ಭದ್ರಾವತಿ: ಶಿವಮೊಗ್ಗ-ಭದ್ರಾವತಿ ನಗರ ಸಾರಿಗೆ ಬಸ್‌ಗಳು ಹೊಸಸಿದ್ದಾಪುರ, ಮಿಲ್ಟ್ರಿ ಕ್ಯಾಂಪ್, ಜಯಶ್ರೀ ವೃತ್ತ ಮಾರ್ಗವಾಗಿ ಸಂಚರಿಸಲು ಶಿವಮೊಗ್ಗ-ಭದ್ರಾವತಿ ಘಟಕ ಅವಕಾಶ ನೀಡಿದೆ. ಪ್ರಯಾಣಿಕರು ಈ ಸಂಚಾರ ವ್ಯವಸ್ಥೆಯ ಅನುಕೂಲ ಪಡೆಯುವಂತೆ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಡದಕಟ್ಟೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿಯ ಎಲ್ಲ ಬಸ್‌ಗಳು ಜಯಶ್ರೀ ವೃತ್ತದ ಮೂಲಕ ಹೊಸಸಿದ್ದಾಪುರ, ಮಿಲ್ಟ್ರೀ ಕ್ಯಾಂಪ್, ಬಿಳಕಿ ಮಾರ್ಗವಾಗಿ ಶಿವಮೊಗ್ಗದಿಂದ ಭದ್ರಾವತಿಗೆ, ಭದ್ರಾವತಿಯಿಂದ ಶಿವಮೊಗ್ಗಕ್ಕೆ ಕಳೆದ 3 ವರ್ಷಗಳಿಂದ ಸಂಚರಿಸುತ್ತಿದ್ದವು. ಇದರಿಂದಾಗಿ ನ್ಯೂಟೌನ್, ಕಾಗದನಗರ, ಉಜ್ಜನೀಪುರ, ಮಿಲ್ಟ್ರಿ ಕ್ಯಾಂಪ್ ಹೊಸಸಿದ್ದಾಪುರ, ಬೊಮ್ಮನಕಟ್ಟೆ ಭಾಗದ ಜನರಿಗೆ ಅನುಕೂಲವಾಗಿತ್ತು. ಕೇವಲ 5ರಿಂದ 10 ರೂ. ಪಾವತಿಸಿ ನಗರ ಪ್ರವೇಶಿಸುತ್ತಿದ್ದರು. ಆಟೋ ರಿಕ್ಷಾದವರು ಕೇಳಿದಷ್ಟು ಹಣ ಕೊಡುವ ಪ್ರಮೇಯ ತಪ್ಪಿಹೋಗಿತ್ತು. ಗಾರ್ಮೆಂಟ್ಸ್, ಡೈರಿ, ಇಂಡಸ್ಟ್ರಿಯಲ್ ಏರಿಯಾ ಸೇರಿದಂತೆ ಶಿವಮೊಗ್ಗಕ್ಕೆ ಕೆಲಸಕ್ಕಾಗಿ ತೆರಳುತ್ತಿದ್ದವರಿಗೆ ಸಮಯ ಹಾಗೂ ಹಣ ಎರಡೂ ಉಳಿತಾಯವಾಗುತ್ತಿತ್ತು.
ಕಡದಕಟ್ಟೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಮುಕ್ತಾಯಗೊಂಡು ಸಂಚಾರಕ್ಕೆ ಮುಕ್ತವಾದ ದಿನದಿಂದ ಈ ಮಾರ್ಗದಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಜಯಶ್ರೀ ವೃತ್ತ ಸೇರಿದಂತೆ ಬೈಪಾಸ್ ರಸ್ತೆಯ ಅಕ್ಕಪಕ್ಕದ ಊರುಗಳ ಸಾರ್ವಜನಿಕರಿಗೆ ಸಾರಿಗೆ ವ್ಯವಸ್ಥೆಯಲ್ಲಾಗುತ್ತಿದ್ದ ಸಮಸ್ಯೆ ಗುರುತಿಸಿ ಬೈಪಾಸ್ ಮಾರ್ಗಕ್ಕೆ ಬೇಕು ಸಿಟಿ ಬಸ್ ಎಂದು ವಿಜಯವಾಣಿ ಪತ್ರಿಕೆಯು ಸುದ್ದಿ ಪ್ರಕಟವಾದ ಹಿನ್ನಲೆಯಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ್ ವರದಿಗೆ ಸ್ಪಂದಿಸಿ ಬೈಪಾಸ್ ಸಿದ್ದಾಪುರ ಮಾರ್ಗವಾಗಿ ಕೆಎಸ್‌ಆರ್‌ಟಿಸಿ ನಗರ ಸಾರಿಗೆ ಬಸ್ ಸಂಚಾರ ಆರಂಭಿಸುವಂತೆ ಇಲಾಖೆಯ ವಿಭಾಗೀಯ ವ್ಯವಸ್ಥಾಪಕರಿಗೆ ಪ್ರಸ್ತಾವನೆ ಸಲ್ಲಿಸಿದ್ದರು.
ಶಾಸಕರ ಪ್ರಸ್ತಾವನೆಗೆ ಸ್ಪಂದಿಸಿರುವ ರಾಜ್ಯ ರಸ್ತೆ ಸಾರಿಗೆ ನಿಗಮ ಶುಕ್ರವಾರದಿಂದ ಬೈಪಾಸ್ ಮಾರ್ಗವಾಗಿ ಬಸ್ ಸಂಚಾರ ಆರಂಭಿಸಿದೆ. ಆ ಭಾಗದ ಸಾರ್ವಜನಿಕರು ಬಳಕೆ ಮಾಡಿಕೊಳ್ಳುವಂತೆ ಪ್ರಕಟಣೆ ಹೊರಡಿಸಿದೆ. ಪ್ರಸ್ತುತ ನಿತ್ಯ 4 ಬಸ್‌ಗಳು ಬೈಪಾಸ್ ಮಾರ್ಗವಾಗಿ ಸಂಚರಿಸುತ್ತಿದ್ದು ಪ್ರಯಾಣಿಕರ ಅನುಕೂಲ ನೋಡಿಕೊಂಡು ವೇಳಾಪಟ್ಟಿ ಸಿದ್ಧಪಡಿಸಲಾಗುವುದು. ಅಲ್ಲದೆ ಆ ಮಾರ್ಗದ ನಿಲ್ದಾಣದಲ್ಲಿ ವೇಳಾಪಟ್ಟಿ ಕೂಡ ಪ್ರಕಟಿಸಲಾಗುವುದು ಎಂದು ನಿಲ್ದಾಣಾಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ.
