ ಗುಂಡಿನ ದಾಳಿಯಿಂದ ಸುಮಾರು 10 ಮಂದಿ ಪಾಕ್ ಸೈನಿಕರೂ ಹತರಾದರು. ಒಂದಕ್ಕೆ ಬದಲಾಗಿ ಹತ್ತು! ಇದಲ್ಲವೆ ಪ್ರತೀಕಾರ! ಕಣಿವೆ ರಾಜ್ಯದಲ್ಲಿ ಈಚಿನ ಕೆಲ ತಿಂಗಳುಗಳಲ್ಲಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸುವ ಮತ್ತು ಅಪ್ರಚೋದಿತ ಗುಂಡಿನ ದಾಳಿ ನಡೆಸುವ ಪ್ರಕರಣಗಳು ಹೆಚ್ಚಿರುವುದು ಗೊತ್ತೇ ಇದೆ. ಅದೇ ರೀತಿ ನಮ್ಮ ಸೇನೆಯೂ ಆಕ್ರಮಣಕಾರಿಯಾಗಿ ಕಾರ್ಯತಂತ್ರ ಹೆಣೆಯುತ್ತಿದೆ. ಭಾರತೀಯ ಯೋಧರು ಹೇಗೆ ಭಯೋತ್ಪಾದಕರ ಮೇಲೆ ಮುಗಿಬೀಳುತ್ತಿದ್ದಾರೆ ಎಂಬುದಕ್ಕೆ ಇದೊಂದು ಉದಾಹರಣೆ ಸಾಕು- 2017ರ ವರ್ಷದಲ್ಲಿ ನಮ್ಮ ಸೇನೆ 206 ಭಯೋತ್ಪಾದಕರನ್ನು ಹೊಡೆದುರುಳಿಸಿದೆ. ಹತರಾದ ಭಯೋತ್ಪಾದಕರಲ್ಲಿ ಲಷ್ಕರ್ ಎ ತೊಯ್ಬಾ, ಜೈಷ್ ಎ ಮೊಹಮ್ಮದ್ ಮುಂತಾದ ಸಂಘಟನೆಗಳ ಪ್ರಮುಖರೂ ಸೇರಿದ್ದಾರೆ.

ನಾವು ಇಲ್ಲಿ ಹೊಸ ವರ್ಷ, ಆ ಹಬ್ಬ ಈ ಹಬ್ಬ ಎಂದೆಲ್ಲ ಸಂಭ್ರಮದಲ್ಲಿ ಮುಳುಗಿರುವಾಗ ಅಲ್ಲೆಲ್ಲೋ ದೂರದಲ್ಲಿ ಕಾಶ್ಮೀರದಲ್ಲೋ, ಅರುಣಾಚಲದ ನೆತ್ತಿಯ ಮೇಲೋ ನಮ್ಮ ಸೈನಿಕನೆ ಬಂದೂಕು ಹಿಡಿದು ಕಾವಲಿಗೆ ನಿಂತಿರುತ್ತಾರೆ. ವೈರಿಸೈನಿಕರು ಯಾವಾಗ ಏನು ಮಾಡುತ್ತಾರೋ ಎಂಬ ಕಟ್ಟೆಚ್ಚರದಲ್ಲೇ ಇರಬೇಕಾದ ಆತನಿಗೆ ಹೊಸ ವರ್ಷದ ನೆನಪಾದರೂ ಇರುತ್ತದೋ ಇಲ್ಲವೋ? ಅವನಿಗೆ ಶುಭಾಶಯ ಹೇಳುವವರಾರು? ಆಲಂಗಿಸಿ ಬೆನ್ನುತಟ್ಟುವವರಾರು? ಪ್ರಧಾನಮಂತ್ರಿಗಳೋ, ಗೃಹ ಸಚಿವರೋ ಎಲ್ಲೋ ಒಂದೆರಡು ಕಡೆ ಹೋಗಿ ಯೋಧರ ಜತೆ ಹೊಸ ವರ್ಷ ಆಚರಿಸಬಹುದು. ಎಲ್ಲ ಕಡೆಯೂ ಹೋಗಲು ಆಗುವುದಿಲ್ಲವಲ್ಲ? ಹಾಗಾಗಿ ನಾವು ಇದ್ದಲ್ಲಿಂದಲೇ ನಮ್ಮ ಸೈನಿಕರಿಗೆ ಹ್ಯಾಪಿ ನ್ಯೂ ಇಯರ್ ಹೇಳೋಣ! ನಿನ್ನ ಜತೆಗೆ ನಾವಿದ್ದೇವೆ ಎಂಬ ಭಾವನಾತ್ಮಕ ಬೆಂಬಲ ನೀಡೋಣ. ವಿವಿಧ ಬಗೆಯ ಸಂಭ್ರಮದಲ್ಲಿ ಒಂದು ಕ್ಷಣವಾದರೂ ಸೈನಿಕನ ಚಿತ್ರವೂ ಮನದಲ್ಲಿ ಮೂಡಲಿ….

ಕೊನೇ ಮಾತು: ಹೊಸ ವರ್ಷ ಎಂಬುದು ಕ್ಯಾಲೆಂಡರ್​ನಲ್ಲಿನ ದಿನಾಂಕ ಬದಲಾವಣೆಯಷ್ಟೆ, ನಾವು ನಿತ್ಯವೂ ಹೊಸದಾಗುತ್ತಲೇ ಇರುವುದೇ ಕಾಲಪುರುಷನಿಗೆ ಸಲ್ಲಿಸುವ ಗೌರವ.

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

Leave a Reply

Your email address will not be published. Required fields are marked *

Back To Top