Friday, 16th November 2018  

Vijayavani

Breaking News

ಹೊಳಪು ಕಳಕೊಂಡ ರೇಷ್ಮೆಗೂಡು!

Wednesday, 11.07.2018, 3:26 AM       No Comments

ರಾಮನಗರ: ಏಷ್ಯ ಖಂಡದಲ್ಲೇ ದೊಡ್ಡ ಮಾರಾಟ ಕೇಂದ್ರವೆಂದು ಖ್ಯಾತಿ ಪಡೆದಿರುವ ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲೀಗ ಬೆಲೆ ಕುಸಿತ ಹಿನ್ನೆಲೆ ರೇಷ್ಮೆಗೂಡು ಹೊಳಪು ಕಳೆದುಕೊಂಡಿದೆ. ಕೆಲ ತಿಂಗಳಿನಿಂದ ಗೂಡಿನ ಬೆಲೆ ಇಳಿಮುಖವಾಗಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

ಜಿಲ್ಲೆ ಒಂದರಲ್ಲೇ ಸುಮಾರು 25 ಸಾವಿರ ಕುಟುಂಬ, 7-8 ಸಾವಿರ ಮಂದಿ ರೀಲರ್ಸ್ ರೇಷ್ಮೆಯನ್ನೇ ನಂಬಿದ್ದಾರೆ. ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಗೂಡಿನ ಬೆಲೆ ಇತ್ತೀಚಿನವರೆಗೂ 400ರಿಂದ 500 ರೂಪಾಯಿ ಆಸುಪಾಸಿನಲ್ಲಿಯೇ ಇರುತ್ತಿತ್ತು. ಆದರೆ ಮೂರ್ನಾಲ್ಕು ತಿಂಗಳಿಂದ 100ರಿಂದ 200ರೂಪಾಯಿಗೆ ಕುಸಿದು ಬೆಳೆಗಾರರಿಗೆ ಸಂಕಷ್ಟ ತರಿಸಿದೆ.

ಏ.1ರಿಂದ ರೇಷ್ಮಗೂಡು ಹೊರತುಪಡಿಸಿ ರೇಷ್ಮೆ ನೂಲಿಗೆ ಜಿಎಸ್​ಟಿ ತೆರಿಗೆ ಹಾಕಲಾಗುತ್ತಿದೆ. ಇದರಿಂದ ರೀಲರ್ಸ್ ಗೂಡು ಖರೀದಿಗೆ ಮುಂದೆ ಬರುತ್ತಿಲ್ಲ. ನೂಲಿನ ಮೇಲೆ ಶೇ.15 ತೆರಿಗೆ ವಿಧಿಸಲಾಗುತ್ತಿದ್ದು, ಇದನ್ನು ಇ-ವೇ ಬಿಲ್ ಮುಖಾಂತರ ವಸೂಲಿ ಮಾಡಲಾಗುತ್ತಿದೆ. ಅಧಿಕ ತೆರಿಗೆಯಿಂದಾಗಿ ರೀಲರ್ಸ್ ಗೂಡು ಕೊಂಡುಕೊಳ್ಳಲು ಮುಂದಾಗದಿರುವುದು ಬೆಲೆ ಕುಸಿತಕ್ಕೆ ಪ್ರಮುಖ ಕಾರಣ ಎಂಬುದು ಅಧಿಕಾರಿಗಳ ವಾದ.

ಆವಕ ಹೆಚ್ಚಳ: ರಾಮನಗರ ಮಾರುಕಟ್ಟೆ ಪ್ರತಿ ದಿನ ಸುಮಾರು 20 ಟನ್ ರೇಷ್ಮೆ ಗೂಡು ಮಾರಾಟ ಮಾಡುವ ಸಾಮರ್ಥ್ಯ ಹೊಂದಿದೆ. ಆದರೆ ಪ್ರಸ್ತುತ ಸುಮಾರು 50 ಟನ್ ಗೂಡು ಬರುತ್ತಿದೆ. ಬೆಳೆಗಾರರು ಗೂಡು ಮಾರಲು ರಾಮನಗರದ ಮಾರುಕಟ್ಟೆಗೆ ಆಗಮಿಸುತ್ತಿರುವುದೂ ಬೆಲೆ ಕುಸಿತಕ್ಕೆ ಇನ್ನೊಂದು ಕಾರಣ.

ಕಚ್ಚಾ ರೇಷ್ಮೆ ಸಂಗ್ರಹ:ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿರುವುದರಿಂದ ರೇಷ್ಮೆ ಗೂಡಿನ ಉತ್ಪಾದನೆ ಹೆಚ್ಚಾಗಿದೆ. ಕಳೆದ ವರ್ಷ ಏಪ್ರಿಲ್​ನಲ್ಲಿ 602.875 ಮೆಟ್ರಿಕ್ ಟನ್ ಇದ್ದ ಗೂಡಿನ ಆವಕ, ಪ್ರಸಕ್ತ ವರ್ಷದ ಏಪ್ರಿಲ್ ಅಂತ್ಯಕ್ಕೆ 1,001.93 ಮೆಟ್ರಿಕ್ ಟನ್ ಇತ್ತು. ಜತೆಗೆ ಕಚ್ಚಾ ರೇಷ್ಮೆಗೆ ಬೇಡಿಕೆ ಕಡಿಮೆ. ರೇಷ್ಮೆ ಬಿಚ್ಚಾಣಿಕೆದಾರರಲ್ಲಿನ ಕಚ್ಚಾ ರೇಷ್ಮೆ ಸಂಗ್ರಹ ಬೆಲೆ ಕುಸಿತಕ್ಕೆ ಕಾರಣ ಎನ್ನಲಾಗುತ್ತಿದೆ.

ಹಣದ ಹರಿವು ಕಡಿಮೆ: ರಾಮನಗರ ರೇಷ್ಮೆ ಮಾರುಕಟ್ಟೆ ನಗದು ಮುಖಾಂತರವೇ ವ್ಯವಹಾರ ನಡೆಸುತ್ತಿದೆ. ರೇಷ್ಮೆ ಹರಾಜಾದ ನಂತರ ಹಣದ ರೂಪದಲ್ಲೇ ವಹಿವಾಟು ನಡೆಸಲು ಬೆಳೆಗಾರರು ಮನಸ್ಸು ಮಾಡುತ್ತಿರುವುದು ಬೆಲೆ ಕುಸಿತಕ್ಕೆ ಇನ್ನೊಂದು ಕಾರಣ. ರೀಲರ್ಸ್​ಗೆ ಪ್ರತಿನಿತ್ಯ 8ರಿಂದ 10 ಲಕ್ಷ ರೂಪಾಯಿ ಅಗತ್ಯವಿದೆ. ಇಲ್ಲಿನ ರೇಷ್ಮೆಯನ್ನು ತಮಿಳುನಾಡಿನ ಕಾಂಚೀವರಂ, ಧರ್ಮವರಂ ಹಾಗೂ ಕೇರಳಕ್ಕೆ ಮಾರುತ್ತಾರೆ. ಅಲ್ಲಿನ ವ್ಯಾಪಾರಿಗಳು ಆನ್​ಲೈನ್ ಮತ್ತು ಚೆಕ್ ಮುಖಾಂತರವೇ ವ್ಯವಹಾರ ನಡೆಸುತ್ತಾರೆ. ಬ್ಯಾಂಕ್​ನಲ್ಲಿ ಚೆಕ್ ನೀಡಿದ ದಿನವೇ ಹಣ ದೊರೆಯುತ್ತಿಲ್ಲ. ಹಣ ಹರಿವಿನ ಕೊರತೆ ರೇಷ್ಮೆ ಬೆಳೆಗಾರನ್ನು ಹೈರಾಣಾಗಿಸಿದೆ.

 

 

 

Leave a Reply

Your email address will not be published. Required fields are marked *

Back To Top