ಹೊಸ ಮರಳು ನೀತಿ ವಾರದೊಳಗೆ ಜಾರಿ

ಬೆಂಗಳೂರು: ರಾಜ್ಯದಲ್ಲಿ ಮರಳುಗಾರಿಕೆ ಗುತ್ತಿಗೆ ಹಂಚಿಕೆಯನ್ನು ಇ-ಟೆಂಡರ್ ಮೂಲಕವೇ ಮಾಡುವ ಮೂಲಕ ವೈಜ್ಞಾನಿಕ ಮರಳುಗಾರಿಕೆಗೆ ಅವಕಾಶ ನೀಡುವ ಕುರಿತು ನೂತನ ಮರಳು ನೀತಿಯನ್ನು ಒಂದು ವಾರದಲ್ಲಿ ಪ್ರಕಟಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಶುಕ್ರವಾರ ವಿಧಾನಸೌಧದಲ್ಲಿ ಮರಳುಗಾರಿಕೆ ಸಮಸ್ಯೆ ಸಂಬಂಧ ರಚಿಸಲಾದ ಸಚಿವ ಸಂಪುಟ ಸಭೆಯ ಉಪಸಮಿತಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಲೋಕೋಪಯೋಗಿ ಇಲಾಖೆಯ ಮೂಲಕ ಮರಳು ಬ್ಲಾಕ್​ಗಳನ್ನು ಹಂಚಿಕೆ ಮಾಡುವಲ್ಲಿ ಹಲವಾರು ಅಡೆತಡೆಗಳು ಉಂಟಾಗಿದ್ದವು. ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ಪರಿಗಣಿಸಿ ಟೆಂಡರ್ ನೀಡಿದ ನಂತರ ಹಲವಾರು ದೂರುಗಳು ಬಂದಿದ್ದವು. ಇ-ಟೆಂಡರ್ ಮೂಲಕವೇ ಮರಳುಗಾರಿಕೆ ಟೆಂಡರ್ ನೀಡುವುದನ್ನು ಮತ್ತಷ್ಟು ಬಿಗಿಗೊಳಿಸಿ ಹೊಸ ಮರಳು ನೀತಿ ರೂಪಿಸಲು ಹಲವಾರು ಸಲಹೆಗಳು ಕೇಳಿಬಂದಿವೆ. ಒಂದು ವಾರದಲ್ಲಿ ಹೊಸ ನೀತಿ ಪ್ರಕಟಗೊಳ್ಳಲಿದೆ ಎಂದರು.

ವಿದೇಶದಿಂದ ಆಮದು ಮಾಡಿಕೊಂಡಿರುವ ಮರಳು ಹಂಚಿಕೆ ಸ್ಥಗಿತಗೊಂಡಿರುವ ಬಗ್ಗೆ ತನಿಖೆ ನಡೆಯುತ್ತಿದೆ. ಆದಷ್ಟು ಬೇಗ ಸಮಸ್ಯೆ ಇತ್ಯರ್ಥಪಡಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Leave a Reply

Your email address will not be published. Required fields are marked *