ಹೊಸ ಬಾಳಿಗೆ ಮರು ವಿವಾಹ ವೇದಿಕೆ

ಕೋಲಾರ; ಆಕಸ್ಮಿಕ ಘಟನೆಗಳಿಂದ ಸಣ್ಣವಯಸ್ಸಿನಲ್ಲೇ ಪತಿ ಕಳೆದುಕೊಂಡ ಮಹಿಳೆಗೆ ಮರುಮದುವೆ ಮಾಡದೆ ಉಳಿಸಿಕೊಳ್ಳುವುದು ಅಸ್ಪಶ್ಯತೆಗಿಂತಲೂ ಕ್ರೂರವಾದುದು ಎಂದು ಭಾರತ ಗೃಹಪ್ರವೇಶ ಸಮಿತಿ, ಅರಿವು ಮರು ವಿವಾಹ ವೇದಿಕೆ ಸಂಸ್ಥಾಪಕ, ಉಪನ್ಯಾಸಕ ಡಾ.ಜಿ.ಶಿವಪ್ಪ ಅರಿವು ತಿಳಿಸಿದರು.

ಸರ್ಕಾರಿ ನೌಕರರ ಭವನದಲ್ಲಿ ಅರಿವು ಮರು ವಿವಾಹ ವೇದಿಕೆ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.

ಸಂಪ್ರದಾಯದ ಕಟ್ಟುಪಾಡುಗಳಿಗೆ ಒಳಪಟ್ಟು ಒಂಟಿ ಬಾಳು ಅನುಭವಿಸುತ್ತಿರುವವರಿಗೆ ಹೊಸ ಬಾಳಿಗೆ ಮರು ವಿವಾಹ ವೇದಿಕೆ ಮಾಹಿತಿ ಒದಗಿಸುವ ಸಂರ್ಪಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದರು.

6 ತಿಂಗಳ ಹಿಂದೆ ವಾಟ್ಸ್​ಆಪ್ ಗ್ರೂಪ್ ಮಾಡಿದಾಗ ವ್ಯಾಪಕ ಸ್ಪಂದನೆ ವ್ಯಕ್ತವಾಗಿ ಬಂದ ಪ್ರಸ್ತಾವನೆ (ಪ್ರಪೋಸಲ್) ನೋಡಿದಾಗ ಮರುಮದುವೆ ಆಗಬೇಕೆಂದು ಹೇಳಿಕೊಳ್ಳಲು ಸೂಕ್ತ ವೇದಿಕೆ ಇಲ್ಲವಲ್ಲ ಎಂದು ಅನಿಸಿತು. ಗ್ರಾಮೀಣ ಪ್ರದೇಶಕ್ಕಿಂತಲೂ ನಗರ ಪ್ರದೇಶದಿಂದಲೇ ಮರು ಮದುವೆಗೆ ಹೆಚ್ಚು ಪ್ರಸ್ತಾವನೆ ಬಂದಿತ್ತು ಎಂದರು.

ಆಕಸ್ಮಿಕ ಘಟನೆಗಳಿಂದ ಚಿಕ್ಕ ವಯಸ್ಸಿನಲ್ಲೇ ಪತಿ ಕಳೆದುಕೊಂಡ ಮಹಿಳೆ ಜೀವನವಿಡೀ ಒಂಟಿ ಜೀವನ ನಡೆಸುತ್ತಿದ್ದಾಳೆೆ. ಪಾಲಕರು ಸಂಪ್ರದಾಯಕ್ಕೆ ಕಟ್ಟು ಬಿದ್ದು ಮರುಮದುವೆ ಮಾಡಲು ಹಿಂಜರಿದರೆ ಅತ್ತೆ ಮನೆಯಲ್ಲಿ ಗಮನಹರಿಸುವವರಿಲ್ಲ. ಅಸ್ಪಶ್ಯತೆಯಾದರೆ ಕೆಲವು ಸಮಾಜದವರಿಗೆ ಸೀಮಿತ. ಮರು ವಿವಾಹಕ್ಕೆ ಅವಕಾಶ ಸಿಗದೆ ಮಾನಸಿಕ ನೋವುಣ್ಣುವುದು ಅಸ್ಪಶ್ಯತೆಗಿಂತಲೂ ಕ್ರೂರವಾದುದು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ವೈದ್ಯ ಡಾ.ಕೆ.ಎಂ.ಜೆ.ಮೌನಿ ಮಾತನಾಡಿ, ಮರು ವಿವಾಹ ಇಂದಿನ ಸಮಾಜಕ್ಕೆ ಅಗತ್ಯವಾಗಿದೆ. ಅದರೆ ಹಣಕಾಸು ವ್ಯವಹಾರ ಇಲ್ಲದೆ, ಮಧ್ಯವರ್ತಿಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು. ನಿವೃತ್ತ ಶಿಕ್ಷಕನಾರಾಯಣಪ್ಪ, ವೇದಿಕೆಯ ಸದಸ್ಯರಾದ ರಾಧಾಮಣಿ, ದಲಿತ ಮುಖಂಡ ಟಿ. ವಿಜಯಕುಮಾರ್, ಮುಖಂಡರಾದ ಅಪ್ಪಿ ನಾರಾಯಣಸ್ವಾಮಿ, ಹೂಹಳ್ಳಿ ನಾಗರಾಜ್, ವೆಂಕಟಾಚಲಪತಿ, ಎಚ್.ಶಾಂತ ಇತರರು ಹಾಜರಿದ್ದರು.

ನಾಲ್ಕು ಮರುವಿವಾಹಕ್ಕೆ ವಾಟ್ಸ್​ಅಪ್ ಸೇತುವೆ: ದಲಿತ ಸಂಘರ್ಷ ಸಮಿತಿ ಮರುವಿವಾಹದ ಪ್ರಯತ್ನವನ್ನು ನಡೆಸಿತ್ತಾದರೂ ಚಳವಳಿಯಾಗಿ ಬೆಳೆಸಲಿಲ್ಲ. ಹೀಗಾಗಿ ಮರುವಿವಾಹ ವೇದಿಕೆ ಈ ದಿಸೆಯಲ್ಲಿ ಸಣ್ಣ ಪ್ರಯತ್ನ ಆರಂಭಿಸಿದ್ದು, ಮುಂದೊಂದು ದಿನ ಚಳವಳಿಯಾಗಿ ಮರುಮದುವೆಯ ವಾತಾವರಣ ಮೂಡಬಹುದು ಎಂಬ ಆಶಯ ನಮ್ಮದಾಗಿದೆ. ಈ ದಿಸೆಯಲ್ಲಿ ವೇದಿಕೆ ಬಹಳ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತದೆ. ಮರು ಮದುವೆಯಾಗಲು ಇಚ್ಚಿಸುವವರ ಹೆಸರು, ಭಾವಚಿತ್ರ, ಸ್ಥಳ, ಯಾವುದೂ ನಮಗೆ ಅವಶ್ಯಕತೆಯಿಲ್ಲ. ಸ್ನೇಹಿತರ, ಸಂಬಂಧಿಕರ ಮೊಬೈಲ್ ಸಂಖ್ಯೆ ನೀಡಿದರೂ ಸಾಕು, ಯಾವುದೇ ಫಲಾಪೇಕ್ಷೆಯಿಲ್ಲದೆ ಮಾಹಿತಿ ನೀಡುವ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಡಾ.ಜಿ.ಶಿವಪ್ಪ ಅರಿವು ಹೇಳಿದರು. ವಾಟ್ಸ್​ಅಪ್ ಗ್ರೂಪ್​ಗೆ ಬಂದ ಮಾಹಿತಿ ಆಧಾರದಲ್ಲಿ ವೇದಿಕೆ ಸೇತುವೆಯಾಗಿ ಕೆಲಸ ಮಾಡಿ ನಾಲ್ಕು ಮರುವಿವಾಹಗಳು ನಡೆದಿವೆೆ. ಮರು ವಿವಾಹ ವೇದಿಕೆಯನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

Leave a Reply

Your email address will not be published. Required fields are marked *