ಹೊಸಕೋಟೆ ನಗರಕ್ಕೆ ರೋಗ ಭೀತಿ

ಮಂಜುನಾಥ ಎಸ್.ಸಿ. ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ವೇಗವಾಗಿ ಬೆಳೆಯುತ್ತಿರುವ ಹೊಸಕೋಟೆ ನಗರಕ್ಕೆ ಮೂಲಸೌಕರ್ಯ ಕಲ್ಪಿಸುವಲ್ಲಿ ನಗರಸಭೆ ವಿಫಲವಾಗಿದೆ. ಹಲವು ವರ್ಷಗಳಿಂದ ಮೂಲಸೌಕರ್ಯಕ್ಕೆ ಜನತೆ ಎದುರು ನೋಡುತ್ತಿದ್ದರೂ ಸಮಸ್ಯೆಗೆ ಪರಿಹಾರ ಮರೀಚಿಕೆಯಾಗಿಯೇ ಉಳಿದಿದೆ.

ನಗರದ ನಡುವೆ ಹಾದು ಹೋಗಿರುವ ರಾಜಕಾಲುವೆ ಅವ್ಯವಸ್ಥೆಯೇ ಇಲ್ಲಿನ ಪ್ರಮುಖ ಸಮಸ್ಯೆಗಳಿಗೆ ಕಾರಣ. ಈ ರಾಜಕಾಲುವೆ ಇಡೀ ಹೊಸಕೋಟೆ ನಗರಕ್ಕೆ ಸಾಂಕ್ರಾಮಿಕ ರೋಗ ಹರಡುವ ಕಾರ್ಖಾನೆಯಾಗಿ ಪರಿಣಮಿಸಿದೆ. ರಾಜಕಾಲುವೆ ಸ್ಪಚ್ಛತೆ ಹಾಗೂ ನಿರ್ವಹಣೆಯನ್ನು ಕಡೆಗಣಿಸಿರುವುದರಿಂದ ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ರಾಜಕಾಲುವೆ ಪರಿವರ್ತನೆಯಾಗಿದೆ.

ತೆಗೆದ ಹೂಳು ಮತ್ತೇ ಮೋರಿಗೆ!: ನಗರದಲ್ಲಿನ ಮೋರಿಗಳನ್ನು ಸ್ವಚ್ಛಗೊಳಿಸಲು ಪ್ರತಿ ನಿತ್ಯ ಪೌರ ಕಾರ್ವಿುಕರು ಶ್ರಮಿಸುತ್ತಿದ್ದಾರೆ. ಆದರೆ ಆ ಹೂಳನ್ನು ಸಾಗಿಸಲು ಯಾವುದೇ ಸೌಲಭ್ಯವಿಲ್ಲದ ಪರಿಣಾಮ ಹೊರತೆಗೆದ ಹೂಳು ಮತ್ತೆ ಮೋರಿಗೆ ಸೇರುತಿದೆ. ಮೋರಿಗಳನ್ನು ಸ್ವಚ್ಛಗೊಳಿಸಿ ಕ್ರಿಮಿನಾಶಕ ಸಿಂಪಡಿಸುವುದು ಕನಸಿನ ಮಾತಾಗಿದೆ ಎಂಬ ದೂರು ಕೇಳಿಬರುತ್ತಿದೆ.

ಕೆಲ ಪ್ರಭಾವಿಗಳು ನಗರಸಭೆ ಅಧಿಕಾರಿಗಳನ್ನು ನಿಯಂತ್ರಿಸುತಿದ್ದಾರೆ ಎಂಬ ಆರೋಪ ಕೇಳಿ ಬರುತಿದ್ದು, ಇದರಿಂದ ಅಭಿವೃದ್ಧಿ ಕಾರ್ಯಗಳಲ್ಲಿ ಕಡೆಗಣಿಸಲ್ಪಟ್ಟಿದೆ ಎಂಬ ದೂರು ವ್ಯಕ್ತವಾಗುತ್ತಿದೆ.

ಮನೆಯ ಸುತ್ತಮುತ್ತಲಿನ ಮೋರಿಗಳು ಸ್ವಚ್ಛಗೊಳಿಸದೆ ಈ ಭಾಗದಲ್ಲಿ ದುರ್ವಾಸನೆ ಜತೆಗೆ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಸಾಂಕ್ರಾಮಿಕ ರೋಗ ಹರುಡುತ್ತಿದ್ದು, ಆತಂಕದಲ್ಲೇ ದಿನ ದೂಡುತ್ತಿದ್ದೇವೆ.

| ಗೌರಮ್ಮ, ಕುರುಬರ ಪೇಟೆ ನಿವಾಸಿ

ನಗರಸಭೆ ಅಧಿಕಾರಿಗಳು ಮೋರಿ ಸ್ವಚ್ಛತೆ ಬಗ್ಗೆ ಗಮನ ನೀಡುತ್ತಿಲ್ಲ. ಫಾಗಿಂಗ್​ನಂಥ ವ್ಯವಸ್ಥೆ ಇಲ್ಲವೇ ಇಲ್ಲವಾಗಿದೆ. ನಗರದಲ್ಲಿ ಡೆಂಘಯಂಥ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿದೆ.

| ಡಾ.ಶ್ರೀನಿವಾಸ್, ಹೊಸಕೋಟೆ

ಮೋರಿಗಳಲ್ಲಿ ಸ್ಥಳೀಯರು ಕಸ ಹಾಕುವುದರಿಂದ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಕೂಡಲೇ ಕ್ರಮ ವಹಿಸಲಾಗುವುದು ಹಾಗೂ ಅಧಿಕಾರಿಗಳ ಸಭೆ ಕರೆದು ತುರ್ತಾಗಿ ಕ್ರಮ ಕೈಗೊಳ್ಳಲಾಗುವುದು.

| ನಿಸಾರ್ ಅಹಮದ್, ಆಯುಕ್ತ, ಹೊಸಕೋಟೆ ನಗರ ಸಭೆ.

Leave a Reply

Your email address will not be published. Required fields are marked *