ಹೊಸ ಐಟಿ ರಿಟರ್ನ್ಸ್​ನಲ್ಲಿ ಏನಿದೆ?

ಸುಳ್ಳು ಮಾಹಿತಿ ನೀಡಿ ಆದಾಯ ತೆರಿಗೆಯಿಂದ ತಪ್ಪಿಸಿಕೊಳ್ಳುವವರನ್ನು ಮಟ್ಟ ಹಾಕಲು ಈ ಬಾರಿ ಆದಾಯ ತೆರಿಗೆ ಇಲಾಖೆ ಐಟಿ ರಿಟರ್ನ್ಸ್  ಫಾರ್ಮ್​ನಲ್ಲಿ ಕೆಲವು ಹೊಸ ಅಂಶಗಳನ್ನು ಸೇರಿಸಿದೆ. ಸುಳ್ಳು ಮಾಹಿತಿ ನೀಡುವವರಿಗೆ ದಂಡದ ಪ್ರಮಾಣವನ್ನೂ ಹೆಚ್ಚಿಸಿದೆ.

| ರಘೂತ್ತಮ ಅರ್ಜುಣಗಿ

ಆದಾಯ ತೆರಿಗೆಯಿಂದ ತಪ್ಪಿಸಿಕೊಳ್ಳುವವರಿಗೆ ಈ ಬಾರಿ ಆದಾಯ ತೆರಿಗೆ ಇಲಾಖೆ ಅಂಕುಶ ಹಾಕಲಿದ್ದು, ಕೆಲ ದಿನಗಳ ಹಿಂದೆ ಎಚ್ಚರಿಕೆಯಂಥ ಮಾರ್ಗದರ್ಶಿಗಳನ್ನು ಬಿಡುಗಡೆ ಮಾಡಿದೆ. ಇದು ನೌಕರಶಾಹಿ, ವೃತ್ತಿಶಾಹಿ ಮತ್ತು ಇತರ ಯಾರೇ ತೆರಿಗೆದಾತರು ಎಚ್ಚೆತ್ತುಕೊಳ್ಳುವಂತಿದೆ. ಇದರಿಂದ ತೆರಿಗೆ ವಿನಾಯಿತಿಗಾಗಿ ಸುಳ್ಳು ಆದಾಯ ಸೃಷ್ಟಿಸಿ ಯಾರು ತಪ್ಪು ದಾರಿ ಹಿಡಿಯುತ್ತಿದ್ದರೋ ಅವರು ನಿದ್ದೆಗೆಡುವಂತಾಗಿದೆ. ಆದಾಯದ ತಪ್ಪು ಮಾಹಿತಿ ನೀಡುವವರ ಚಾಳಿಯನ್ನು ತಡೆಯಲು ಇಲಾಖೆಯು ಸಾಕಷ್ಟು ಬದಲಾವಣೆಗಳನ್ನು ಪ್ರಸಕ್ತ ಮೌಲ್ಯಮಾಪನ ವರ್ಷ (Assessment Year) 2018-19ರಿಂದ ಜಾರಿಗೊಳಿಸಲಿದೆ, ತನ್ಮೂಲಕ ಆದಾಯದ ನಿಖರ ಮಾಹಿತಿಯನ್ನು ಕೇಳಲಿದೆ.

ಈ-ಫೈಲಿಂಗ್​ಗಾಗಿ ತಯಾರಾಗಿರುವ ಹೊಸ ವರ್ಷದ ಹೊಸ ಬದಲಾವಣೆಗಳು ಈ ಕೆಳಗಿನಂತಿವೆ. ವೇತನ ಪಡೆಯುವವರು ಬಳಸುವ ಆದಾಯ ಘೊಷಣಾ ಪತ್ರ-1 (IT Returns)ಅಥವಾ ಸಹಜ ಪತ್ರದಲ್ಲಿ ಸಂಪೂರ್ಣ ಮಾಹಿತಿ ಕೊಡಬೇಕು. ವೇತನದ ಅಂಗಗಳ ಮಾಹಿತಿ ಸೇರಿದಂತೆ, ತೆರಿಗೆ ವಿಧಿಸಬಹುದಾದ ಮತ್ತು ತೆರಿಗೆ ಇಲ್ಲದ ಆದಾಯಗಳ, ಪಡೆದ ಲಾಭಾಂಶ ಮತ್ತು ಬಡ್ಡಿಗಳ ಮಾಹಿತಿ ನೀಡಬೇಕು. ಮನೆಯನ್ನು ಬಾಡಿಗೆ ಕೊಡುವುದರಿಂದ ಪಡೆದ ಆದಾಯ, ಮನೆ ತೆರಿಗೆ ಕಟ್ಟಿದ್ದು ಇವುಗಳ ನಿಖರ ಮಾಹಿತಿಯನ್ನೂ ಕೊಡಬೇಕು.

ಆದಾಯ ಘೊಷಣಾ ಪತ್ರ 4 ಬಳಸುವ ಡಾಕ್ಟರರು, ನ್ಯಾಯವಾದಿಗಳು, ಶಿಲ್ಪಶಾಸ್ತ್ರಜ್ಞರು, ಸಣ್ಣ ಅಂಗಡಿ ಮಾಲೀಕರೇ ಮೊದಲಾದ ವೃತ್ತಿಪರರು ಮತ್ತು ಸಣ್ಣ ವ್ಯಾಪಾರಸ್ಥರು ಮೊದಲು ಒಟ್ಟು ಸಾಲ ಪಡೆದವರ ಮತ್ತು ನಮಗೆ ಸಾಲ ಕೊಟ್ಟವರ, ಸರಕು ದಾಸ್ತಾನದ ಮತ್ತು ನಗದು ಹಣದ ಮಾಹಿತಿಯನ್ನು ನೀಡಬೇಕಿತ್ತು. ಈಗ ಬದಲಾದ ಘೊಷಣಾ ಪತ್ರದಲ್ಲಿ ಒಟ್ಟು ಪಡೆದವರ ಮತ್ತು ಕೊಟ್ಟವರ ಸಾಲಗಳಲ್ಲಿ ಆಸ್ತಿಯಿಂದ ಸುರಕ್ಷಿತವಾದ ಸಾಲ ಮತ್ತು ಅಸುರಕ್ಷಿತ ಸಾಲಗಳ ಮೊತ್ತ, ಸ್ಥಿರಾಸ್ತಿಗಳ, ಬಂಡವಾಳದ ಮಾಹಿತಿಯನ್ನು ನೀಡಬೇಕು.

ಸಣ್ಣ ವ್ಯಾಪಾರಸ್ಥರು ಜಿಎಸ್​ಟಿ ಘೊಷಣಾ ಪತ್ರದಲ್ಲಿ ಕರದಾತರ ಮತ್ತು ವರ್ಷದ ವಹಿವಾಟಿನ ಮಾಹಿತಿ ಒದಗಿಸುವುದು ಕಡ್ಡಾಯವಾಗಿರುವುದರಿಂದ ಈ ಮಾಹಿತಿಯು ಆದಾಯ ತೆರಿಗೆ ಘೊಷಣಾ ಪತ್ರದಲ್ಲಿನ ಮಾಹಿತಿ ಒಂದೇ ಮತ್ತು ಒಬ್ಬರದೇ ಎಂದು ಹೋಲಿಸಿ ನೋಡಲು ಸರಳವಾಗುತ್ತದೆ. ತನ್ಮೂಲಕ ವೇತನ ಪಡೆಯುವ ಕರದಾತರು ತಮ್ಮ ವೇತನ ಮಾಹಿತಿಯನ್ನು ತಿರುಚುವಂತಿಲ್ಲ ಮತ್ತು ವೃತ್ತಿಪರರು ಹಾಗೂ ಸಣ್ಣ ವ್ಯಾಪಾರಸ್ಥರು ತಮ್ಮ ಲೆಕ್ಕಪತ್ರಗಳನ್ನು ಪಾರದರ್ಶಕವಾಗಿಡಲು ಬಲವಂತಪಡಿಸಿದಂತಾಯಿತು. ಅನಿವಾಸಿ ಭಾರತೀಯರಿಗೆ ಪ್ರತ್ಯೇಕ ಆದಾಯ ತೆರಿಗೆ ಘೊಷಣಾಪತ್ರವಿದ್ದು ಅವರ ಆದಾಯ, ಹಣ ವರ್ಗಾವಣೆ, ವಹಿವಾಟುಗಳ ಮತ್ತು ತೆರಿಗೆ ವಂಚನೆಯನ್ನು ಸುಲಭವಾಗಿ ಜಾಡುಹಿಡಿಯಬಹುದು.

ಮತ್ತೊಂದು ದೊಡ್ಡ ಬದಲಾವಣೆ ಪರಿಚಯಿಸಿದ್ದೆಂದರೆ ಈಗ ಕರದಾತರು ಕ್ಯಾಪಿಟಲ್ ಗೇನ್ (ಸ್ಥಿರಾಸ್ತಿಗಳನ್ನು ಮಾರಿ ಗಳಿಸುವ ಲಾಭ) ಬಗ್ಗೆ ಖಚಿತವಾದ ಮಾಹಿತಿ ನೀಡಬೇಕು. ಹೊಸ ಆದಾಯ ಘೊಷಣಾ ಪತ್ರದಲ್ಲಿ ಕ್ಯಾಪಿಟಲ್ ಗೇನ್ ಅಡಿಯಲ್ಲಿ ಪಡೆಯುವ ಎಕ್ಸೆಂಪ್ಷನ್​ಗಳಿಗಾಗಿ (ತೆರಿಗೆ ವಿನಾಯಿತಿ) ಪ್ರತ್ಯೇಕ ಕಾಲಂ ಇದೆ. ಅಂದರೆ ಸೆಕ್ಷನ್ 54, 54ಬಿ, 54ಈಸಿ, 54ಈಈ, 54ಜಿಬಿ ಮತ್ತು 115ಎಫ್​ಗಳಲ್ಲಿ ಪಡೆಯುವ ಎಕ್ಸೆಂಪ್ಷನ್​ನ್ನು ಅವುಗಳ ಕಾಲಂನಲ್ಲಿ ನಮೂದಿಸಿ ಪಡೆಯಬಹುದಾಗಿದೆ. ಅಷ್ಟೇ ಅಲ್ಲದೆ, ಯಾವ ಕರದಾತ ಇವುಗಳನ್ನು ಪಡೆಯತ್ತಾನೋ ಆ ಸ್ಥಿರಾಸ್ತಿಯನ್ನು ವರ್ಗಾಯಿಸಿದ ಅಥವಾ ಮಾರಿದ ದಿನಾಂಕವನ್ನು ಬರೆಯಲೇಬೇಕು. ಇದು ಮೊದಲಿನ ಆದಾಯಘೊಷಣಾ ಪತ್ರದಲ್ಲಿರಲಿಲ್ಲ. ಇದಲ್ಲದೆ, ಅನ್​ಲಿಸ್ಟೆಡ್ ಫಮ್ರ್ (ಯಾವ ಕಂಪನಿಯ ಷೇರುಗಳು ಸೂಚ್ಯಂಕದ ಪಟ್ಟಿಯಲ್ಲಿಲ್ಲ) ತನ್ನ ಕೆಲಸಗಾರರಿಗಾಗಿ ಇರುವ ಷೇರು ಹಂಚಿಕೆಯ ವಿವರಗಳನ್ನು ಪರಿಪೂರ್ಣವಾಗಿ ನೀಡಬೇಕು. ಈ ಅನ್​ಲಿಸ್ಟೆಡ್ ಷೇರುಗಳನ್ನು ಯಾರಾದರೊಬ್ಬ ಕೆಲಸಗಾರನಿಗೆ ಮಾರುಕಟ್ಟೆಯ ಬೆಲೆಗಿಂತ ಕಡಿಮೆ ದರದಲ್ಲಿ ಮಾರಿದರೂ, ಈ ವ್ಯವಹಾರವನ್ನು ಮಾರುಕಟ್ಟೆಯ ದರದಲ್ಲಿಯೇ ಮಾರಲಾಗಿದೆ ಎಂದಿಟ್ಟುಕೊಂಡು ಅದರ ಮೇಲೆ ಆದಾಯ ತೆರಿಗೆ ಕಟ್ಟಬೇಕು. ಕೆಲಸಗಾರರು ತಮ್ಮ ಆದಾಯಘೊಷಣಾ ಪತ್ರವನ್ನು ತೆರಿಗೆ ಇಲಾಖೆಗೆ ಒಪ್ಪಿಸುವಾಗ ಆ ಷೇರುಗಳ ಮೌಲ್ಯಮಾಪನ ವರದಿಯನ್ನೂ ಒಪ್ಪಿಸಬೇಕು. ಇಂತಹ ವಹಿವಾಟುಗಳ ಒಂದೂ ಮಾಹಿತಿ ಬಿಡದೆ ಘೊಷಣಾಪತ್ರದಲ್ಲಿ ವಿವರ ನೀಡಬೇಕು.

ದಂಡ ಅಧಿಕ

ಆದಾಯ ತೆರಿಗೆ ಇಲಾಖೆಯು ಮೊದಲು ಆದಾಯವನ್ನು ಕಡಿಮೆ ತೋರಿಸಿದ್ದರೆ, ಎಷ್ಟು ಕಡಿಮೆ ಆದಾಯ ತೋರಿಸಲಾಗಿದೆಯೋ ಅದರ ಮೇಲಿನ ಆದಾಯ ತೆರಿಗೆಯ ಶೇಕಡ 50ರಷ್ಟು ದಂಡ ವಿಧಿಸುತ್ತಿತ್ತು. ಆ ದಂಡ ಈಗ ಶೇಕಡ 200ರಷ್ಟು ಆಗಲಿದ್ದು, ಸೆಕ್ಷನ್ 234ಬಿ ಮತ್ತು 234ಸಿ ಗಳಡಿಯಲ್ಲಿ ಪ್ರತಿ ತಿಂಗಳು ಶೇಕಡ 1ರಷ್ಟು ವಿಧಿಸಲಾಗುವ ದಂಡಕ್ಕಿಂತ ಅಧಿಕವಾಗಿದೆ.

ಹೊಸ ವಿಚಾರಗಳು

  1. ಹಣ ಅನಾಣ್ಯೀಕರಣಗೊಳಿಸಿ ದಾಗ ಬ್ಯಾಂಕಿನಲ್ಲಿ ಠೇವಣಿ ಇಟ್ಟ ಹಣದ ವಿವರಗಳನ್ನು ಕೊಡಬೇಕಾಗಿಲ್ಲ.
  2. 80 ವರ್ಷ ಹಾಗೂ ಮೇಲ್ಪಟ್ಟವರ ಯಾರ ಆದಾಯ 5 ಲಕ್ಷದವರೆಗಿದೆಯೋ ಅವರು ಆನ್​ಲೈನ್ ಬದಲು ಕಾಗದ ರೂಪದಲ್ಲಿ ತಮ್ಮ ಆದಾಯಘೊಷಣಾ ಪತ್ರವನ್ನು ಇಲಾಖೆಗೆ ನೀಡಬಹುದು.
  3. ಆದಾಯಘೊಷಣಾ ಪತ್ರ 2, 3, ಮತ್ತು 4ಗಳಲ್ಲಿ ಕರದಾತರ ಲಿಂಗವನ್ನು ಹೇಳಲೇಬೇಕೆಂದಿಲ್ಲ.
  4. ಆಧಾರ ಸಂಖ್ಯೆಯ ಕಾಲಂನ್ನು ಹಾಗೇ ಇಟ್ಟುಕೊಂಡಿದ್ದು ಅದು ಕಡ್ಡಾಯವಾಗಿದೆ.

Leave a Reply

Your email address will not be published. Required fields are marked *