ಹೊಸದೊಡ್ಡೀಲಿ ಆನೆಗಳ ದಾಂಧಲೆ

ಕೈಲಾಂಚ: ಹೋಬಳಿಯ ಹೊಸದೊಡ್ಡಿ ಗ್ರಾಮದಲ್ಲಿ ಐದು ಆನೆಗಳು ಗುರುವಾರ ರಾತ್ರಿ ದಾಂಧಲೆ ನಡೆಸಿ ಬೆಳೆ ಹಾಗೂ ನೀರಾವರಿ ಪೈಪ್​ಗಳನ್ನು ನಾಶಪಡಿಸಿವೆ. ಕನಕಪುರ ತಾಲೂಕು ಬೆಟ್ಟದ ಬಾಣಂತ ಮಾರಮ್ಮ ಅರಣ್ಯ ಪ್ರದೇಶದಿಂದ ಕಬ್ಬಾಳು, ಬಿ.ವಿ.ಹಳ್ಳಿ, ನರೀಕಲ್ಲು ಗುಡ್ಡ ಅರಣ್ಯ ಮಾರ್ಗವಾಗಿ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ತೆಂಗಿನಕಲ್ಲು ಅರಣ್ಯ ಸೇರಿಕೊಂಡಿದ್ದವು.

ನೆಲಮಲೆ, ತೆಂಗಿನಕಲ್ಲು, ದೇವರದೊಡ್ಡಿ, ಪೂಜಾರಿದೊಡ್ಡಿ, ಕೆರೆಮೇಗಳದೊಡ್ಡಿ, ಕವಣಾಪುರ ಆಸುಪಾಸಿನಲ್ಲಿ ಬುಧವಾರ, ಗುರುವಾರ ಕಾಣಿಸಿಕೊಂಡಿದ್ದವು. ಅವುಗಳನ್ನು ಹಿಂದಿರುಗಿಸಲು ಅರಣ್ಯ ಇಲಾಖೆ ತೆಂಗಿನಕಲ್ಲು ಕಾಡಿನಿಂದ ಗುರುವಾರ ಮಧ್ಯಾಹ್ನ ಕಾರ್ಯಾಚರಣೆ ಕೈಗೊಂಡಿತ್ತು. ಆದರೆ ಸ್ವಸ್ಥಾನಕ್ಕೆ ಮರಳದ ಆನೆಗಳು ತೆಂಗಿನಕಲ್ಲು ಅರಣ್ಯದ ಅರಳಾಳುಸಂದ್ರ ಆಸುಪಾಸಿನಲ್ಲಿ ಉಳಿದವು. ಆನೆಗಳು ಅರಳಾಳುಸಂದ್ರ ಅರಣ್ಯದಿಂದ ಗುರುವಾರ ರಾತ್ರಿ ಹೊರಬಂದು ಹೊಸದೊಡ್ಡಿ ಗ್ರಾಮದ ಯೋಗೇಶ್, ಕಾಡೇಗೌಡ, ಚಂದ್ರೇಗೌಡ, ಅಪ್ಪಾಜಣ್ಣ, ಸತೀಶ್ ಎಂಬ ರೈತರ ಮಾವಿನ ಮರ, ಮಾವಿನ ಫಸಲು, ತೆಂಗಿನ ಮರಗಳು, ಬೋರ್​ವೆಲ್ ಪರಿಕರ, ನೀರಿನ ಪೈಪ್​ಗಳನ್ನು ನಾಶಪಡಿಸಿವೆ.

ಪರಿಹಾರಕ್ಕೆ ರೈತರ ಆಗ್ರಹ: ಪ್ರತಿದಿನವೂ ಆನೆಗಳ ಭಯದಲ್ಲಿ ಬದುಕಬೇಕಾಗಿದೆ. ಜಮೀನಿನ ಬಳಿ ಕೃಷಿ ಕೆಲಸ ಮಾಡಲು ಭಯಪಡುವಂತಾಗಿದೆ. ವರ್ಷಾನುಗಟ್ಟಲೆ ಬೆಳೆದ ಮಾವು, ತೆಂಗು, ಇತರೆ ಮರಗಿಡಗಳು ಆನೆಗಳ ದಾಳಿಗೆ ನಲುಗುತ್ತಿವೆ. ಅಲ್ಲದೆ ಬೋರ್​ವೆಲ್ ನೀರಿನ ಪರಿಕರಗಳು ನಾಶವಾಗುತ್ತಿವೆ. ಕೂಡಲೇ ಅರಣ್ಯಾಧಿಕಾರಿಗಳು ಆನೆಗಳ ಉಪಟಳ ತಡೆಯಬೇಕು. ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ರೈತರಾದ ರಾಘವೇಂದ್ರ, ಸ್ವಾಮಯ್ಯ, ಮರೀಗೌಡ, ಪುಟ್ಟಸ್ವಾಮಯ್ಯ, ಚಂದ್ರೇಗೌಡ, ಶಿವಕುಮಾರ್, ರಾಜಣ್ಣ, ಲೋಕೇಶ್, ಚಿಕ್ಕೇಗೌಡ ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ್ದ ತಾಲೂಕು ವಲಯ ಅರಣ್ಯ ಅಧಿಕಾರಿ ಮಹಮ್ಮದ್ ಮನ್ಸೂರ್ ಮತ್ತು ತೆಂಗಿನಕಲ್ಲು ಉಪ ವಲಯ ಅರಣ್ಯಾಧಿಕಾರಿ ಚಂದ್ರಾನಾಯಕ್ ನಷ್ಟದ ಮಾಹಿತಿ ಕಲೆಹಾಕಿ ಇಲಾಖೆಯಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಬೇಸಿಗೆ ಆಗಿರುವುದರಿಂದ ದಟ್ಟಾರಣ್ಯಗಳಲ್ಲಿ ಹಸಿರು ಮೇವು, ನೀರಿನ ಕೊರತೆ ಉಂಟಾಗಿದೆ. ಹೀಗಾಗಿ ಆನೆಗಳು ಜಿಲ್ಲೆಯ ಅರಣ್ಯ ಪ್ರದೇಶಗಳಿಗೆ ವಲಸೆ ಬರುತ್ತಿವೆ. ಆನೆಗಳನ್ನು ಸ್ವಸ್ಥಾನಕ್ಕೆ ಸೇರಿಸಲು ಇಲಾಖೆ ಸಿಬ್ಬಂದಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ.

| ಎಂ. ರಾಮಕೃಷ್ಣಪ್ಪ ಎಸಿಎಫ್, ರಾಮನಗರ

 

ಪದೇಪದೆ ಆನೆಗಳು ತೆಂಗಿನಕಲ್ಲು ಅರಣ್ಯಕ್ಕೆ ಲಗ್ಗೆ ಹಿಡುತ್ತಲೇ ಇವೆ ಆನೆಗಳ ದಾಳಿತಡೆಗಟ್ಟಲು ಇದುವರೆಗೂ ಅರಣ್ಯ ಇಲಾಖೆಯಿಂದ ಸಾಧ್ಯವಾಗಿಲ್ಲ ತೆಂಗಿನಕಲ್ಲು್ಲ ಅರಣ್ಯದಲ್ಲಿ ಆನೆಗಳು ಬೀಡುಬಿಟ್ಟಿರುವುದರಿಂದ ಜೀವ ಕೈಯಲ್ಲಿ ಹಿಡಿದು ಕೃಷಿ ಕೆಲಸ ನಿರ್ವಹಿಸಬೇಕಾದ ಸನ್ನಿವೇಶ ತೆಂಗಿನಕಲ್ಲು ಸುತ್ತಮುತ್ತಲ ಭಾಗದ ರೈತರಿಗೆ ಎದುರಾಗಿದೆ.

| ಜಯಣ್ಣ ರೈತ ಮುಖಂಡ, ಹೊಸದೊಡ್ಡಿ