ಬ್ಯಾಡಗಿ: ನೂತನವಾಗಿ ನಿರ್ವಿುಸಿದ ತಾ.ಪಂ. ಕಾರ್ಯಾಲಯವನ್ನು ಸೆ. 30ರೊಳಗೆ ಉದ್ಘಾಟಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ತಾ.ಪಂ. ಅಧ್ಯಕ್ಷೆ ಸವಿತಾ ಸುತ್ತಕೋಟಿ ಸೂಚಿಸಿದರು.
ಪಟ್ಟಣದ ತಾ.ಪಂ. ಸುವರ್ಣಸೌಧದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ತಾ.ಪಂ.ನ ಹಳೆಯ ಕಟ್ಟಡ ಸೋರುತ್ತಿರುವ ಹಿನ್ನೆಲೆಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡ ನಿರ್ವಿುಸಿದೆ. ಕಟ್ಟಡ ಪೂರ್ಣಗೊಂಡರೂ ವಿವಿಧ ಕಾರಣದಿಂದ ಉದ್ಘಾಟನೆ ಭಾಗ್ಯ ಕೂಡಿಬಂದಿಲ್ಲ. ನೀಲಿನಕ್ಷೆಯಲ್ಲಿರುವ ಎಲ್ಲ ಕೆಲಸಗಳನ್ನು ಬೇಗನೆ ಪೂರ್ಣಗೊಳಿಸಿ ಸೆ. 30ರೊಳಗಾಗಿ ಕಾರ್ಯಾಲಯ ಆರಂಭಿಸಬೇಕು ಎಂದು ಸೂಚಿಸಿದರು.
ಕೆಆರ್ಡಿಎಲ್ ಇಂಜಿನಿಯರ್ ಎಂ. ಮಹೇಂದ್ರಕರ ಪ್ರತಿಕ್ರಿಯಿಸಿ, ಕೆಲ ಸಣ್ಣಪುಟ್ಟ ಕಾಮಗಾರಿಗಳು ಬಾಕಿ ಉಳಿದಿದ್ದು, ಪೂರ್ಣಗೊಳಿಸಿ ಅನುಕೂಲ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ತಾಲೂಕಿನ ಬಹುತೇಕ ಗ್ರಾಮೀಣ ಪ್ರದೇಶದ ರಸ್ತೆಗಳಲ್ಲಿ ಗಿಡಗಂಟಿ ಬೆಳೆದಿದ್ದು, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಕೂಡಲೆ ಜಂಗಲ್ ಕಟಾವು ಮಾಡಬೇಕು ಎಂದು ಲೋಕೋಪಯೋಗಿ ಅಧಿಕಾರಿಗಳಿಗೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಂಜಿನಿಯರ್ ಸುರೇಂದ್ರ ದೊಡ್ಡಮನಿ, ಈಗಾಗಲೇ ಒಂದು ಹಂತದಲ್ಲಿ ಕಾಮಗಾರಿ ಮುಗಿಸಿದ್ದೇವೆ. ಮಳೆ ತೀವ್ರತೆಗೆ ಪುನಃ ಅಲ್ಲಲ್ಲಿ ಬೆಳೆದು ನಿಂತಿದ್ದು, ಇನ್ನೊಮ್ಮೆ ಕಟಾವು ಮಾಡಲಾಗುವುದು ಎಂದರು.
ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಎಲ್ಲ ಅಧಿಕಾರಿಗಳು ಕರೊನಾ ತಡೆಗಟ್ಟುವಲ್ಲಿ ಇನ್ನಷ್ಟು ಜಾಗ್ರತೆ ವಹಿಸಿ. ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಿದಲ್ಲಿ ಮುಂದಿನ ಅನಾಹುತ ತಪ್ಪಿಸಲು ಸಾಧ್ಯವಿದೆ. ತಾಲೂಕಿನ ಬಹುತೇಕ ಕಚೇರಿಗಳಲ್ಲಿ ಅಧಿಕಾರಿಗಳು, ಸಿಬ್ಬಂದಿ ಈ ಕುರಿತು ನಿರ್ಲಕ್ಷ್ಯ ತೋರುತ್ತಿರುವುದು ಗಮನಕ್ಕೆ ಬಂದಿದೆ. ಇನ್ನುಮುಂದೆ ನಿರ್ಲಕ್ಷ್ಯ ಮಾಡಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿ.ಪಂ. ಸದಸ್ಯ ಮುನಾಫ್ಅಲಿ ಎಲಿಗಾರ, ತಾ.ಪಂ. ಇಒ ಎ.ಟಿ. ಜಯಕುಮಾರ, ತಹಸೀಲ್ದಾರ್ ಶರಣವ್ವ ಕಾರಿ, ತಾ.ಪಂ. ಉಪಾಧ್ಯಕ್ಷೆ ಶಾಂತವ್ವ ದೇಸಾಯಿ, ಯಲ್ಲನಗೌಡ್ರ ಕರೆಗೌಡ್ರ, ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.