ಹೊಸ ಗುರುಭವನ ನಿರ್ಮಾಣ

ಯಲ್ಲಾಪುರ: ಪಟ್ಟಣದ ನಾಯಕನಕೆರೆಯ ಶ್ರೀ ಶಾರದಾಂಬಾ ದೇವಸ್ಥಾನದ ಆವಾರದಲ್ಲಿ ನೂತನವಾಗಿ ನಿರ್ವಿುಸಿದ ಗುರುಭವನ ಉದ್ಘಾಟನೆ ಕಾರ್ಯಕ್ರಮ ಮಾ. 13 ರಿಂದ 16 ರವರೆಗೆ ವಿವಿಧ ಧಾರ್ವಿುಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಲಿದೆ.

ಯಲ್ಲಾಪುರ ಪಟ್ಟಣದ ನಾಯಕನಕೆರೆಯ ಶ್ರೀ ಶಾರದಾಂಬಾ ದೇವಸ್ಥಾನವನ್ನು 500 ವರ್ಷಗಳಿಗಿಂತಲೂ ಹಿಂದೆ ಕಠಿಣ ತಪಸ್ವಿಗಳಾಗಿದ್ದ ತಮಿಳುನಾಡು ಮೂಲದ ಪೂಜ್ಯ ಆತ್ಮಾನಂದ ಸ್ವಾಮೀಜಿಯವರು ನಾಯಕನಕೆರೆ ಬಳಿ ಸ್ಥಾಪಿಸಿದ್ದರು. ಅವರ ಸಮಾಧಿ ಮತ್ತು ಗುರುಮೂರ್ತಿ ಮಂದಿರ ಕೂಡಾ ದೇವಾಲಯದ ಬಳಿ ಇದೆ. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಸುಂದರ ಸರೋವರವಿದೆ. ದೇವಸ್ಥಾನದ ಆವಾರದಲ್ಲೇ ಶ್ರೀಹನುಮಂತ ದೇವಾಲಯವನ್ನು ಸೋದೆ ಅರಸಪ್ಪ ನಾಯಕ ಸ್ಥಾಪಿಸಿದ್ದಾರೆ ಎನ್ನುವ ಐತಿಹ್ಯವಿದೆ. ಕಾಲಕ್ರಮೇಣ ಶಿಥಿಲಾವಸ್ಥೆಗೆ ತಲುಪಿದ ಶಾರದಾಂಬಾ ದೇವಾಲಯವನ್ನು ವಿಶ್ವಸ್ಥರಾಗಿದ್ದ ರಾಮಕೃಷ್ಣ ಭಟ್ಟ ಹಿಟ್ಟಿನಬೈಲ್ ಅವರು ಪ್ರಮೋದ ಹೆಗಡೆಯವರಿಗೆ ಹಸ್ತಾಂತರಿಸಿದರು. ಸುಮಾರು 15 ವರ್ಷಗಳ ಕಾಲ ದೇವಸ್ಥಾನದ ಎಲ್ಲ ವಿಧಿ-ವಿಧಾನ, ಪೂಜೆ ಉತ್ಸವಗಳನ್ನು ನಡೆಸಿ, ನಂತರ ಪ್ರಮೋದ ಹೆಗಡೆಯವರು ಸ್ವರ್ಣವಲ್ಲೀ ಸಂಸ್ಥಾನಕ್ಕೆ ಸಮರ್ಪಿಸಿದರು.

ಕಳೆದ 2011 ರಲ್ಲಿ ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸ್ವರ್ಣವಲ್ಲೀ ಮಠದ ಶಾಖಾ ಮಠವನ್ನಾಗಿ ಸ್ವೀಕರಿಸಿ, ಅಭಿವೃದ್ಧಿಗೆ ಚಾಲನೆ ನೀಡಿದರು. ಡಿ.ಶಂಕರ ಭಟ್ಟ ಅವರ ನೇತೃತ್ವದಲ್ಲಿ ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಭವ್ಯವಾದ ಶಾರದಾಂಬಾ ಮಂದಿರ ನಿರ್ವಣಗೊಂಡಿತು. ಆವರಣದಲ್ಲಿದ್ದ ಹನುಮಂತನ ದೇವಾಲಯವನ್ನು 18 ಲಕ್ಷ ರೂ. ವೆಚ್ಚದಲ್ಲಿ ಶಂಕರ ಭಟ್ಟ ತಾರೀಮಕ್ಕಿ ನೇತೃತ್ವದಲ್ಲಿ 2016 ರಲ್ಲಿ ಪೂರ್ಣಗೊಳಿಸಲಾಯಿತು.

ಇದೀಗ ಶ್ರೀಗಳಿಗಾಗಿ ಶ್ರೀಮಠದ ಶಿಷ್ಯರು ಶಂಕರ ಭಟ್ಟ ಆನೆಜಡ್ಡಿ ಅವರ ಮುಂದಾಳತ್ವದಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಗುರುಭವನ ನಿರ್ವಿುಸಿದ್ದಾರೆ. ಶ್ರೀಗಳ ಅಪೇಕ್ಷೆಯಂತೆ ಶಂಕರಾಚಾರ್ಯರ ಮೂರ್ತಿಯನ್ನು ಗುರುಭವನದಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. ಮಾ.13 ರ ಸಂಜೆ ಪಟ್ಟಣದ ಶಕ್ತಿ ಗಣಪತಿ ದೇವಸ್ಥಾನದ ಬಳಿಯಿಂದ ಶಂಕರಾಚಾರ್ಯರ ಮೂರ್ತಿಯನ್ನು ಹಾಗೂ ಪೂಜ್ಯ ಶ್ರೀಗಳನ್ನು ಆದರಪೂರ್ವಕವಾಗಿ ಭವ್ಯ ಮೆರವಣಿಗೆಯಲ್ಲಿ ಮತ್ತು ಪೂರ್ಣ ಕುಂಭದೊಂದಿಗೆ ಶಾರದಾಂಬಾ ದೇವಸ್ಥಾನಕ್ಕೆ ಕರೆದೊಯ್ಯಲಾಗುತ್ತಿದೆ.

ಮಾರ್ಚ್ 13, 14, 15, 16 ರಂದು ನಾಲ್ಕು ದಿನಗಳ ಕಾಲ 108 ಪಾದಪೂಜೆ, ಅಥರ್ವಶೀರ್ಷಹವನ, ಗಾಯತ್ರಿಹವನ, ರುದ್ರಹವನ, ಚಂಡಿಹವನ, ಪುರುಷಸೂಕ್ತ ಹವನ, ಶ್ರೀಸೂಕ್ತ ಹವನ, ಮಾತೆಯರಿಂದ ಕುಂಕುಮಾರ್ಚನೆ ಹೀಗೆ ಅನೇಕ ಧಾರ್ವಿುಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.