ಸಿನಿಮಾ

ಹೊಸ ಚೈತನ್ಯ ತಂದಿರುವ ಜನರ ಅಭಿಮಾನ

ಪಾಂಡವಪುರ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಹುಳ್ಳೇನಹಳ್ಳಿ, ಶಿವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಗುರುವಾರ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಬಿರುಸಿನ ಮತಪ್ರಚಾರ ನಡೆಸಿ ಮತಯಾಚಿಸಿದರು.

ತೆರೆದ ವಾಹನದ ಮೂಲಕ ನೂರಾರು ಯುವಕರೊಂದಿಗೆ ಬೈಕ್ ರ‌್ಯಾಲಿಯಲ್ಲಿ ಸಂಚರಿಸಿದ ಪುಟ್ಟರಾಜು ಅವರನ್ನು ಗ್ರಾಮದ ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಿ ಬರಮಾಡಿಕೊಂಡರು.

ಕ್ಷೇತ್ರದ ಮತದಾರರು ಈ ಹಿಂದಿನಿಂದಲೂ ಅಭಿವೃದ್ಧಿ ಪರವಾಗಿ ಮತ ಚಲಾಯಿಸಿಕೊಂಡು ಬಂದಿದ್ದಾರೆ. ಕಳೆದ ಐದು ವರ್ಷದ ಅವಧಿಯಲ್ಲಿ ಸಾವಿರಾರು ಕೋಟಿ ರೂ. ಅನುದಾನ ತಂದು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಅಭಿವೃದ್ಧಿ ಕಾರ್ಯಗಳು ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿವೆೆ. ಕ್ಷೇತ್ರದ ಜನರು ತೋರುತ್ತಿರುವ ಪ್ರೀತಿ, ಅಭಿಮಾನ ನನ್ನಲ್ಲಿ ಹೊಸ ಚೈತನ್ಯ ಮೂಡಿಸಿದ್ದು, ಜನರ ಪ್ರೀತಿಯೇ ದೊಡ್ಡ ಶಕ್ತಿ ಎಂದರು.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸಣ್ಣ ನೀರಾವರಿ ಇಲಾಖೆ ಸಚಿವನಾಗಿ ಇಡೀ ಕ್ಷೇತ್ರವನ್ನು ನೀರಾವರಿಗೊಳಿಸಿ ಬರಡು ಭೂಮಿಗೆ ನೀರುಣಿಸುವ ಕೆಲಸ ಮಾಡದ್ದೇನೆ. ಮಳೆಯಾಶ್ರಿತ ಪ್ರದೇಶದ ರೈತರು ವರ್ಷವಿಡಿ ವ್ಯವಸಾಯದಲ್ಲಿ ತೊಡಗಿಕೊಳ್ಳುವಂತೆ ಏತ ನೀರಾವರಿ ಯೋಜನೆಯನ್ನು ಅನುಷ್ಠಾಗೊಳಿಸಲಾಗಿದೆ. ಯಾರು ಏನೇ ಅಪಪ್ರಚಾರ ಮಾಡಿದರೂ ಮತದಾರರು ಈ ಚುನಾವಣೆಯಲ್ಲಿ ನನ್ನ ಬೆನ್ನಿಗೆ ನಿಲ್ಲಲ್ಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನುಡಿದಂತೆ ನಡೆದು ನಾಡಿನ ಜನತೆಗೆ ಆಶಯಗಳಿಗೆ ತಕ್ಕಂತೆ ಅಧಿಕಾರ ನಡೆಸಿದ ಏಕೈಕ ವ್ಯಕ್ತಿ ಎಂದರೆ ಅದು ಎಚ್.ಡಿ.ಕುಮಾರಸ್ವಾಮಿ ಅವರು ಮಾತ್ರ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಾರ್ಗದರ್ಶದಲ್ಲಿ ರಾಜ್ಯಾದ್ಯಂತ ನಡೆಸಿದ ಪಂಚರತ್ನ ಯಾತ್ರೆಯ ಯಶಸ್ಸು ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲಿದೆ. ಮುಂದಿನ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದರು.

ಹುಳ್ಳೇನಹಳ್ಳಿ, ಶಿವಳ್ಳಿ ಗ್ರಾಪಂ ವ್ಯಾಪ್ತಿಯ ಜೆಡಿಎಸ್ ಮುಖಂಡರು, ಅಭಿಮಾನಿಗಳು ಹಾಗೂ ಕಾರ್ಯಕರ್ತರು ಇದ್ದರು.

Latest Posts

ಲೈಫ್‌ಸ್ಟೈಲ್