Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಹೊಸತನ್ನು ಸ್ವಾಗತಿಸೋಣ

Thursday, 14.06.2018, 3:03 AM       No Comments

| ರಾಗಿಣಿ

ಕಾಲೇಜು ಆಗ ತಾನೇ ಪ್ರಾರಂಭವಾಗಿತ್ತು. ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳು ಪರಸ್ಪರ ಪರಿಚಯ ಮಾಡಿಕೊಳ್ಳುವಲ್ಲಿ ನಿರತರಾಗಿದ್ದರು. ಒಬ್ಬ ವಿದ್ಯಾರ್ಥಿ ಮಾತ್ರ ಹಿಂದಿನ ಬೆಂಚಿನಲ್ಲಿ ಏನನ್ನೋ ಯೋಚನೆ ಮಾಡುತ್ತ ಕುಳಿತಿದ್ದ. ಉಪನ್ಯಾಸಕರು ಪಾಠಮಾಡಲು ಶುರು ಮಾಡಿದರೂ ಆ ವಿದ್ಯಾರ್ಥಿ ಮಂಕಾಗಿದ್ದ. ಆತನನ್ನು ಸೂಕ್ಷ್ಮವಾಗಿ ಗಮನಿಸಿದ ಉಪನ್ಯಾಸಕರು ನಂತರ ತನ್ನನ್ನು ಭೇಟಿ ಮಾಡಲು ಹೇಳಿದರು. ವಿದ್ಯಾರ್ಥಿ ಬಂದಾಗ, ಉಪನ್ಯಾಸಕರು ‘ನಿನ್ನಲ್ಲಿ ಏನೋ ಸಮಸ್ಯೆ ಇದೆ, ಏನೋ ನೋವು ಕಾಡುತ್ತಿದೆ, ಸ್ನೇಹಿತರನ್ನು ಸೇರಲು ಉತ್ಸಾಹವಿಲ್ಲ, ಹೀಗೇ ಆದರೆ ನೀನು ಪರೀಕ್ಷೆ ಹೇಗೆ ಎದುರಿಸುತ್ತೀ?’ ಎಂದು ಪ್ರಶ್ನಿಸಿದರು. ‘ಸರ್ ನನ್ನ ಕಳೆದುಹೋದ ದಿನಗಳು ತುಂಬ ನೋವಿನಿಂದ ಕೂಡಿದ್ದವು, ಜೀವನದಲ್ಲಿ ಎಲ್ಲವನ್ನೂ ಎಲ್ಲರನ್ನೂ ಕಳೆದುಕೊಂಡೆ. ಈಗ ಸಂಬಂಧಿಕರ ಮನೆಯಲ್ಲಿದ್ದುಕೊಂಡು ಕಾಲೇಜಿಗೆ ಬರುತ್ತಿದ್ದೇನೆ. ಮರೆಯಬೇಕೆಂದುಕೊಂಡರೂ ನೋವಿನ ದಿನಗಳು ನನ್ನ ಬೆಂಬಿಡದೆ ಕಾಡುತ್ತಿವೆ, ಯಾವುದರಲ್ಲೂ ಆಸಕ್ತಿ ಇಲ್ಲ, ಸೋಲುತ್ತಿದ್ದೇನೆ ಎಂದೆನಿಸುತ್ತಿದೆ’ ಎಂದು ವಿದ್ಯಾರ್ಥಿ ಅಳಲು ತೋಡಿಕೊಂಡ. ಉಪನ್ಯಾಸಕರು ವಿದ್ಯಾರ್ಥಿಯನ್ನು ಮನೆಗೆ ಬರಲು ಹೇಳಿದರು.

ಮರುದಿನ ವಿದ್ಯಾರ್ಥಿ ಮನೆಗೆ ಬಂದಾಗ ಉಪನ್ಯಾಸಕರು ‘ಲಿಂಬು ಶರಬತ್ತು ಕುಡಿಯುತ್ತೀಯಾ?’ ಎಂದಾಗ ಹೂಂ ಎಂದ. ಶರಬತ್ತು ತಯಾರಿಸುವ ವೇಳೆ ಬೇಕಂತಲೇ ಉಪ್ಪು ಜಾಸ್ತಿ ಹಾಕಿದರು. ಶರಬತ್ತು ಕುಡಿಯಲು ಪ್ರಾರಂಭಿಸಿದ ಆತ ಒಂದೇ ಗುಟುಕಿಗೆ ಮುಖ ಕಿವುಚಿದ. ‘ನಿನಗೆ ಶರಬತ್ತು ಇಷ್ಟ ಆಗಲಿಲ್ಲವೇ?’ ಎಂದು ಉಪನ್ಯಾಸಕರು ಪ್ರಶ್ನಿಸಿದಾಗ ‘ಶರಬತ್ತು ಚೆನ್ನಾಗಿದೆ, ಆದರೆ ಉಪ್ಪು ಸ್ವಲ್ಪ ಜಾಸ್ತಿಯಾಗಿದೆ’ ಎಂದ. ಉಪನ್ಯಾಸಕರು ‘ಹೌದಾ ಬಿಡು, ಈ ಶರಬತ್ತು ಚೆಲ್ಲಿಬಿಡೋಣ. ಇದರಿಂದ ಉಪಯೋಗವಿಲ್ಲ’ ಎನ್ನುತ್ತಾರೆ. ಆಗ ವಿದ್ಯಾರ್ಥಿ, ‘ಉಪ್ಪು ಜಾಸ್ತಿ ಆದರೇನಂತೆ ಸರ್, ಇದಕ್ಕೆ ಇನ್ನೂ ಸ್ವಲ್ಪ ಸಕ್ಕರೆ, ನೀರು, ಲಿಂಬು ಸೇರಿಸಿ ರುಚಿಯಾಗಿಸೋಣ’ ಎನ್ನುತ್ತಾನೆ. ‘ಈ ಸ್ಥಿತಿಯನ್ನು ನಿನ್ನ ಜೀವನಕ್ಕೆ ಹೋಲಿಸಿನೋಡು, ಶರಬತ್ತಿಗೆ ಉಪ್ಪು ಜಾಸ್ತಿ ಸೇರಿದ್ದನ್ನು ತೆಗೆಯಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ನಿನ್ನ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಅಳಿಸಿಹಾಕಲು ಸಾಧ್ಯವಿಲ್ಲ, ಆದರೆ ಶರಬತ್ತಿನ ಸ್ವಾದ ಸರಿಪಡಿಸಲು ನೀನು ಹೇಗೆ ಸಕ್ಕರೆ ಉಪಯೋಗಿಸುತ್ತೀಯೋ ಹಾಗೆೆಯೇ ನಿನ್ನ ಜೀವನದ ದುಃಖ, ಅಶಾಂತಿಯನ್ನು ಅಳಿಸಲು ನೀನು ಹೊಸತನ್ನು ಸ್ವಾಗತಿಸಬೇಕು, ಹೊಸ ಕನಸು, ಹೊಸ ಗುರಿ, ಹೊಸ ದಾರಿ ಹುಡುಕಬೇಕು’ ಎಂದು ಉಪನ್ಯಾಸಕರು ಹೇಳಿದಾಗ ವಿದ್ಯಾರ್ಥಿಗೆ ಹೌದೆನಿಸಿತು.

ನಾವೂ ಅನೇಕರು ಹೀಗೆಯೇ. ಮುಚ್ಚಿದ ಬಾಗಿಲುಗಳನ್ನು ದಿಟ್ಟಿಸುತ್ತ ಕಾಲ ಕಳೆಯುತ್ತೇವೆಯೇ ಹೊರತು ನಮ್ಮ ಮುಂದಿರುವ ತೆರೆದ ಬಾಗಿಲುಗಳ ಬಗ್ಗೆ ಗಮನ ಹರಿಸುವುದೇ ಇಲ್ಲ. ಎಂದೋ ನಡೆದ ಘಟನೆ, ಅರ್ಧದಲ್ಲೇ ಬಿಟ್ಟ ಕೆಲಸ, ಮನಸ್ಸನ್ನು ಕಾಡುವ ನೋವಿನ ಸಂಗತಿಗಳ ಬಗ್ಗೆಯೇ ಅವಲೋಕಿಸುತ್ತ ಭೂತಕಾಲದಲ್ಲೆ ಇರುತ್ತೇವೆ. ನೆನಪುಗಳು ನೋವಾಗಿ ಕಾಡುವ ಮುನ್ನ ಹೊಸಬೆಳಕು, ಹೊಸಗುರಿ, ಹೊಸ ಆಶಾಭಾವದ ಕನಸುಗಳು ನಗುವಾಗಿ ಬರಲಿ. ಉಜ್ವಲ ಭವಿಷ್ಯಕ್ಕಾಗಿ ಹೊಸತನ್ನು ಸ್ವಾಗತಿಸೋಣ.

(ಲೇಖಕಿ ಹವ್ಯಾಸಿ ಬರಹಗಾರ್ತಿ)

Leave a Reply

Your email address will not be published. Required fields are marked *

Back To Top