ಹೊಸ ಬೆಳೆಸಾಲಕ್ಕೂ ಅಸ್ತು

ಬೆಂಗಳೂರು: ರೈತರ ಸಾಲಮನ್ನಾ ಹೆಚ್ಚು ಕಡಿಮೆ ರ್ತಾಕ ಅಂತ್ಯ ತಲುಪಿದ್ದು, ಹೊಸ ಸಾಲದ ಚಿಂತೆಗೂ ಸರ್ಕಾರ ತೆರೆ ಎಳೆದಿದೆ.

ಸಾಲಮನ್ನಾದ ಬಹುದೊಡ್ಡ ಹೊರೆ ನಡುವೆಯೂ ಹೊಸ ಸಾಲ ನೀಡಲು ಸರ್ಕಾರ ಆದೇಶ ಹೊರಡಿಸಿದೆ. ರೈತರಿಗೆ 3 ಲಕ್ಷದವರೆಗಿನ ಶೂನ್ಯ ಬಡ್ಡಿ ದರದ ಬೆಳೆ ಸಾಲ ನೀಡಲು ಸಹಕಾರ ಸಂಘಗಳಿಗೆ ಸೂಚಿಸಿದೆ. ಈ ಹಿಂದೆ ಸಾಲ ಒಡೆಯುತ್ತಿರುವ ರೈತರಿಗೆ ಮಾತ್ರ ಈ ಯೋಜನೆ ಪ್ರಯೋಜನ ದೊರೆಯುವುದಿಲ್ಲ. ಶೇ.25 ಹೊಸ ರೈತರಿಗೂ ಸಾಲ ಸೌಲಭ್ಯ ಕಲ್ಪಿಸಲು ನಿರ್ದೇಶಿಸಿದೆ. ಇದು ರೈತರಲ್ಲಿ ಹೊಸ ಆಶಾಭಾವನೆ ಚಿಗುರಿಸಿದೆ. 2018-19ನೇ ಸಾಲಿನಲ್ಲಿ ಸಹಕಾರ ಸಂಘಗಳ ಮೂಲಕ 23 ಲಕ್ಷ ರೈತರಿಗೆ 12 ಸಾವಿರ ಕೋಟಿ ರೂ. ಸಾಲ ನೀಡುವ ಗುರಿ ಹೊಂದಲಾಗಿದೆ. ಈ ಪೈಕಿ ಶೇ.24.10 ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಮೀಸಲಿಡಲು ಸೂಚಿಸಲಾಗಿದೆ.

ಯಾವ ಜಿಲ್ಲೆಗೆ ಎಷ್ಟು?: ಈ ಯೋಜನೆ ಅಡಿ ಬೆಳಗಾವಿ ಜಿಲ್ಲೆಯ 3,92,709 ರೈತರು 1,560 ಕೋಟಿ ರೂ. ಪಾಲು ಪಡೆಯಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,30,290 ರೈತರು 1,310 ಕೋಟಿ ರೂ., ಬಾಗಲಕೋಟೆ ಜಿಲ್ಲೆಯ 2,07,900 ರೈತರಿಗೆ 1,050 ಕೋಟಿ ರೂ. ಸಾಲ ನೀಡಲು ಉದ್ದೇಶಿಸಲಾಗಿದೆ. ಚಿತ್ರದುರ್ಗ 200, ದಾವಣಗೆರೆ 230 ಹಾಗೂ ಧಾರವಾಡಕ್ಕೆ 260 ಕೋಟಿ ರೂ. ಕೊಡಮಾಡಲು ಗುರಿ ನಿಗದಿ ಮಾಡಲಾಗಿದೆ. 3 ಲಕ್ಷಕ್ಕಿಂತ ಜಾಸ್ತಿ ಸಾಲಗಳ ಸಂಪೂರ್ಣ ಮೊತ್ತಕ್ಕೆ ಸಾಮಾನ್ಯ ಬಡ್ಡಿ ದರ ನಿಗಧಿಪಡಿಸಲಾಗಿದೆ. 2018 ಏಪ್ರಿಲ್ 1ರಿಂದ 2019 ಮಾರ್ಚ್ 31ರವರೆಗೆ ನೀಡಲಾಗುವ ಕೃಷಿ ಅಲ್ಪಾವಧಿ ಸಾಲಗಳಿಗೆ ಮಾತ್ರ ಶೂನ್ಯ ಬಡ್ಡಿ ದರ ಅನ್ವಯವಾಗಲಿದೆ.

ಗಡುವು ನಿಗದಿ

ರೈತರು ಸಹಕಾರಿ ಸಂಸ್ಥೆಗಳ ನಿಗದಿತ ಗಡುವಿನೊಳಗೆ ಮರುಪಾವತಿಸಿದರೆ ಮಾತ್ರ ಈ ಸೌಲಭ್ಯ ಲಭ್ಯ. ಆ ಬಳಿಕ ಮರುಪಾವತಿಸಿದ ಸಾಲಗಳಿಗೆ ಸಾಮಾನ್ಯ ಬಡ್ಡಿ ದರ ತೆರಬೇಕು.

ಪ್ರಮುಖ ಷರತ್ತುಗಳೇನು?

 • ಶೂನ್ಯ ಬಡ್ಡಿ ದರ 3 ಲಕ್ಷದ ವರೆಗಿನ ಸಾಲಕ್ಕೆ ಮಾತ್ರ ಅನ್ವಯ.
 • ಸ್ಕೇಲ್ ಆಫ್ ಫೈನಾನ್ಸ್ ಮತ್ತು ಬೆಳೆ ವಿಮೆ ಆಧಾರದ ಮೇಲೆ ಮಂಜೂರಾದ ಸಾಲದ ಮಿತಿಗಷ್ಟೇ ಬಡ್ಡಿ ರಿಯಾಯಿತಿ. ಬೆಳೆ ಕಟಾವು ಸೇರಿ ಇತರ ಉದ್ದೇಶಗಳಿಗೆ ನೀಡಲಾದ ಹೆಚ್ಚುವರಿ ಸಾಲಗಳಿಗೆ ಇಲ್ಲ.
 • ಬೆಳೆ ವಿಮೆಯಡಿ ಘೊಷಿತ ಬೆಳೆಗೆ ಸಾಲ ಪಡೆದ ರೈತರಿಗೆ ಯಾವುದೇ ಹಂಗಾಮಿನಲ್ಲಿ ಸಾಲ ವಿತರಿಸಿದ್ದರೂ ಕಡ್ಡಾಯವಾಗಿ ಬೆಳೆ ವಿಮೆ ಪ್ರೀಮಿಯಂ ಪಾವತಿಸಿರಬೇಕು.
 • ಸಹಕಾರ ಸಂಘಗಳು ನೀಡುವ ಕೃಷಿಯೇತರ ಸಾಲಗಳಿಗೆ ಈ ಯೋಜನೆ ಅನ್ವಯ ಆಗುವುದಿಲ್ಲ.
 • ಸಾಲ ನೀಡುವ ಸಂಸ್ಥೆಗಳು ಪ್ರಾಥಮಿಕ ಸಹಕಾರ ಸಂಘಗಳಿಂದ ಮತ್ತು ಪ್ರಾಥಮಿಕ ಸಹಕಾರ ಸಂಸ್ಥೆಗಳು ರೈತರಿಂದ ಯಾವುದೇ ಪ್ರಕ್ರಿಯೆ ಶುಲ್ಕ/ಸೇವಾ ಶುಲ್ಕದ ಹೆಸರಿನಲ್ಲಿ ಹಣ ಸಂಗ್ರಹಿಸುವಂತಿಲ್ಲ.

ಯಾವ ಬ್ಯಾಂಕ್​ಗಳಲ್ಲಿ ಈ ಸವಲತ್ತು?

 • ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್
 • ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ
 • ಟಿಬೇಟಿಯನ್ ಸಹಕಾರ ಸಂಘಗಳು
 • ಲ್ಯಾಂಪ್ಸ್ ಸಹಕಾರ ಸಂಘಗಳು
 • ಪೀಕಾರ್ಡ್ ಬ್ಯಾಂಕ್​ಗಳು
 • ಸಹಕಾರ ಸಂಘಗಳ ನಿಬಂಧಕರು ಈ ಯೋಜನೆಯಡಿ ಅರ್ಹ ಎಂದು ಗುರುತಿಸುವ ಇತರ ಸಹಕಾರ ಸಂಘಗಳು (ಪಟ್ಟಣ ಸಹಕಾರ ಸಂಘಗಳು ನೀಡುವ ಸಾಲಗಳಿಗೆ ಅನ್ವಯಿಸುವುದಿಲ್ಲ)

ಸಂಘ ಮುಚ್ಚಿದರೂ ಚಿಂತಿಸಬೇಕಿಲ್ಲ!

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಸ್ಥಗಿತ/ಸಮಾಪನಗೊಂಡಿದ್ದಲ್ಲಿ ಅಂತಹ ಕಾರ್ಯವ್ಯಾಪ್ತಿಯಲ್ಲಿ ಮಾತ್ರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು ಅಲ್ಪಾವಧಿ ಕೃಷಿ ಸಾಲ ವಿತರಿಸಲಿವೆ.


ನಾವು ಕಾನೂನು ಚೌಕಟ್ಟಿನಲ್ಲೇ ಇದೀವಿ, ನೀರು ಬಳಸಿಲ್ಲ

ಬೆಂಗಳೂರು: ಮಹದಾಯಿ ವಿಚಾರದಲ್ಲಿ ನಾವು ಕಾನೂನು ಚೌಕಟ್ಟಿನಲ್ಲೇ ಇದೀವಿ, ಎಲ್ಲೂ ಕಾನೂನು ಉಲ್ಲಂಘಿಸಿಲ್ಲ. ಲೀಕೇಜ್ ನೀರಿನ ಬಗ್ಗೆಯೂ ಫೋಟೋ ಸಮೇತ ನ್ಯಾಯಧೀಕರಣದ ಗಮನಕ್ಕೆ ತಂದಿದ್ದೇವೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಮಲಪ್ರಭಾ ನದಿಗೆ ಮಹದಾಯಿ ನೀರನ್ನು ತಿರುಗಿಸಿಕೊಂಡಿದೆ ಎಂಬ ಗೋವಾ ಸರ್ಕಾರದ ಕ್ಯಾತೆ ವಿಚಾರವಾಗಿ ಸುದ್ದಿಗಾರರಿಗೆ ಬುಧವಾರ ಪ್ರತಿಕ್ರಿಯಿಸಿದ ಡಿಕೆಶಿ, ನಾವು ಎಲ್ಲೂ ನೀರನ್ನು ಬಳಕೆ ಮಾಡುತ್ತಿಲ್ಲ. ಆಗಸ್ಟ್ ಒಳಗೆ ನ್ಯಾಯಬದ್ಧವಾದ ತೀರ್ಪು ಬರುವ ನಂಬಿಕೆ ಇದೆ ಎಂದರು. ಗೋವಾ ಬಗ್ಗೆ ನಮಗೇನು ಬೇಜಾರಿಲ್ಲ. ಅಲ್ಲಿಯವರ ಜತೆ ಯುದ್ಧ ಮಾಡಲು ಸಿದ್ಧವಿಲ್ಲ. ಜಗಳ ಮಾಡುವುದಕ್ಕೂ ತಯಾರಿಲ್ಲ. ಸಮುದ್ರಕ್ಕೆ ಹೋಗುವ ನೀರನ್ನು ಅವರು ಬೇಕಿದ್ದರೆ ಬಳಸಿಕೊಳ್ಳಲಿ. ಉತ್ತರ ಕರ್ನಾಟಕದ ಭಾಗದ ಜನರಿಗೆ ನೀರು ಸಿಗಬೇಕು, ಆ ಕಾರಣಕ್ಕೆ ನೀರು ಕೊಡಿ ಎಂದು ಕೇಳುತ್ತಿದ್ದೇವೆ. ಬೇಕಿದ್ದರೆ ಗೋವಾ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ಮಾಡಿ ಹೋಗಲಿ. ಅದನ್ನು ತಪ್ಪು ಎಂದು ಹೇಳುವುದಿಲ್ಲ ಎಂದು ಅವರು ಹೇಳಿದರು. ನಮಗೆ ನ್ಯಾಯ ಸಿಗಲಿದೆ, ಆತ್ಮವಿಶ್ವಾಸದಿಂದಿರುವಂತೆ ವಕೀಲರು ಹೇಳಿದ್ದಾರೆ. ಹೀಗಾಗಿ ಕೋರ್ಟ್ ಆದೇಶಕ್ಕಾಗಿ ಉಸಿರು ಹಿಡಿದು ಕಾಯುತ್ತಿದ್ದೇವೆ ಎಂದ ಡಿಕೆಶಿ, ನಾನೂ ಸ್ಥಳ ಪರಿಶೀಲನೆಗೆ ಹೊರಟಿದ್ದೆ. ಅಲ್ಲಿಗೆ ಭೇಟಿ ಕೊಟ್ಟರೆ ಅಪಾರ್ಥಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ ಎಂದು ಹೋಗಲಿಲ್ಲ ಎಂದರು.