ಹೊಸ ಮತದಾರರ ನೋಂದಣಿ ಆರಂಭ: ಅಕ್ಟೋಬರ್ 15 ರವರೆಗೆ ಸಮಗ್ರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ

ಬೆಂಗಳೂರು: ದೇಶದಾದ್ಯಂತ ಸಮಗ್ರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಯುತ್ತಿದೆ. ಬೆಂಗಳೂರಿನಲ್ಲಿ ಪಟ್ಟಿ ಪರಿಷ್ಕರಣೆ ಸೆ.1ಕ್ಕೆ ಆರಂಭವಾಗಿದ್ದು, ಅ.15ರವರೆಗೆ ಕಾಲಾವಕಾಶವಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್​ಕುಮಾರ್ ತಿಳಿಸಿದ್ದಾರೆ.

ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ನ್ಯೂನತೆಗಳ ಕುರಿತು ದೂರುಗಳು ಕೇಳಿಬಂದ ಕಾರಣ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಮಾಡಲಾಗುತ್ತಿದೆ. ಯುವ ಮತದಾರರ ನೋಂದಣಿ, ಹೊಸ ಮತಗಟ್ಟೆಯಲ್ಲಿ ಹೆಸರು ಸೇರ್ಪಡೆಗಳಿದ್ದಲ್ಲಿ ಸಾರ್ವಜನಿಕರು ನಾಗರಿಕ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಹುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದಲ್ಲಿ ಅತಿವೃಷ್ಟಿಯಿಂದ ಹಲವು ಜಿಲ್ಲೆಗಳಲ್ಲಿ ಹಾನಿ ಸಂಭವಿಸಿದ್ದರಿಂದ ಇವಿಪಿ ಕಾರ್ಯಕ್ರಮವನ್ನು ಆ.1ರ ಬದಲು ಸೆ.1ರಿಂದ ಅ.1ವರೆಗೆ ಮರು ನಿಗದಿಪಡಿಸಲಾಗಿದೆ. ಅರ್ಜಿ ಸ್ವೀಕರಿಸಿದ ಬಳಿಕ, ಅ.16ರಿಂದ ಮನೆ ಮನೆಗೆ ಹೋಗಿ ಪರಿಶೀಲಿಸಲಾಗುವುದು ಎಂದರು.

ಕುಟುಂಬದ ಎಲ್ಲ ಸದಸ್ಯರನ್ನು ಒಳಗೊಂಡ ಮತದಾರರ ಮಾಹಿತಿ ಒಂದೇ ಭಾಗದಲ್ಲಿ ಮತ್ತು ಸ್ಥಳದಲ್ಲಿ ಇರುವಂತೆ ನಿಗಾ ವಹಿಸಲಾಗುತ್ತದೆ. ಮನೆ ಸಂಖ್ಯೆ ನಮೂನೆ -7 ಮೂಲಕ ಒಂದಕ್ಕಿಂತ ಹೆಚ್ಚಿನ ನೋಂದಣಿ ಇದ್ದರೆ ತೆಗೆದುಹಾಕುವುದು, ಮರಣವಾಗಿದ್ದರೆ ಅಥವಾ ಕಾಯಂ ಆಗಿ ಸ್ಥಳಾಂತರಗೊಂಡಿದ್ದರೆ ಹೆಸರು ತೆಗೆದುಹಾಕುವುದು. ಶಿಥಿಲ ಮತಗಟ್ಟೆಗಳ ಮರುನಿರ್ವಣಕ್ಕೆ ಕ್ರಮ ಕೈಗೊಳ್ಳುವುದು. ಒಟ್ಟಿನಲ್ಲಿ ಅರ್ಹರೆಲ್ಲರು ಮತದಾರರ ಪಟ್ಟಿಯಲ್ಲಿ ನೋಂದಣಿಯಾಗುವಂತೆ ನೋಡಿಕೊಳ್ಳುವುದು ಇದರ ಗುರಿ ಎಂದರು.

ಯಾವ್ಯಾವ ದಾಖಲೆಗಳು ಅಗತ್ಯ?

ಮತದಾರರು ತಮ್ಮ ಮತ್ತು ತಮ್ಮ ಕುಟುಂಬದವರ ವಿವರಗಳನ್ನು ಪರಿವೀಕ್ಷಣೆ ಮತ್ತು ಪ್ರಮಾಣೀಕರಣ ಮಾಡಬೇಕು. ಅಗತ್ಯವಿದ್ದಲ್ಲಿ ಸೇರ್ಪಡೆ, ತಿದ್ದುಪಡಿ, ತೆಗೆದುಹಾಕಲು ತಿಳಿಸಬಹುದು. ಈ ವೇಳೆ ಪಾಸ್​ಪೋರ್ಟ್, ಚಾಲನಾ ಪರವಾನಗಿ, ಆಧಾರ್ ಪತ್ರ, ಪಡಿತರ ಚೀಟಿ, ಸರ್ಕಾರಿ ನೌಕರರು ಹೊಂದಿರುವ ಗುರುತಿನ ಚೀಟಿ, ಬ್ಯಾಂಕ್ ಪಾಸ್​ಬುಕ್, ರೈತರ ಗುರುತಿನ ಚೀಟಿ ಸಲ್ಲಿಸಬಹುದು.

ಸ್ಥಳಗಳು

ನಾಗರಿಕ ಸೇವಾ ಕೇಂದ್ರ, ಮತದಾರ ನೋಂದಣಾಧಿಕಾರಿ ಕಚೇರಿ, ಬೆಂಗಳೂರು ಒನ್, ಕರ್ನಾಟಕ ಒನ್, ಅಟಲ್ ಜನಸ್ನೇಹಿ ಕೇಂದ್ರ, ಬಾಪೂಜಿ ಸೇವಾ ಕೇಂದ್ರ, ಮತಗಟ್ಟೆ ಅಧಿಕಾರಿಗಳ ಸೇವಾಕೇಂದ್ರ ಅಥವಾ ಅಧಿಕಾರಿಗಳನ್ನು ಸಂರ್ಪಸಿ ಮತದಾರರ ಮಾಹಿತಿ ಖಾತ್ರಿ ಪಡಿಸಿಕೊಳ್ಳಬಹುದು. ಮತದಾರರಿಗೆ ಗೊಂದಲಗಳಿದ್ದಲ್ಲಿ ಮತದಾರರ ಸಹಾಯವಾಣಿಗೆ (1950) ಕರೆ ಮಾಡಿ ಖಾತ್ರಿ ಪಡಿಸಿಕೊಳ್ಳಬಹುದು.

Leave a Reply

Your email address will not be published. Required fields are marked *