ಹೊಸಕೋಟೆಯಲ್ಲಿ ಟ್ರಾಫಿಕ್ ಕಿರಿಕಿರಿ

 ಹೊಸಕೋಟೆ: ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಟೌನ್​ನಲ್ಲಿ ಸಂಚಾರಿ ಠಾಣೆ ಸ್ಥಾಪಿಸಬೇಕೆಂಬ ಇಲಾಖೆ ಪ್ರಸ್ತಾವನೆಗೆ ಸರ್ಕಾರದಿಂದ ಹಸಿರು ನಿಶಾನೆ ಸಿಕ್ಕಿಲ್ಲ. ಸುಮಾರು 70 ಸಾವಿರ ಜನಸಂಖ್ಯೆಯಿರುವ ತಾಲೂಕಿಗೆ ಟ್ರಾಫಿಕ್ ಠಾಣೆ ಅವಶ್ಯಕತೆ ಬಗ್ಗೆ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ವಿಫಲವಾಗಿದೆ.

ಜಿಲ್ಲೆಯ ನಾಲ್ಕು ತಾಲೂಕುಗಳ ಪೈಕಿ ನೆಲಮಂಗಲ ಹೊರತುಪಡಿಸಿದರೆ ಅತಿವೇಗವಾಗಿ ಬೆಳೆಯುತ್ತಿರುವ ತಾಲೂಕುಗಳಲ್ಲಿ ಹೊಸಕೋಟೆ ಪ್ರಮುಖವಾಗಿದೆ. ಅಪಘಾತಗಳು ಸಾಮಾನ್ಯ ಎನ್ನುವ ಪರಿಸ್ಥಿತಿ ನಿರ್ವಣವಾಗಿದೆ. ರಾಷ್ಟ್ರೀಯ ಹೆದ್ದಾರಿ ಹಾದುಹೋಗಿರುವುದೂ ಸಹ ಇದಕ್ಕೆ ಪ್ರಮುಖ ಕಾರಣವಾಗಿದೆ. ಪ್ರತಿದಿನ ಲಕ್ಷಾಂತರ ವಾಹನ ಸಂಚಾರವಿರುವ ಈ ಭಾಗದಲ್ಲಿ ಸಂಚಾರ ಠಾಣೆ ಪೊಲೀಸರಿಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ. ಅಪಘಾತದ ಭೀತಿಯಲ್ಲೇ ಜನತೆ ರಸ್ತೆ ದಾಟುವ ಸಾಹಸ ನಡೆಸುತ್ತಿದ್ದಾರೆ.

ಅಡ್ಡಾದಿಡ್ಡಿ ರ್ಪಾಂಗ್: ನಗರದ ಕೆಆರ್ ರಸ್ತೆ ಸೇರಿ ಮುಖ್ಯರಸ್ತೆಗಳಲ್ಲೇ ವಾಹನಗಳ ಅಡ್ಡಾದಿಡ್ಡಿ ನಿಲುಗಡೆಯಿಂದ ವಾಹನದಟ್ಟಣೆ ನಿರ್ವಣವಾಗುತ್ತಿದೆ. ಎಲ್ಲಿಯೂ ನಿಗದಿತ ರ್ಪಾಂಗ್ ಸ್ಥಳ ಗುರುತಿಸಿಲ್ಲ. ಶಾಲಾ ಬಸ್​ಗಳು ಟ್ರಾಫಿಕ್​ನಲ್ಲಿ ಸಿಲುಕಿಕೊಂಡು ಸರಿಯಾದ ವೇಳೆಗೆ ಮಕ್ಕಳು ಶಾಲೆಗೆ ತಲುಪದೆ ಪರದಾಡುವ ದೃಶ್ಯ ಸಾಮಾನ್ಯವಾಗಿದೆ. ಆಂಬುಲೆನ್ಸ್​ಗಳಿಗೂ ಜಾಗ ಸಿಗದೆ ತುರ್ತು ಚಿಕಿತ್ಸೆಯಿಂದ ರೋಗಿಗಳು ಪರದಾಡುವಂತಾಗಿದೆ.

ನೆಲಮಂಗಲ, ದೇವನಹಳ್ಳಿ ತಾಲೂಕುಗಳಲ್ಲಿ ಈಗಾಗಲೇ ಸಂಚಾರ ಠಾಣೆಗಳು ಕಾರ್ಯನಿರ್ವಹಿಸುತ್ತಿವೆ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ ಎನ್ನಲಾಗಿದೆ.

ಬೀದಿ ಬದಿ ವ್ಯಾಪಾರಿಗಳ ಕಿರಿಕಿರಿ: ನಗರದಲ್ಲಿ ಸಂಚಾರ ನಿಯಮ ಪಾಲನೆಯಾಗುತ್ತಿಲ್ಲ. ಬೀದಿ ಬದಿ ವ್ಯಾಪಾರಿಗಳು ತಳ್ಳುಗಾಡಿಗಳನ್ನು ರಸ್ತೆಯಲ್ಲಿಯೇ ನಿಲ್ಲಿಸಿಕೊಂಡಿರುತ್ತಾರೆ. ಬೆಳಗ್ಗೆಯಿಂದ ರಾತ್ರಿವರೆಗೆ ರಸ್ತೆಯಲ್ಲಿಯೇ ನಿಲ್ಲಿಸುವುದರಿಂದ ರಸ್ತೆಯ ಅರ್ಧಭಾಗವೇ ಒತ್ತುವರಿಯಾಗಿರುತ್ತದೆ. ಗ್ರಾಹಕರು ವಸ್ತುಗಳನ್ನು ಕೊಳ್ಳಲು ತಳ್ಳುಗಾಡಿ ಬಳಿಯೇ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಸುಗಮ ವಾಹನ ಸಂಚಾರಕ್ಕೆ ಸಂಚಾಕಾರ ಉಂಟಾಗಿದೆ ಎಂದು ಸ್ಥಳೀಯ ವಾಹನ ಚಾಲಕ ಸೋಮಶೇಖರ್ ಆರೋಪಿಸಿದ್ದಾರೆ.

ಟ್ರಾಫಿಕ್ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಪ್ರತ್ಯೇಕ ಠಾಣೆ ತೆರೆಯಲು ಈಗಾಗಲೇ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಪ್ರಸ್ತುತ ಪೊಲೀಸ್ ಸಿಬ್ಬಂದಿಯನ್ನು ವಾಹನದಟ್ಟಣೆ ಪ್ರದೇಶಗಳಲ್ಲಿ ನಿಯೋಜನೆ ಮಾಡಲಾಗುತ್ತಿದೆ.

| ಶಿವರಾಜ್, ವೃತ್ತ ನಿರೀಕ್ಷಕ, ಹೊಸಕೋಟೆ ಠಾಣೆ

ಕೂಡು ರಸ್ತೆಗಳಲ್ಲಿ ಸಿಗ್ನಲ್​ಲೈಟ್​ಗಳಿಲ್ಲದೆ ಏಕಕಾಲಕ್ಕೆ ಎಲ್ಲ ವಾಹನಗಳು ಜಮಾವಣೆಯಾಗಿ ವಾಹನದಟ್ಟಣೆ ನಿರ್ವಣವಾಗುತ್ತಿದೆ. ಸ್ಥಳೀಯ ಪೊಲೀಸರು ವಾಹನ ದಟ್ಟಣೆ ನಿಯಂತ್ರಣಕ್ಕೆ ತರಲು ವಿಫಲಯತ್ನ ನಡೆಸುತ್ತಿದ್ದಾರೆ. ಜೀಬ್ರಾ ಕ್ರಾಸ್, ಸಿಸಿ ಕ್ಯಾಮರಾ ಸೇರಿ ಇಲಾಖೆ ಯಾವುದೇ ವ್ಯವಸ್ಥೆ ಇಲ್ಲದೆ ಹೊಸಕೋಟೆ ಪಟ್ಟಣ ದೊಡ್ಡಿಯಂತಾಗಿದೆ.

| ನವೀನ್, ಸ್ಥಳೀಯ ನಿವಾಸಿ