More

    ಹೊಸವರ್ಷಾಚರಣೆಗೆ ಖಾಕಿ ಕಟ್ಟೆಚ್ಚರ

    ಹುಬ್ಬಳ್ಳಿ: ಹೊಸ ವರ್ಷಾಚರಣೆ ನಿಮಿತ್ತ ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿ ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಕುಡಿದ ಅಮಲಿನಲ್ಲಿ ಯುವತಿಯರನ್ನು ಚುಡಾಯಿಸುವುದು, ಅಸಭ್ಯವಾಗಿ ವರ್ತಿಸುವುದು ಮಾಡಿದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಆಯುಕ್ತ ಆರ್. ದಿಲೀಪ ಎಚ್ಚರಿಕೆ ನೀಡಿದ್ದಾರೆ.

    ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರತೆಗಾಗಿ 1500ಕ್ಕೂ ಅಧಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಅಲ್ಲಲ್ಲಿ ಬ್ಯಾರಿಕೇಡ್ ಅಳವಡಿಸಲಾಗುವುದು. ಕುಡಿದು ವಾಹನ ಚಲಾಯಿಸುವವರ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಡ್ರಂಕ್ ಆಂಡ್ ಡ್ರೖೆವ್ ಕಂಡು ಬಂದಲ್ಲಿ ಅಂಥವರ ವಾಹನ ಜಪ್ತಿ ಮಾಡಲಾಗುವುದು ಎಂದು ತಿಳಿಸಿದರು.

    ವಿದ್ಯುತ್ ಕಡಿತಗೊಳಿಸದಂತೆ ಹೆಸ್ಕಾಂಗೆ ಸೂಚಿಸಲಾಗಿದೆ. ಅಬಕಾರಿ ಇಲಾಖೆ, ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಜಾಗ್ರತವಾಗಿರುವಂತೆ ಸೂಚಿಸಲಾಗಿದೆ. ಬಡಾವಣೆಗಳಲ್ಲಿ ಕಾರ್ಯಕ್ರಮ ಮಾಡಿ ಮತ್ತೊಬ್ಬರಿಗೆ ತೊಂದರೆ ಕೊಡಬಾರದು. ರೇವ್ ಪಾರ್ಟಿ ಆಯೋಜನೆ, ಮಾದಕ ದ್ರವ್ಯ ಸೇವನೆ, ಗೂಂಡಾಗಿರಿ, ಹಫ್ತಾ ವಸೂಲಿ, ಕಂಡುಬಂದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಅತಿರೇಕದ ವರ್ತನೆಗಳ ಕುರಿತು ದೂರುಗಳಿದ್ದರೆ ಸಾರ್ವಜನಿಕರು ನಮಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

    ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಡಿ.ಎಲ್. ನಾಗೇಶ, ಎಸಿಪಿಗಳಾದ ಶಂಕರ ರಾಗಿ, ಎಂ.ವಿ. ಮಲ್ಲಾಪುರ, ಎಸ್.ಎಂ. ಸಂದಿಗವಾಡ, ವಿವಿಧ ಠಾಣೆಗಳ ಇನ್ಸ್​ಪೆಕ್ಟರ್​ಗಳು ಹಾಗೂ ಸಿಬ್ಬಂದಿ ಇದ್ದರು.

    ಹೋಟೆಲ್ ಮಾಲೀಕರಿಗೆ ಸೂಚನೆ: ಹುಬ್ಬಳ್ಳಿಯಲ್ಲಿ 15 ಹಾಗೂ ಧಾರವಾಡದಲ್ಲಿ 5 ಕಡೆಗಳಲ್ಲಿ ಹೊಸ ವರ್ಷಾಚರಣೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸಂಬಂಧಿಸಿದ ಹೋಟೆಲ್ ಮಾಲೀಕರು ನೈಟ್ ವಿಷನ್ ಸಿಸಿಟಿವಿ ಕ್ಯಾಮರಾ ಅಳವಡಿಸುವುದು, ಬೌನ್ಸರ್​ಗಳನ್ನು ನೇಮಿಸುವುದು ಸೇರಿ ಇನ್ನಿತರ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಮಹಿಳೆಯರಿಗೆ ಸೂಕ್ತ ಭದ್ರತೆ ಒದಗಿಸಬೇಕು. ರಾತ್ರಿ 12.30ಕ್ಕೆ ಕಡ್ಡಾಯವಾಗಿ ಕಾರ್ಯಕ್ರಮ ಮುಗಿಸಬೇಕು. ಮದ್ಯ ಸೇವಿಸುವ ಗ್ರಾಹಕರಿಗೆ ಟ್ಯಾಕ್ಸಿ ಅಥವಾ ಆಟೋ ಸೌಲಭ್ಯ ಒದಗಿಸಬೇಕು ಎಂದು ಸೋಮವಾರ ಹಮ್ಮಿಕೊಂಡ ಹೋಟೆಲ್ ಮಾಲೀಕರ ಸಭೆಯಲ್ಲಿ ಪೊಲೀಸ್ ಆಯುಕ್ತ ಆರ್. ದಿಲೀಪ ಸೂಚಿಸಿದ್ದಾರೆ.

    ಗೋವಾ ರಸ್ತೆಯಲ್ಲಿ ಖಾಕಿ ಗಸ್ತು: ಹೊಸ ವರ್ಷಾಚರಣೆ ನೆಪದಲ್ಲಿ ಕೆಲವರು ಗೋವಾ ಕಡೆಗೆ ಪ್ರವಾಸ ಹೋಗಿ ಕಂಠಪೂರ್ತಿ ಮದ್ಯ ಸೇವಿಸಿ ನಗರದ ಕಡೆಗೆ ಆಗಮಿಸುವ ವೇಳೆ ಅಪಘಾತಗಳು ಸಂಭವಿಸಿರುವ ಉದಾಹರಣೆಗಳಿವೆ. ಹಾಗಾಗಿ, ಗೋವಾ ಸಂರ್ಪಸುವ ರಸ್ತೆಗಳಲ್ಲಿ ಚೆಕ್​ಪೋಸ್ಟ್ ತೆರೆಯಲಾಗಿದ್ದು, ಸಿಬ್ಬಂದಿ 24 ಗಂಟೆಗಳ ಕಾಲ ತಪಾಸಣೆ ನಡೆಸಲಿದ್ದಾರೆ. ವಾಹನಗಳಲ್ಲಿ ಗಸ್ತು ತಿರುಗಲಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

    ವ್ಹೀಲಿಂಗ್ ಮಾಡೀರಾ ಜೋಕೆ: ನಗರದೆಲ್ಲೆಡೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ವ್ಹೀಲಿಂಗ್ ಮಾಡುವುದು, ಅತಿ ವೇಗದ ಸವಾರಿ, ವಾಹನಗಳ ಸೈಲೆನ್ಸರ್ ಪರಿವರ್ತಿಸಿ ಕರ್ಕಶ ಶಬ್ದ ಮಾಡುವುದು ಕಂಡು ಬಂದಲ್ಲಿ ಅಂತಹ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

    ಹೆಚ್ಚುವರಿ ಆಂಬುಲೆನ್ಸ್ ಸೇವೆ

    ದಾರವಾಡ: ಡಿ. 31ರಂದು ರಾತ್ರಿಯಿಡೀ ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ, ಸಂಭಾವ್ಯ ಅಪಘಾತಗಳನ್ನು ಗಮನದಲ್ಲಿಟ್ಟುಕೊಂಡು 108 ಆಂಬುಲೆನ್ಸ್​ನ ಸಿಬ್ಬಂದಿ ಪ್ರತಿ ದಿನಕ್ಕಿಂತಲೂ ಹೆಚ್ಚು ಜನ ಸೇವೆಗೆ ಹಾಜರಾಗಲಿದ್ದಾರೆ. 31ರ ರಾತ್ರಿ 23 ಆಂಬುಲೆನ್ಸ್​ಗಳು ಸಾರ್ವಜನಿಕ ಸೇವೆಗೆ ಲಭ್ಯ ಇರಲಿವೆ. ತುರ್ತು ಸಮಯದಲ್ಲಿ 108 ಸಂಖ್ಯೆಗೆ ಕರೆ ಮಾಡಬಹುದು ಎಂದು ಜಿವಿಕೆ ಜಿಲ್ಲಾ ಮುಖ್ಯಸ್ಥ ಮಹಮ್ಮದ್ ರಫಿ ಅತ್ತಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಡಿವೈಎಸ್​ಪಿ ನೇತೃತ್ವದಲ್ಲಿ ತನಿಖೆಗೆ ಆದೇಶ

    ಧಾರವಾಡ: ನವಲಗುಂದ ಪಟ್ಟಣದಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯನ್ನು ಆಸ್ಪತ್ರೆಯಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿದ ಪ್ರಕರಣವನ್ನು ಡಿವೈಎಸ್​ಪಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ತಿಳಿಸಿದರು.

    ತಮ್ಮ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. 28ರಂದು ಫಕ್ರುಸಾಬ ನದಾಫ್ ಎಂಬಾತ ಅಪ್ರಾಪ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಇದರಿಂದ ಆಕ್ರೋಶಗೊಂಡ ಸಂಬಂಧಿಕರು ಹಾಗೂ ಸಾರ್ವಜನಿಕರು ಫಕ್ರುಸಾಬ ಮೇಲೆ ಹಲ್ಲೆ ನಡೆಸಿದ್ದರು. ತೀವ್ರ ಗಾಯಗೊಂಡಿದ್ದ ಆತನನ್ನು ನವಲಗುಂದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಿ. 29ರಂದು ಆಸ್ಪತ್ರೆಗೆ ತೆರಳಿದ್ದ ಅಪ್ರಾಪ್ತೆಯ ಸಂಬಂಧಿ ಸಂತೋಷ ವಡ್ಡರ ಎಂಬಾತ, ಫಕ್ರುಸಾಬನಿಗೆ 5 ಕಡೆ ಚಾಕುವಿನಿಂದ ಇರಿದಿದ್ದ. ಬಿಡಿಸಲು ಹೋದ ಮುಖ್ಯ ಪೇದೆ ಜಾಧವ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಸಿದ್ದಪ್ಪ ಎಂಬಾತನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ತೀವ್ರ ಗಾಯಗೊಂಡಿದ್ದ ಫಕ್ರುಸಾಬ ಹುಬ್ಬಳ್ಳಿಯ ಕಿಮ್್ಸ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಆರೋಪಿ ಸಂತೋಷನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.

    ಅತ್ಯಾಚಾರಕ್ಕೆ ಯತ್ನಿಸಿದ್ದ ಫಕ್ರುಸಾಬ ತೀವ್ರ ಗಾಯಗೊಂಡಿದ್ದರಿಂದ ಆತನನ್ನು ಪೊಲೀಸ್ ವಶಕ್ಕೆ ಪಡೆಯದೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಆತನ ವಿರುದ್ಧ ಪೋಕ್ಸೋ (ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ) ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ವಿಸõತ ತನಿಖೆಯ ಜವಾಬ್ದಾರಿಯನ್ನು ಡಿಸಿಆರ್​ಬಿ ಡಿವೈಎಸ್ಪಿ ಗುರು ಮತ್ತೂರಗೆ ವಹಿಸಲಾಗಿದೆ. ಪೊಲೀಸ್ ಸಿಬ್ಬಂದಿಯಿಂದ ಲೋಪಗಳಾಗಿದ್ದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಸ್​ಪಿ ವರ್ತಿಕಾ ಸ್ಪಷ್ಟಪಡಿಸಿದರು.

    ರೈಲಿನಲ್ಲಿ ಮಹಿಳೆಯರಿಗೆ ಕಿರುಕುಳ

    ಹುಬ್ಬಳ್ಳಿ: ಮದ್ಯದ ಮತ್ತೇರಿಸಿಕೊಂಡವರು ಮಹಿಳೆಯರನ್ನು ಚುಡಾಯಿಸಿ, ಸಹ ಪ್ರಯಾಣಿಕರಿಂದ ತರಾಟೆಗೆ ಗುರಿಯಾದ ಘಟನೆ ಹುಬ್ಬಳ್ಳಿ-ಹರಿಪ್ರಿಯಾ ಎಕ್ಸ್​ಪ್ರೆಸ್ ರೈಲಿನಲ್ಲಿ ಸೋಮವಾರ ನಡೆದಿದೆ.

    ಹುಬ್ಬಳ್ಳಿಯಿಂದ ರೈಲು ಹೊರಟು ಸುಮಾರು 10 ನಿಮಿಷಗಳ ನಂತರ ಎಸ್ 1 ಬೋಗಿಯಲ್ಲಿದ್ದ ಸರಾಯಿ ಕುಡಿದಿದ್ದ 6 ಯುವಕರು, ಅದೇ ಬೋಗಿಯಲ್ಲಿದ್ದ ಮಹಿಳೆಯರನ್ನು ಚುಡಾಯಿಸಿದರು. ಯುವಕರ ವರ್ತನೆ ಮಿತಿ ಮೀರುತ್ತಿದ್ದಂತೆ ಸಹ ಪ್ರಯಾಣಿಕರು ಯುವಕರನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಎರಡು ಗುಂಪುಗಳ ಮಧ್ಯೆ ವಾಗ್ವಾದ ಪ್ರಾರಂಭಗೊಂಡಿತು.

    ಬೋಗಿಯಲ್ಲಿದ್ದ ಕೆಲ ಪ್ರಯಾಣಿಕರು ಆರ್​ಪಿಎಫ್ ಪೊಲೀಸರಿಗೆ ಫೋನ್ ಮೂಲಕ ದೂರು ನೀಡಿದರು. ರೈಲು ಗದಗ ತಲುಪುತ್ತಿದ್ದಂತೆ ಎಸ್ 1 ಬೋಗಿಗೆ ಬಂದ ಆರ್​ಪಿಎಫ್ ಸಿಬ್ಬಂದಿ, ಯುವಕರಿಗೆ ಎಚ್ಚರಿಕೆ ನೀಡಿ ಬುದ್ಧಿವಾದ ಹೇಳಿದರು. ಬಂಧಿಸಿ, ಪ್ರಕರಣ ದಾಖಲಿಸಿಕೊಂಡರೆ ಅವರ ಭವಿಷ್ಯ ಹಾಳಾಗುತ್ತದೆಂಬ ಕಾರಣಕ್ಕೆ ಈ ರೀತಿಯ ವರ್ತನೆ ಮರುಕಳಿಸದಂತೆ ಎಚ್ಚರಿಕೆ ನೀಡಿದರು. ಯುವಕರು ತಮ್ಮ ತಪ್ಪಿನ ಅರಿವಾಗಿದೆ ಎಂದು ಹೇಳಿದ್ದರಿಂದ ಪೊಲೀಸರು ಅಷ್ಟಕ್ಕೇ ಬಿಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts