ಸಿನಿಮಾ

ಹೊಸ ಭಾಷೆಗಳ ದಾಖಲೀಕರಣಕ್ಕೂ ಆದ್ಯತೆ ನೀಡಿ

ಅಳಿವಿನಂಚಿನಲ್ಲಿರುವ ಭಾಷೆಗಳನ್ನು ಮಾತ್ರ ಅಧ್ಯಯನ ಮಾಡದೆ, ಹೊಸದಾಗಿ ಹುಟ್ಟಿಕೊಳ್ಳುತ್ತಿರುವ ಭಾಷೆಗಳ ದಾಖಲೀಕರಣಕ್ಕೂ ಆದ್ಯತೆ ನೀಡಬೇಕಿದೆ ಎಂದು ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ, ಪದ್ಮಶ್ರೀ ಪುರಸ್ಕೃತೆ ಪ್ರೊ.ಅನ್ವಿತಾ ಅಬ್ಬಿ ಹೇಳಿದರು.


ಭಾರತೀಯ ಭಾಷಾ ಸಂಸ್ಥಾನದ ಅಳಿವಿನಂಚಿನ ಭಾಷೆಗಳ ರಕ್ಷಣೆ ಮತ್ತು ಸಂರಕ್ಷಣಾ ಯೋಜನೆ ವತಿಯಿಂದ ನಗರದ ಸಿಐಐಎಲ್‌ನಲ್ಲಿ ಹಮ್ಮಿಕೊಂಡಿರುವ ಭಾಷಾ ದಾಖಲೀಕರಣ ಕುರಿತ 2 ವಾರಗಳ ತರಬೇತಿ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.


ಹಳೇ ಮತ್ತು ಹೊಸ ಭಾಷೆಗಳ ದಾಖಲೀಕರಣದೊಂದಿಗೆ, ಅವುಗಳನ್ನು ಪರಾಮರ್ಶೆಗೆ ಒಳಪಡಿಸಬೇಕು. ಅಲ್ಲದೆ, ಈ ಭಾಷೆಗಳ ಸ್ಥಿತಿಗತಿ ಕುರಿತು ಮೌಲ್ಯಮಾಪನ ಮಾಡಬೇಕು ಎಂದರು.


ಅಳಿವಿನಂಚಿನಲ್ಲಿರುವ ಭಾಷೆಗಳನ್ನು ಉಳಿಸುವ ಕೆಲಸ ಅನೇಕ ವರ್ಷಗಳಿಂದ ನಡೆಯುತ್ತಿದ್ದು, ಕೇವಲ ಭಾಷೆ ಹಾಗೂ ಅದರಲ್ಲಿರುವ ವ್ಯಾಕರಣವನ್ನು ದಾಖಲಿಸಲಾಗುತ್ತದೆ. ಆದರೆ ಪ್ರತಿಯೊಂದು ಭಾಷೆಯಲ್ಲಿಯೂ ಅದು ಉಗಮವಾದಾಗಿನಿಂದ ಕೆಲವೊಂದು ಜ್ಞಾನ ಅಡಗಿರುತ್ತದೆ. ಆ ರೀತಿಯ ಜ್ಞಾನಭಂಡಾರ ನಮಗೆ ಹಾಗೂ ಭವಿಷ್ಯದ ಪೀಳಿಗೆಗೆ ಮುಖ್ಯವಾಗಿದೆ. ಆದ್ದರಿಂದ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ದಾಖಲೀಕರಣ ಕೆಲಸವಾಗಬೇಕು ಎಂದು ಸಲಹೆ ನೀಡಿದರು.

ಭಾರತೀಯ ಭಾಷಾ ಸಂಸ್ಥಾನದ ಪ್ರಾಧ್ಯಾಪಕಿ ಮತ್ತು ಉಪ ನಿರ್ದೇಶಕಿ ಪ್ರೊ.ಉಮಾರಾಣಿ ಪಪ್ಪುಸ್ವಾಮಿ ಮಾತನಾಡಿ, ವಿವಿಧ ಜನಾಂಗಗಳು ತಮ್ಮ ಕುಲಕಸುಬಗಳನ್ನು ಈಗಲೂ ಮುಂದುವರಿಸಿಕೊಂಡು ಬಂದಿವೆ. ಈ ಸಮುದಾಯಗಳ ಭಾಷೆಯನ್ನು ಸಂರಕ್ಷಿಸದಿದ್ದರೆ, ಅವರಲ್ಲಿರುವ ಔದ್ಯೋಗಿಕ ಜ್ಞಾನ ಮುಂದಿನ ಜನಾಂಗಕ್ಕೆ ವರ್ಗಾವಣೆ ಆಗುವುದಿಲ್ಲ. ಆದ್ದರಿಂದ ಕಳೆದ ಐದು ದಶಕಗಳಿಂದ ಅಳಿವಿನಂಚಿನಲ್ಲಿರುವ ಭಾಷೆಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ. ಶೈಲೇಂದ್ರಮೋಹನ್, ಕಾರ್ಯಕ್ರಮ ಸಂಯೋಜಕ ಡಾ.ಸುಯೋಜ್ ಸರ್ಕಾರ್ ಇತರರು ಇದ್ದರು.

Latest Posts

ಲೈಫ್‌ಸ್ಟೈಲ್